9.14 ಕೋಟಿ ಹಿಂಬಾಲಕರು : ಇನ್ಸ್ಟಾದಲ್ಲಿ ಪ್ರಧಾನಿ ಮೋದಿ ಹಿಂದಿಕ್ಕಿದ ಶ್ರದ್ಧಾ ಕಪೂರ್‌

| Published : Aug 23 2024, 01:03 AM IST / Updated: Aug 23 2024, 05:00 AM IST

ಸಾರಾಂಶ

ಬಾಲಿವುಡ್‌ನ ಖ್ಯಾತ ನಟಿ ಶ್ರದ್ಧಾ ಕಪೂರ್‌ ಇನ್ಸ್ಟಾಗ್ರಾಂನಲ್ಲಿ 91.4 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹಿಂದಕ್ಕೆ ತಳ್ಳಿದ್ದಾರೆ.

ನವದೆಹಲಿ: ಬಾಲಿವುಡ್‌ನ ಖ್ಯಾತ ನಟಿ ಶ್ರದ್ಧಾ ಕಪೂರ್‌ ಇನ್ಸ್ಟಾಗ್ರಾಂನಲ್ಲಿ 91.4 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹಿಂದಕ್ಕೆ ತಳ್ಳಿದ್ದಾರೆ. ಶ್ರದ್ಧಾ ಅಭಿನಯದ ಇತ್ತೀಚಿನ ಚಿತ್ರ ‘ಸ್ತ್ರೀ -2’ ಸೂಪರ್‌ಹಿಟ್‌ ಆದ ಬೆನ್ನಲ್ಲೇ ಅವರ ಹಿಂಬಾಲಕರ ಸಂಖ್ಯೆಯೂ ಹೆಚ್ಚಾಗಿದೆ. ಸದ್ಯ ಮೋದಿ ಅವರಿಗೆ ಇನ್ಸ್ಟಾದಲ್ಲಿ 9.13 ಕೋಟಿ ಹಿಂಬಾಲಕರು ಇದ್ದಾರೆ, ಶ್ರದ್ಧಾಗೆ 9.14 ಕೋಟಿ ಜನರು ಇದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸದ್ಯ ವಿರಾಟ್‌ ಕೊಹ್ಲಿ (27.1 ಕೋಟಿ) ಮತ್ತು ನಟಿ ಪ್ರಿಯಾಂಕಾ ಚೋಪ್ರಾ (9.18 ಕೋಟಿ)ಭಾರತದಲ್ಲಿ ಅತಿ ಹೆಚ್ಚು ಹಿಂಬಾಲಕರ ಹೊಂದಿರುವವರ ಪಟ್ಟಿಯಲ್ಲಿ ಮೊದಲ 2 ಸ್ಥಾನ ಹೊಂದಿದ್ದಾರೆ. ಆದರೆ ಇದರ ಹೊರತಾಗಿಯೂ ಎಕ್ಸ್‌ನಲ್ಲಿ 10.12 ಕೋಟಿ ಹಿಂಬಾಲಕರೊಂದಿಗೆ ಮೋದಿ ಜಗತ್ತಿನ ನಂ.1 ನಾಯಕ ಎಂಬ ಹಿರಿಮೆ ಉಳಿಸಿಕೊಂಡಿದ್ದಾರೆ.

==

ಕಾಂಗ್ರೆಸ್‌, ಎನ್‌ಸಿ ಮೈತ್ರಿ ಅಂತಿಮ: ಆದರೆ ಸೀಟು ಹಂಚಿಕೆ ಕುರಿತು ಬಿಕ್ಕಟ್ಟು

ಶ್ರೀನಗರ: ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಸಂಬಂಧ ಕಾಂಗ್ರೆಸ್‌ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿವೆ. ಜಮ್ಮು ಕಾಶ್ಮೀರದಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗುರುವಾರ ಎನ್‌ಸಿ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾರನ್ನು ಶ್ರೀನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಆ ವೇಳೆ ಉಭಯ ಪಕ್ಷಗಳು ಮೈತ್ರಿ ಖಚಿತಪಡಿಸಿವೆ. ಆದರೆ ಸೀಟು ಹಂಚಿಕೆ ಕುರಿತ ಉಭಯ ಪಕ್ಷಗಳಲ್ಲಿ ಇನ್ನೂ ಭಿನ್ನಾಭಿಪ್ರಾಯ ಹಾಗೆಯೇ ಇದೆ.

