ರಾಜ್ಯದ ಕಾಂಗ್ರೆಸ್‌ ಸರ್ಕಾರದಿಂದ ಹಲಾಲ್‌ ಬಜೆಟ್‌ : ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿ

| N/A | Published : Mar 11 2025, 12:49 AM IST / Updated: Mar 11 2025, 01:04 PM IST

ರಾಜ್ಯದ ಕಾಂಗ್ರೆಸ್‌ ಸರ್ಕಾರದಿಂದ ಹಲಾಲ್‌ ಬಜೆಟ್‌ : ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಹೇಳಿ, ಕೇವಲ ಒಂದು ಸಮುದಾಯದ ಓಲೈಕೆ ಮಾಡಿ ತುಷ್ಟೀಕರಣದ ಬಜೆಟ್ ಮಂಡಿಸಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು.

ಹಾವೇರಿ: ಕಾಂಗ್ರೆಸ್‌ ಸರ್ಕಾರ ಮಂಡಿಸಿದ ಬಜೆಟ್‌ ಹಲಾಲ್‌ ಬಜೆಟ್‌ ಆಗಿದೆ ಎಂದು ಆರೋಪಿಸಿ ಹಾಗೂ ಜಿಲ್ಲೆಗೆ ಬಜೆಟ್‌ನಲ್ಲಿ ಯಾವುದೇ ಕೊಡುಗೆ ನೀಡದಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಸೋಮವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಿ.ಬಿ. ರಸ್ತೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಬಂದು ಸಮಾವೇಶಗೊಂಡಿತು. ಅಲ್ಲಿ ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ಜನವಿರೋಧಿ ಬಜೆಟ್ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಹೇಳಿ, ಕೇವಲ ಒಂದು ಸಮುದಾಯದ ಓಲೈಕೆ ಮಾಡಿ ತುಷ್ಟೀಕರಣದ ಬಜೆಟ್ ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಹಾವೇರಿ ಜಿಲ್ಲೆಗೆ ಖಾಲಿ ಚಿಪ್ಪು ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಆರು ಜನ ಕಾಂಗ್ರೆಸ್ ಶಾಸಕರಿದ್ದರೂ ಹೆಚ್ಚಿನ ಅನುದಾನ ತರುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.

 ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಡಿಮೆ ದರದಲ್ಲಿ ರೈತರಿಗೆ ಸ್ಪ್ರಿಂಕ್ಲರ್ ಪೈಪ್, ಟಿಸಿಗಳನ್ನು ಕೊಟ್ಟಿದ್ದೆವು. ಈ ಸರ್ಕಾರದಲ್ಲಿ ಒಂದು ಸೆಟ್ ಸ್ಪ್ರಿಂಕ್ಲರ್ ಪೈಪ್‌ಗೆ ₹4500 ಕಟ್ಟಬೇಕು. ಟಿಸಿ ಪಡೆಯಬೇಕಾದರೆ ₹3ರಿಂದ ₹4 ಲಕ್ಷ ಕಟ್ಟಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಮಹಿಳೆಯರಿಗೆ ಫ್ರೀ ಕೊಟ್ಟು, ಪುರುಷರಿಂದ ಮೂರು ಪಟ್ಟು ಬಸ್ ಚಾರ್ಜ್ ವಸೂಲಿ ಮಾಡುತ್ತಿದ್ದಾರೆ. ಸರ್ಕಾರ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸ್ಥಗಿತಗೊಂಡಿರುವ ನೀರಾವರಿ ಯೋಜನೆ, ರಸ್ತೆ ಕಾಮಗಾರಿಗಳನ್ನು ಮರುಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಬಜೆಟ್‌ನಲ್ಲಿ ಜಿಲ್ಲೆಯ ಆರು ಶಾಸಕರು ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ತೋರಿಸಬೇಕು. ಬಿಜೆಪಿ ಸರ್ಕಾರದ ನೀರಾವರಿ ಕಾಮಗಾರಿಗಳು ಹಾಗೆಯೇ ನಿಂತಿವೆ. ರೈತರು ನರಳುವಂತ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಜಿಲ್ಲೆಗೆ ಎರಡು ಸಾವಿರ ಕೋಟಿ ವಿಶೇಷ ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ಕೊಡಬೇಕಿತ್ತು. ಆದರೆ ಈ ಭ್ರಷ್ಟ ಸರ್ಕಾರ ಜಿಲ್ಲೆಗೆ ಜೀರೋ ಪರ್ಸೆಂಟ್ ಬಜೆಟ್ ನೀಡಿದೆ. ಬಡವರು, ಹಿಂದುಳಿದವರ, ರೈತರ ವಿರೋಧಿ ಸರ್ಕಾರವಾಗಿದೆ. 

ಗ್ಯಾರಂಟಿ ಜತೆಗೆ ವಿಶೇಷ ಕೊಡುಗೆ ಕೊಡುವಲ್ಲಿ ವಿಫಲವಾಗಿದೆ ಎಂದು ಹರಿಹಾಯ್ದರು.ಪ್ರತಿಭಟನೆಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ನಂಜುಂಡೇಶ ಕಳ್ಳೇರ ಮಾತನಾಡಿದರು. 

ಮಾಜಿ ಶಾಸಕ ಶಿವರಾಜ ಸಜ್ಜನರ, ಭೋಜರಾಜ ಕರೂದಿ, ವೆಂಕಟೇಶ ನಾರಾಯಣಿ, ಸಂತೋಷ ಆಲದಕಟ್ಟಿ, ಮಂಜುನಾಥ ಗಾಣಗೇರ, ಶಿವಲಿಂಗಪ್ಪ ತಲ್ಲೂರು, ಕೆ.ಸಿ. ಕೋರಿ, ವಿಜಯಕುಮಾರ ಕೂಡ್ಲಪ್ಪನವರ, ಶಿವಯೋಗಿ ಹುಲಿಕಂತಿಮಠ, ನೀಲಪ್ಪ ಚಾವಡಿ, ಪ್ರಭು ಹಿಟ್ನಳ್ಳಿ, ರುದ್ರೇಶ ಚಿನ್ನಣ್ಣನವರ, ನಾಗೇಂದ್ರ ಕಡಕೋಳ, ಮಂಜುನಾಥ ಮಡಿವಾಳರ, ಹನುಮಂತ ದಾಸರ, ಗಂಗಾಧರ ಕನವಳ್ಳಿ, ಲಲಿತಾ ಗುಂಡೇನಹಳ್ಳಿ, ಪುಷ್ಪಾ ಚಕ್ರಸಾಲಿ, ಸುಜಾತಾ ಆರಾಧ್ಯಮಠ, ಚೆನ್ನಮ್ಮ ಗುರುಪಾದ್ದೇವರಮಠ, ಅಕ್ಷತಾ ಮಾಳಗಿಮನಿ, ವಿದ್ಯಾ ಶೆಟ್ಟಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.