ಸಾರಾಂಶ
22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಾಗೂ ಕರ್ನಾಟಕದಲ್ಲೂ ಹಲವು ಸಭೆಗಳನ್ನು ನಡೆಸಿದ್ದ ನಿಷೇಧಿತ ಸಿಮಿ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತ ಹನೀಫ್ ಶೇಖ್ ಎಂಬಾತನನ್ನು ದೆಹಲಿ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ನವದೆಹಲಿ: 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಾಗೂ ಕರ್ನಾಟಕದಲ್ಲೂ ಹಲವು ಸಭೆಗಳನ್ನು ನಡೆಸಿದ್ದ ನಿಷೇಧಿತ ಸಿಮಿ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತ ಹನೀಫ್ ಶೇಖ್ ಎಂಬಾತನನ್ನು ದೆಹಲಿ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ ಹಾಗೂ ಕೇರಳದಲ್ಲಿ ಈತ ಹಲವು ಸಭೆಗಳನ್ನು ಆಯೋಜಿಸಿ ಮುಸ್ಲಿಂ ಯುವಕರನ್ನು ಭಯೋತ್ಪಾದನೆಗೆ ಪ್ರಚೋದಿಸುತ್ತಿದ್ದ. 2001ರಲ್ಲಿ ಈತನ ಮೇಲೆ ಯುಎಪಿಎ ಕಾಯ್ದೆಯಡಿ ದೇಶದ್ರೋಹದ ಕೇಸು ದಾಖಲಿಸಲಾಗಿತ್ತು.
2002ರಲ್ಲಿ ದೆಹಲಿ ಕೋರ್ಟ್ ಈತನನ್ನು ದೇಶಭ್ರಷ್ಟ ಭಯೋತ್ಪಾದಕನೆಂದು ಘೋಷಿಸಿತ್ತು. ಅಲ್ಲಿಂದ ಈವರೆಗೆ ದೆಹಲಿ ಪೊಲೀಸರು ಈತನಿಗಾಗಿ ಎಲ್ಲೆಡೆ ಶೋಧ ನಡೆಸಿದ್ದರು. ಬರೋಬ್ಬರಿ 22 ವರ್ಷಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಅಡಗಿದ್ದ: ‘ಸಿಮಿ ಸಂಘಟನೆಯ ‘ಇಸ್ಲಾಮಿಕ್ ಮೂಮೆಂಟ್’ ಎಂಬ ಉರ್ದು ನಿಯತಕಾಲಿಕೆಗೆ ಶೇಖ್ ಸಂಪಾದಕನಾಗಿದ್ದ. ಕಳೆದ 25 ವರ್ಷಗಳಿಂದ ಯುವಕರ ಬ್ರೇನ್‌ವಾಶ್ ಮಾಡಿ ಭಯೋತ್ಪಾದನೆಗೈಯಲು ಪ್ರಚೋದಿಸುತ್ತಿದ್ದ.
ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದ ಲೇಖನವೊಂದರಿಂದ ಈತನ ಸುಳಿವು ಪತ್ತೆಹಚ್ಚಿ ಶೋಧಕಾರ್ಯ ಕೈಗೊಂಡ ಪೊಲೀಸರು, ಮಹಾರಾಷ್ಟ್ರದ ಭುಸಾವಲ್‌ನಲ್ಲಿ ನೆಲೆಸಿದ್ದಾತನನ್ನು ಬಂಧಿಸಿದ್ದಾರೆ’ ಎಂದು ಡಿಸಿಪಿ ಅಂಕಿತ್ ಸಿಂಗ್ ತಿಳಿಸಿದ್ದಾರೆ.
ಶಾಲೆಯಲ್ಲಿ ಉರ್ದು ಶಿಕ್ಷಕನಾಗಿದ್ದ: ಈತ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸಿಮಿ ಸಂಘಟನೆಗಾಗಿ ಸಭೆಗಳನ್ನು ಆಯೋಜಿಸಿದ್ದ. ಸದ್ಯ ತನ್ನ ಹೆಸರನ್ನು ಮೊಹಮ್ಮದ್ ಹನೀಫ್ ಎಂದು ಬದಲಿಸಿಕೊಂಡು ರಹಸ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ. ಭುಸಾವಲ್‌ನ ಸರ್ಕಾರಿ ಉರ್ದು ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಮಿ ಮ್ಯಾಗಜೀನ್‌ಗೆ ಸಂಪಾದಕ: 1997ರಲ್ಲಿ ಜಲಗಾಂವ್‌ನಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದ ಹನೀಫ್, ಅದೇ ವರ್ಷ ಸಿಮಿ ಸಂಘಟನೆಯನ್ನು ಸೇರಿಕೊಂಡಿದ್ದ. ಯುವಕರ ಮನವೊಲಿಸುವಲ್ಲಿ ಈತನಿಗಿದ್ದ ಆಸಕ್ತಿಯನ್ನು ಗಮನಿಸಿ ಅಂದಿನ ಸಿಮಿ ಮುಖ್ಯಸ್ಥರು ಶೇಖ್‌ನನ್ನು ಇಸ್ಲಾಮಿಕ್ ಮೂಮೆಂಟ್ ನಿಯತಕಾಲಿಕೆಯ ಸಂಪಾದಕನನ್ನಾಗಿ ಮಾಡಿದ್ದರು.
ಅದರ ಮೂಲಕವೇ ಈತ ