₹8000 ಕೋಟಿ ಇದೆ, ಏಪ್ರಿಲಲ್ಲಿ ಕೊಡ್ತೀನಿ : ಕೈ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಭರವಸೆ

| N/A | Published : Mar 11 2025, 12:46 AM IST / Updated: Mar 11 2025, 04:38 AM IST

ಸಾರಾಂಶ

ಮುಖ್ಯಮಂತ್ರಿ ವಿವೇಚನಾ ಕೋಟಾದಲ್ಲಿ ಲಭ್ಯವಿರುವ 8000 ಕೋಟಿ ರು. ಅನುದಾನದಿಂದ ಏಪ್ರಿಲ್‌ ಬಳಿಕ ಶಾಸಕರ ಕ್ಷೇತ್ರಾಭಿವೃದ್ಧಿ ಕಾರ್ಯಗಳಿಗೆ ಸೂಕ್ತ ಅನುದಾನ ನೀಡುವುದಾಗಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಶಾಸಕರಿಗೂ ಭರವಸೆ ನೀಡಿದ್ದಾರೆ.

  ಬೆಂಗಳೂರು : ಮುಖ್ಯಮಂತ್ರಿ ವಿವೇಚನಾ ಕೋಟಾದಲ್ಲಿ ಲಭ್ಯವಿರುವ 8000 ಕೋಟಿ ರು. ಅನುದಾನದಿಂದ ಏಪ್ರಿಲ್‌ ಬಳಿಕ ಶಾಸಕರ ಕ್ಷೇತ್ರಾಭಿವೃದ್ಧಿ ಕಾರ್ಯಗಳಿಗೆ ಸೂಕ್ತ ಅನುದಾನ ನೀಡುವುದಾಗಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಶಾಸಕರಿಗೂ ಭರವಸೆ ನೀಡಿದ್ದಾರೆ.

ನಗರದಲ್ಲಿ ಸೋಮವಾರ ನಡೆದ ಸಿಎಲ್‌ಪಿ ಸಭೆಯಲ್ಲಿ, ಮುಖ್ಯಮಂತ್ರಿಗಳ ಅಭಿವೃದ್ಧಿ ನಿಧಿಯಲ್ಲಿ 8000 ಕೋಟಿ ರು. ಇದೆ. ಬಜೆಟ್ ನಲ್ಲಿ ಎಲ್ಲವನ್ನೂ ಬರೆಯಲು ಸಾಧ್ಯವಿಲ್ಲ. ಆದ್ದರಿಂದ ಬಜೆಟ್‌ನಲ್ಲಿ ತಮ್ಮ ಕ್ಷೇತ್ರದ ಹೆಸರು ಉಲ್ಲೇಖ ಆಗಿಲ್ಲ ಎಂದು ಯಾರೂ ಧೈರ್ಯಗುಂದುವ ಅಗತ್ಯ ಇಲ್ಲ. ಏಪ್ರಿಲ್‌ ಬಳಿಕ ಈ ಅನುದಾನವನ್ನು ಶಾಸಕರ ಕ್ಷೇತ್ರಾಭಿವೃದ್ಧಿ ಕಾರ್ಯಗಳಿಗೆ ಅಗತ್ಯಕ್ಕೆ ಅನುಸಾರ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.

ಇದೇ ವೇಳೆ, ನಮ್ಮ ಬಜೆಟ್‌ ಬಗ್ಗೆ ಬಿಜೆಪಿಯವರು ಹೆಚ್ಚು ಸಾಲ ಮಾಡಲಾಗಿದೆ, ಮುಸ್ಲಿಮರನ್ನು ಓಲೈಸಲಾಗಿದೆ ಎಂದು ಬುರುಡೆ ಬಿಡುತ್ತಿದ್ದಾರೆ. ಇದು ಪರಮ ಸುಳ್ಳು

ಎಂದು ನೀವು ಅಂಕಿ-ಅಂಶಗಳನ್ನಿಟ್ಟುಕೊಂಡು ಗಟ್ಟಿ ದನಿಯಲ್ಲಿ ಅವರ ಆರೋಪಗಳಿಗೆ ಸದನದಲ್ಲಿ ಹಾಗೂ ಹೊರಗೆ ಪ್ರತ್ಯುತ್ತರ ನೀಡಿ ಎಂದು ಮುಖ್ಯಮಂತ್ರಿಯವರು ಶಾಸಕರುಗಳಿಗೆ ತಾಕೀತು ಮಾಡಿದರು ಎಂದು ತಿಳಿದುಬಂದಿದೆ.

ನಾನು ಉತ್ತಮ ಬಜೆಟ್‌ ಮಂಡಿಸಿದ್ದೇನೆ. ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಗೂ ಅನುದಾನ ನೀಡಿ, ಅಭಿವೃದ್ಧಿ ಕಾರ್ಯಗಳಿಗೂ ಸೂಕ್ತ ಅನುದಾನ ಒದಗಿಸಿದ್ದೇನೆ. ಎಲ್ಲೂ ಕೂಡ ಆರ್ಥಿಕ ಶಿಸ್ತು ಮೀರದಂತೆ ನೋಡಿಕೊಳ್ಳಲಾಗಿದೆ. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಸೇರಿ ಎಲ್ಲ ವರ್ಗವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್‌ ರೂಪಿಸಲಾಗಿದೆ. ಇಂತಹ ಬಜೆಟ್‌ ಅನ್ನು ಬಿಜೆಪಿ ಮತ್ತು ಜೆಡಿಎಸ್‌ನವರನ್ನು ಬಿಟ್ಟು ಉಳಿದವರೆಲ್ಲರೂ ಹೊಗಳುತ್ತಿದ್ದಾರೆ. ಪ್ರತಿಪಕ್ಷದವರ ಟೀಕೆಗಳಿಗೆ ತಕ್ಕ ಉತ್ತರ ನೀಡಿ ಎಂದು ಶಾಸಕರಿಗೂ ಸೂಚಿಸಿದರು ಎಂದು ಮೂಲಗಳು ಹೇಳಿವೆ.

