ಭಾನುವಾರ ಇಹಲೋಕ ತ್ಯಜಿಸಿದ ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆಯವರಿಗೆ ಮುಂಬೈನ ಶಿವಾಜಿ ಪಾರ್ಕ್ ಸ್ಮಶಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಅಂತಿಮ ವಿದಾಯ ಹೇಳಲಾಯಿತು.- ಸಾವಿರಾರು ಅಭಿಮಾನಿಗಳಿಂದ ಹೃದಯಸ್ಪರ್ಶಿ ವಿದಾಯ
ಮುಂಬೈ: ಭಾನುವಾರ ಇಹಲೋಕ ತ್ಯಜಿಸಿದ ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆಯವರಿಗೆ ಮುಂಬೈನ ಶಿವಾಜಿ ಪಾರ್ಕ್ ಸ್ಮಶಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಅಂತಿಮ ವಿದಾಯ ಹೇಳಲಾಯಿತು.
ಮುಂಬೈನ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ
ಮುಂಬೈನ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಅಭಿಮಾನಿಗಳು ಬಂದು ಕೊನೆಯ ಬಾರಿಗೆ ನೆಚ್ಚಿನ ಗಾಯಕಿಯನ್ನು ಕಣ್ತುಂಬಿಕೊಂಡರು. ಆ ಬಳಿಕ ಶಿವಾಜಿ ಪಾರ್ಕ್‌ಗೆ ಶವಯಾತ್ರೆ ನಡೆಯಿತು. ಈ ವೇಳೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮ ‘ಆಶಾ ತಾಯಿ ಅಮರ್ ರಹೇ’ ಘೋಷಣೆ ಕೂಗಿದರು.
ಸಕಲ ಸರ್ಕಾರಿ ಗೌರವ
ಸಕಲ ಸರ್ಕಾರಿ ಗೌರವಗಳ ಜೊತೆಗೆ, ಹಿಂದೂ ಧಾರ್ಮಿಕ ಪದ್ಧತಿಯಂತೆ ವಿಧಿ ವಿಧಾನಗಳು ನಡೆದವು. ಪುತ್ರ ಆನಂದ್ ಕ್ರಿಯಾವಿಧಿ ನೆರವೇರಿಸಿದರು. ಶಾನ್, ಸುದೇಶ್ ಭೋಸ್ಲೆ, ಅನೂಪ್ ಜಲೋಟಾ ಮೊದಲಾದ ಗಾಯಕರು ಅಗಲಿದ ಗಾಯಕಿಗೆ ಸಂಗೀತದ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.
ಆಶಾ ಅವರ ಸೋದರಿ ಉಷಾ ಮಂಗೇಶ್ಕರ್, ಸೋದರ ಹೃದಯನಾಥ್ ಮಂಗೇಶ್ಕರ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಚಿತ್ರನಟ ಅಮೀರ್ ಖಾನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.