==

ತಮಿಳು ನಟ ವಿಜಯ್‌ರ ‘ತಮಿಳಗ ವೆಟ್ರಿ ಕಳಗಂ’ ಪಾರ್ಟಿ ಧ್ವಜ ಅನಾವರಣ

ಚೆನ್ನೈ: ತಮಿಳು ನಟ ವಿಜಯ್‌ ಅವರು ಹೊಸದಾಗಿ ಸ್ಥಾಪಿಸಿದ ‘ತಮಿಳಗ ವೆಟ್ರಿ ಕಳಗಂ’ ರಾಜಕೀಯ ಪಕ್ಷದ ಧ್ವಜವನ್ನು ಗುರುವಾರ ಪನೈಯೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಅನಾವರಣಗೊಳಿಸಿದರು.ಧ್ವಜವು ಎರಡು ಬಣ್ಣಗಳಿಂದ ಕೂಡಿದ್ದು, ಮೇಲ್ಭಾಗ ಮತ್ತು ಕೆಳಭಾಗ ಕೆಂಪುಬಣ್ಣದಿಂದ ಕೂಡಿದೆ. ಮಧ್ಯದಲ್ಲಿ ಹಳದಿ ಬಣ್ಣವಿದೆ. ಈ ಹಳದಿ ಬಣ್ಣದ ಮಧ್ಯೆ ವಾಗೈ ಹೂವಿದ್ದು, ಅದರ ಎರಡೂ ಬದಿಯಲ್ಲೂ ಆನೆಗಳ ಚಿತ್ರಗಳು ಇರುವ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದರು. ಜತೆಗೆ ಪಕ್ಷದ ಗೀತೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಕಳದೆ ಫೆಬ್ರವರಿಯಲ್ಲಿ ವಿಜಯ್‌ ಹೊಸ ಪಕ್ಷವನ್ನು ಸ್ಥಾಪಿಸಿದ್ದರು. 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸುವುದಾಗಿ ಘೋಷಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ ಹಾಗೂ ಯಾವುದೇ ಪಕ್ಷಕ್ಕೆ ಬೆಂಬಲ ಸೂಚಿಸಿರಲಿಲ್ಲ.

