ಹೂಡಿಕೆ ಹಣವನ್ನು ದ್ವಿಗುಣಗೊಳಿಸುವ‘ಟೋಪಿ ಸ್ಕೀಂ’ : 22 ವರ್ಷದ ಯುವಕನಿಂದ ₹2,200 ಕೋಟಿ ಹಗರಣ!

| Published : Sep 05 2024, 12:31 AM IST / Updated: Sep 05 2024, 04:47 AM IST

Stock Market Investments

ಸಾರಾಂಶ

ಜನರ ಹೂಡಿಕೆ ಹಣವನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿ 2,200 ಕೋಟಿ ರೂ. ವಂಚಿಸಿದ್ದ 22 ವರ್ಷದ ವಿಶಾಲ್ ಫುಕನ್‌ನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

ಗುವಾಹಟಿ: ಜನರ ಹೂಡಿಕೆ ಹಣವನ್ನು ದ್ವಿಗುಣಗೊಳಿಸುವ‘ಟೋಪಿ ಸ್ಕೀಂ’ ಜಾರಿಗೊಳಿಸಿ, 2,200 ಕೋಟಿ ರು. ವಂಚನೆ ಮಾಡಿದ್ದ ಬೃಹತ್‌ ಹಗರಣವನ್ನು ಅಸ್ಸಾಂ ಪೊಲೀಸರು ಬಯಲಿಗೆ ಎಳೆದಿದ್ದಾರೆ. ಅಚ್ಚರಿ ಎಂದರೆ ಈ ವಂಚನೆಯ ರೂವಾರಿ ಕೇವಲ 22 ವರ್ಷ ವಯಸ್ಸಿನ ವಿಶಾಲ್‌ ಫುಕನ್‌ ಎಂಬ ಯುವಕ. ಈಗ ಫುಕನ್‌ ಹಾಗೂ ಆತನ ಆಪ್ತ ಸ್ವಪ್ನಿಲ್‌ ದಾಸ್‌ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ದಿಬ್ರುಗಢದ 22 ವರ್ಷದ ವಿಶಾಲ್ ಫುಕನ್ ತನ್ನನ್ನು ತಾನು ಉದ್ಯಮಿ, ಸಂಗೀತಗಾರ, ನಟ ಎಂದು ಗುರುತಿಸಿಕೊಳ್ಳುತ್ತಿದ್ದ. ತನ್ನ ಶ್ರೀಮಂತ ಜೀವನಶೈಲಿಯನ್ನು ಬಳಸಿಕೊಂಡು ಜನರನ್ನು ಈತ ಜನರಿಗೆ ಆಮಿಷ ಒಡ್ಡುತ್ತಿದ್ದ. 4 ನಕಲಿ ಕಂಪನಿಗಳನ್ನು ಸ್ಥಾಪಿಸಿದ್ದ ಈತ, ತನ್ನ ಕಂಪನಿಗಳಲ್ಲಿ 60 ದಿನಗಳ ಅವಧಿಗೆ ಹೂಡಿಕೆ ಮಾಡಿದರೆ ಅದನ್ನು ಷೇರುಪೇಟೆಯಲ್ಲಿ ಹೂಡಿ ಬ್ಯಾಂಕ್‌ಗಳಲ್ಲಿ ಸಿಗುವ ಬಡ್ಡಿಗಿಂತ ದುಪ್ಪಟ್ಟು ಬಡ್ಡಿ ಸಿಗಲಿದೆ ಎಂದು ನಂಬಿಸುತ್ತಿದ್ದ. ಅಲ್ಲದೆ, ಹೂಡಿಕೆಯ ಮೇಲೆ ಶೇ.30ರಷ್ಟು ಲಾಭ ನೀಡುವ ಭರವಸೆ ನೀಡುತ್ತಿದ್ದ.

ಈತನ ಮಾತನ್ನು ನಂಬಿದ ನೂರಾರು ಜನ ಸಾವಿರಾರು ಕೋಟಿ ರು. ಹೂಡಿಕೆ ಮಾಡಿದ್ದರು.ಆದರೆ ಈ ಹಣವನ್ನು ಅಸ್ಸಾಂ ಚಲನಚಿತ್ರೋದ್ಯಮದಲ್ಲಿ ಹೂಡಿಕೆ ಮಾಡಿದ್ದ. ಹಲವು ಆಸ್ತಿಗಳನ್ನು ಸಂಪಾದಿಸಿದ್ದ. ಔಷಧ ಕಂಪನಿ ಸ್ಥಾಪಿಸಿದ್ದ. ಅಲ್ಲದೆ, ಅಸ್ಸಾಮಿ ನೃತ್ಯ ಸಂಯೋಜಕಿ ಸುಮಿ ಬೋರಾಗೆ ಈತ ಕೋಟ್ಯಂತರ ರು. ದುಬಾರಿ ಗಿಫ್ಟ್‌ ನೀಡಿದ್ದ. ಈ ರೀತಿ ಜನರಿಂದ ಸಮಾರಿ 2200 ಕೋಟಿ ರು. ಸಂಗ್ರಹಿಸಿ ಅವರಿಗೆ, ಕೊಟ್ಟ ಭರವಸೆಯಂತೆ ಹಣ ವಾಪಸು ಮಾಡದೇ ತಾನೇ ವೈಭವೋಪೇತ ಜೀವನ ನಡೆಸುತ್ತಿದ್ದ.ಹೀಗಾಗಿ, ‘ವಿಶಾಲ್‌ ಮಾರುಕಟ್ಟೆ ನಿಯಂತ್ರಕ ಸೆಬಿ ನಿಯಮ ಉಲ್ಲಂಘಿಸಿ ವಂಚಕ ಸ್ಕೀಂ ನಡೆಸುತ್ತಿದ್ದಾನೆ’ ಎಂಬ ದೂರು ಪೊಲೀಸರಿಗೆ ಬಂದಿದ್ದವು. ಇದರ ಪ್ರಕಾರ ವಿಶಾಲ್‌ ಹಾಗೂ ಗುವಾಹಟಿಯ ಸ್ವಪ್ನಿಲ್‌ ದಾಸ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಗರಣದಲ್ಲಿ ಪಾಲು ಪಡೆದಿರುವ ನೃತ್ಯ ಸಂಯೋಜಕಿ ಸುಮಿ ಬೋರಾಗೆ ಶೋಧಿಸುತ್ತಿದ್ದಾರೆ.ಈ ನಡುವೆ, ಇಂಥ ಟೋಪಿ ಸ್ಕೀಂಗಳ ಬಲೆಗೆ ಜನರು ಬೀಳಬಾರದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಜನರಿಗೆ ಮನವಿ ಮಾಡಿದ್ದಾರೆ.