- ಪ್ರಮುಖ ಸಂಚುಗಾರ, ಮಾಸ್ಟರ್‌ಮೈಂಡ್‌ ಎಂದು ಪರಿಗಣನೆ

- ಚಿಬ್‌ ವಿರುದ್ಧ 12 ಸೆಕ್ಷನ್‌ ಅಡಿ ಕೇಸ್‌, 3 ವರ್ಷ ಜೈಲು ಸಾಧ್ಯತೆ

- 4 ದಿನ ಪೊಲೀಸ್‌ ವಶಕ್ಕೆ । ಒಟ್ಟು ಬಂಧಿತರ ಸಂಖ್ಯೆ 8ಕ್ಕೆ ಏರಿಕೆ- ಇದು ಪ್ರಜಾಪ್ರಭುತ್ವದ ಕೊಲೆ: ಕಾಂಗ್ರೆಸ್‌ ನಾಯಕರಿಂದ ಆಕ್ಷೇಪ

ಪಿಟಿಐ ನವದೆಹಲಿ

ದೇಶದ ರಾಜಧಾನಿಯ ಭಾರತ ಮಂಟಪಂನಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಎಐ (ಕೃತಕ ಬುದ್ಧಿಮತ್ತೆ) ಶೃಂಗಸಭೆಗೆ ನುಗ್ಗಿದ ಯುವ ಕಾಂಗ್ರೆಸ್ಸಿಗರು, ಶರ್ಟ್‌ ಬಿಚ್ಚಿ ‘ಬನಿಯನ್‌ ಪ್ರತಿಭಟನೆ’ ನಡೆಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಅಧ್ಯಕ್ಷ ಉದಯ್‌ ಭಾನು ಚಿಬ್‌ರನ್ನು ಮಂಗಳವಾರ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.


ಚಿಬ್‌ ಅವರನ್ನು ಪ್ರಮುಖ ಸಂಚುಗಾರ ಹಾಗೂ ಮಾಸ್ಟರ್‌ಮೈಂಡ್‌ ಎಂದು ಪರಿಗಣಿಸಿರುವ ಪೊಲೀಸರು ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಬಂಧಿತರ ಸಂಖ್ಯೆ 8 ಆಗಿದೆ. ಇದಕ್ಕೆ ಕಾಂಗ್ರೆಸ್‌ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ಎಂದಿದೆ.

ಬಂಧನದ ಬೆನ್ನಲ್ಲೇ ದೆಹಲಿ ಕೋರ್ಟ್‌ ಚಿಬ್‌ರನ್ನು 4 ದಿನ ಪೊಲೀಶರ ವಶಕ್ಕೆ ನೀಡಿದೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ(ಬಿಎನ್‌ಎಸ್‌) ಸೆಕ್ಷನ್‌ 196(ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು ಮತ್ತು ಸಾಮರಸ್ಯಕ್ಕೆ ಹಾನಿಕರವಾದ ಕೃತ್ಯ ಮಾಡುವುದು), 197(ರಾಷ್ಟ್ರೀಯ ಏಕೀಕರಣಕ್ಕೆ ಹಾನಿಕರವಾದ ಪ್ರತಿಪಾದನೆ ಮಾಡುವುದು) ಸೇರಿದಂತೆ 12 ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಇದಕ್ಕೆ ಗರಿಷ್ಠ 3 ವರ್ಷಗಳ ವರೆಗೆ ಸೆರೆವಾಸದ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಅತ್ತ ಚಿಬ್‌ರ ಬಂಧನವನ್ನು ಆಕ್ಷೇಪಿಸಿ ಅವರ ಕಡೆಯವರಿಂದ ಪ್ರತಿಭಟನೆ, ಹಿಂಸಾಚಾರ ನಡೆಯುವ ಸಂಭವವಿರುವುದನ್ನು ಕಂಡುಕೊಂಡಿರುವ ಪೊಲೀಸರು, ಚಿಬ್‌ ಬಂಧನವಾದ ತಿಲಕ್‌ ಮಾರ್ಗ್‌ ಪೊಲೀಸ್‌ ಠಾಣೆ ಸೇರಿದಂತೆ ಪ್ರಮುಖ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಎಲ್ಲೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಗಲಭೆ ನಿಗ್ರಹ ತಂಡ, ತ್ವರಿತ ಪ್ರತಿಕ್ರಿಯೆ ತಂಡಗಳು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಚಿಬ್ ಮಾಸ್ಟರ್ ಮೈಂಡ್:

