ಸಾರಾಂಶ
ಮುಂಬೈ: ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿಯ ಅಪ್ರಾಪ್ತ ಪುತ್ರ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಇಬ್ಬರನ್ನು ಬಲಿಪಡೆದ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಹೈಪ್ರೊಫೈಲ್ ವ್ಯಕ್ತಿಯ ಪುತ್ರ ಕಾರು ಅಪಘಾತವೆಸಗಿ ಅಮಾಯಕ ಮಹಿಳೆಯನ್ನು ಬಲಿ ಪಡೆದಿದ್ದಾನೆ.
ಶಿವಸೇನೆ ನಾಯಕ (ಏಕನಾಥ್ ಶಿಂಧೆ ಬಣ) ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ (24) ಚಲಾಯಿಸುತ್ತಿದ್ದ ಬಿಎಮ್‌ಡಬ್ಲು ಕಾರು ಹಿಂದಿನಿಂದ ಗುದ್ದಿದ ಪರಿಣಾಮ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೃತಪಟ್ಟಿದ್ದು ಆಕೆಯ ಪತಿ ಗಾಯಗೊಂಡಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಘಟನೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದಾನೆ.ರಾಜೇಶ್ ಹೆಸರಲ್ಲಿ ಕಾರು ನೋಂದಣಿಯಾಗಿರುವ ಕಾರಣ ಅವರನ್ನು ಬಂಧಿಸಲಾಗಿದ್ದು, ಅವರ ಚಾಲಕ ರಾಜ್‌ರಿಷಿ ಬಿದಾವತ್‌ನನ್ನೂ ವಶಕ್ಕೆ ಪಡೆಯಲಾಗಿದೆ.
ಮಿಹಿರ್‌ನನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯನ್ನು ದುರದೃಷ್ಟಕರ ಎಂದಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ವರ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಶಿವಸೇನಾ ನಾಯಕ (ಉದ್ದವ್ ಬಣ) ಆದಿತ್ಯ ಠಾಕ್ರೆ, ಆರೋಪಿಯನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.