==

ಕೇರಳ ವಿಮಾನಕ್ಕೆ ಬಾಂಬ್ ಬೆದರಿಕೆ, ಆತಂಕ

ತಿರುವನಂತಪುರಂ: ದೇಶದಲ್ಲಿ ಹುಸಿ ಬಾಂಬ್ ಬೆದರಿಕೆ ಕರೆ ಮುಂದುವರೆದಿದ್ದು, ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಬಾಂಬ್ ಬೆದರಿಕೆಯ ಸಂದೇಶವೊಂದು ಬಂದಿತ್ತು. ಮುಂಬೈನಿಂದ ಬಂದಿಳಿದಿದ್ದ ಏರಿಂಡಿಯಾ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎನ್ನುವ ಕರೆ ಬಂದಿದ್ದು, ತಪಾಸಣೆ ಬಳಿಕ ಇದೊಂದು ಹುಸಿಬಾಂಬ್ ಕರೆ ಎನ್ನುವುದು ದೃಢವಾಗಿದೆ.ಮುಂಬೈನಿಂದ ತಿರುವನಂತಪುರಂಗೆ ಬಂದಿದ್ದ ಎಐ 657 ವಿಮಾನದಲ್ಲಿ ಬಾಂಬ್ ಇದೆ ಎನ್ನುವ ಸಂದೇಶ ಗುರುವಾರ 7.30 ರ ವೇಳೆಗೆ ಬಂದಿತ್ತು. ವಿಷಯ ಗೊತ್ತಾಗುತ್ತಿದ್ದಂತೆ, ಸುಮಾರು 135 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ತುರ್ತು ಭೂಸ್ಪರ್ಶ ನಡೆಸಲಾಗಿತ್ತು. ವಿಮಾನ ನಿಲ್ದಾಣಕ್ಕೆ ವ್ಯಾಪಕ ಭದ್ರತೆ ಒದಗಿಸಿ ತಪಾಸಣೆ ನಡೆಸಲಾಯಿತು. ಬಾಂಬ್ ನಿಷ್ಕ್ರೀಯ ದಳ, ಭದ್ರತಾ ಸಿಬ್ಬಂದಿಗಳು ಏರಿಂಡಿಯಾದಲ್ಲಿ ತಪಾಸಣೆ ನಡೆಸಿದ ವೇಳೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿಬಾಂಬ್ ಕರೆ ಎನ್ನುವುದು ತಿಳಿದು ಬಂದಿದೆ.

==

20 ಗಿನ್ನೆಸ್ ದಾಖಲೆ: ತೆಂಡೂಲ್ಕರ್ ಹಿಂದಿಕ್ಕಿದ ದಿಲ್ಲಿಯ ವಿನೋದ್‌ ಚೌಧರಿ

ನವದೆಹಲಿ: ಇಲ್ಲಿನ ವಿನೋದ್‌ ಕುಮಾರ್‌ ಚೌಧರಿ (43) 20 ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸುವ ಮೂಲಕ 19 ದಾಖಲೆಗಳನ್ನು ನಿರ್ಮಿಸಿರುವ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರನ್ನು ಹಿಂದಿಕ್ಕಿದ್ದಾರೆ. ವೃತ್ತಿಯಲ್ಲಿ ಕಂಪ್ಯೂಟರ್ ತರಬೇತುದಾರ ಹಾಗೂ ಜೆಎನ್‌ಯುನ ಮಾಜಿ ಉದ್ಯೋಗಿಯಾಗಿರುವ ವಿನೋದ್‌ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು, ಮೌತ್‌ ಸ್ಟಿಕ್‌ ಬಳಸಿ ಹಾಗೂ ಮೂಗಿನ ಸಹಾಯದಿಂದ ಅತಿ ವೇಗವಾಗಿ ಟೈಪ್‌ ಮಾಡಿ ಅನೇಕ ದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇತ್ತೀಚೆಗೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಐದು ಸೆಕೆಂಡಿನಲ್ಲಿ ಆಂಗ್ಲ ವರ್ಣಮಾಲೆಯನ್ನು ಹಿಂದಿನಿಂದ ಟೈಪಿಸಿ ದಾಖಲೆ ನಿರ್ಮಿಸಿದ್ದಾರೆ. ಸಚಿನ್‌ ತಮ್ಮ ಬಾಲ್ಯದ ಆದರ್ಶ ಎಂದಿರುವ ಚೌಧರಿ ಅವರ ಕೈಯಿಂದಲೇ 20ನೇ ಗಿನ್ನೆಸ್‌ ದಾಖಲೆ ಪಡೆಯುವ ಬಯಕೆ ವ್ಯಕ್ತಪಡಿಸಿದ್ದು, ಒಬ್ಬ ಭಾರತೀಯ ತನ್ನನ್ನು ಮೀರಿಸಿದ್ದು ಕಂಡು ಅವರಿಗೂ ಹೆಮ್ಮೆಯೆನಿಸಬಹುದು ಎಂದಿದ್ದಾರೆ.