ಪ್ರತಿಭಟನಾಕಾರರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಕ್ಯುಆರ್‌ ಕೋಡ್‌ ಮೂಲಕ ಶೃಂಗವನ್ನು ಪ್ರವೇಶಿಸಿದ್ದರು. ಚಿಬ್‌ ಅವರೇ ಈ ಪ್ರತಿಭಟನೆಯ ಮಾಸ್ಟರ್ ಮೈಂಡ್. ಪ್ರತಿಭಟನೆ ವೇಳೆ ದೇಶ ವಿರೋಧಿ ಘೋಷಣೆ ಕೂಗಿ ದಂಗೆಯ ವಾತಾವರಣ ಸೃಷ್ಟಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಬನಿಯನ್‌ ಪ್ರತಿಭಟನೆಯ ಹಿಂದಿನ ವ್ಯವಸ್ಥಿತ ಸಂಚು ಹಾಗೂ ಅವರಿಗೆ ಹಣಕಾಸಿನ ನೆರವು ನೀಡಿದವರ ಪತ್ತೆಗೆ ತನಿಖೆ ಮುಂದುವರೆದಿದ್ದು, ಸಿಸಿಟೀವಿ ದೃಶ್ಯಾವಳಿ, ಡಿಜಿಟಲ್‌ ಸಾಕ್ಷ್ಯ, ನೋಂದಣಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.ಕಾಂಗ್ರೆಸ್‌ ಕಿಡಿ:

ಚಿಬ್‌ ಬಂಧನವಾಗುತ್ತಿದ್ದಂತೆ ಸಿಡಿದೆದ್ದಿರುವ ಕಾಂಗ್ರೆಸ್‌, ‘ಇದು ಪ್ರಜಾಪ್ರಭುತ್ವದ ಕೊಲೆ’ ಎಂದು ಆರೋಪಿಸಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾತನಾಡಿ, ‘ಈ ಕ್ರಮವು ಸರ್ವಾಧಿಕಾರಿ ಪ್ರವೃತ್ತಿ ಮತ್ತು ಹೇಡಿತನವನ್ನು ಪ್ರತಿಬಿಂಬಿಸುತ್ತದೆ. ತಮ್ಮ ಬಗೆಗಿನ ಅಹಿತಕರ ಸತ್ಯಗಳ ಕಡೆಯಿಂದ ಜನರ ಗಮನವನ್ನು ತಿರುಗಿಸಲು ಪ್ರಧಾನಿ ಮೋದಿ ಹೀಗೆ ಮಾಡಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಜತೆಗೆ, ರಾಜಿ ಮಾಡಿಕೊಂಡ ಪ್ರಧಾನಿ ಹಾಗೂ ರಾಷ್ಟ್ರೀಯ ಹಿತಾಸಕ್ತಿಯ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ಯುವ ಕಾಂಗ್ರೆಸ್ಸಿಗರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯಿಸಿ, ‘ಪ್ರಧಾನಿ ಮೋದಿಯವರು ಟ್ರಂಪ್‌ರ ಷರತ್ತುಗಳಿಗೆಲ್ಲಾ ತಲೆಬಾಗಿ ಶರಣಾಗಿದ್ದಾರೆ. ನಮ್ಮ ರೈತರು ಮತ್ತು ಯುವಕರ ಹಿತಾಸಕ್ತಿಯ ದಿಕ್ಕಿನಲ್ಲಿ ಕೆಲಸ ಮಾಡುವ ಬದಲು ಅವರಿಗೆ ಹಾನಿಯಾಗುವಂತೆ ನಡೆದುಕೊಂಡಿದ್ದಾರೆ’ ಎಂದು ಆಪಾದಿಸಿದ್ದಾರೆ.

ಕೆಲವೆಡೆ ಯುವ ಕಾಂಗ್ರೆಸ್ಸಿಗರು ಶಾಂತಿಯುತ ಸತ್ಯಾಗ್ರಹವನ್ನೂ ನಡೆಸಿದ್ದಾರೆ.