ಎಲ್ಲಾ ಇಲಾಖೆಗಳಿಗೂ ಈ ಬಾರಿಯ ಬಜೆಟ್‌ನಲ್ಲಿ ಕಳೆದ ಬಾರಿಯ ಬಜೆಟ್‌ಗಿಂತ ಹೆಚ್ಚು ಹಣ ಕೊಟ್ಟಿದ್ದೇವೆ. ನೀರಾವರಿಗೆ ಒಟ್ಟು 3 ಸಾವಿರ ಕೋಟಿ ರು. ಗೂ ಹೆಚ್ಚು ಕೊಟ್ಟಿದ್ದೇವೆ. ಬೆಂಗಳೂರು ಅಭಿವೃದ್ಧಿಗೂ ಕಳೆದ ಬಜೆಟ್‌ಗಿಂತ ಈ ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡಿದ್ದೇವೆ. ಆದ್ದರಿಂದ ಬಜೆಟ್‌ ಪುಸ್ತಕವನ್ನು ಮತ್ತೊಮ್ಮೆ ಓದಿಕೊಂಡು ಅಧಿವೇಶನದಲ್ಲಿ ಪರಿಣಾಮಕಾರಿಯಾಗಿ ವಿಷಯ ಮಂಡಿಸಿ. ಆರ್ಥಿಕ ಶಿಸ್ತು ಮೀರಿಲ್ಲ. ಇರುವ ಅವಕಾಶಕ್ಕಿಂತ ಕಡಿಮೆ ಸಾಲ ಮಾಡಿದ್ದೇವೆ. ಆದರೂ ಬಿಜೆಪಿ ಸಾರ್ವಜನಿಕವಾಗಿ ಸುಳ್ಳು ಹೇಳುತ್ತಾ ತಪ್ಪು ಮಾಹಿತಿ ನೀಡುತ್ತಿದೆ. ಇದನ್ನು ಜನರಿಗೆ ತಿಳಿಸಬೇಕು ಎಂದು ತಿಳಿಸಿದರು ಎಂದು ಮೂಲಗಳು ಹೇಳಿವೆ.

ಸಚಿವರ ಧೋರಣೆ ಬಗ್ಗೆ ಮತ್ತೆ ಶಾಸಕರು ಗರಂ

ಕನ್ನಡಪ್ರಭ ವಾರ್ತೆ, ಬೆಂಗಳೂರುಶಾಸಕರ ಬಗ್ಗೆ ಸಚಿವರು ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. ನಮ್ಮ ಮನವಿ, ಅಹವಾಲುಗಳನ್ನು ಸಚಿವರು ಪರಿಗಣಿಸುತ್ತಿಲ್ಲ ಎಂದು ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ವಿವಿಧ ಶಾಸಕರು ಮುಖ್ಯಮಂತ್ರಿಯವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿದ್ದರೂ ಕೆಲವು ಸಚಿವರು ತಮ್ಮ ಕಚೇರಿಗೆ ಬಂದ ಶಾಸಕರನ್ನು ಗುರುತಿಸುವ ಕೆಲಸವನ್ನೂ ಮಾಡುತ್ತಿಲ್ಲ. ನಮ್ಮ ಮನವಿ, ಅಹವಾಲುಗಳಿಗೆ ಆಯಿತು, ನೋಡೋಣ, ಮಾಡೋಣ ಎನ್ನುವ ಹಾರಿಕೆ ಉತ್ತರ ನೀಡಿ ಕಳುಹಿಸುತ್ತಾರೆ. ಮತ್ತೆ ನಾವು ಆ ಬಗ್ಗೆ ಕೇಳಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ದೂರಿದರು ಎಂದು ತಿಳಿದು ಬಂದಿದೆ.ಲೋಕೋಪಯೋಗಿ ಇಲಾಖೆ ಸೇರಿದಂತೆ ಇನ್ನು ಕೆಲವು ಇಲಾಖೆಗಳ ಸಚಿವರಂತೂ ಪ್ರತಿಪಕ್ಷದವರಿಗೆ ನೀಡುವಷ್ಟು ಮಾನ್ಯತೆಯನ್ನೂ ಸ್ವಪಕ್ಷೀಯ ಶಾಸಕರಿಗೆ ನೀಡುತ್ತಿಲ್ಲ ಎಂದು ದೂರಿದ್ದಾರೆ.

ವರ್ಗಾವಣೆಗೆ ಕೌನ್ಸೆಲಿಂಗ್‌ ಪದ್ಧತಿ ಬೇಡ:ಕಂದಾಯ ಇಲಾಖೆಯ ಪಿಡಿಒ ಮತ್ತು ಉಪನೋಂದಣಾಧಿಕಾರಿಗಳ ವರ್ಗಾವಣೆಯ ಕೌನ್ಸೆಲಿಂಗ್‌ ಸಮರ್ಪಕವಾಗಿ ನಡೆಯುತ್ತಿಲ್ಲ. ಹಾಗಾಗಿ, ಕೌನ್ಸೆಲಿಂಗ್‌ ಬದಲು ಈ ಹಿಂದೆ ಇದ್ದಂತೆ ಶಾಸಕರ ಶಿಫಾರಸ್ಸು ಆಧಾರದಲ್ಲಿ ನಡೆಸುವ ಪದ್ಧತಿ ಮರು ಜಾರಿ ಮಾಡಬೇಕೆಂದು ಸಭೆಯಲ್ಲಿ ಶಾಸಕರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.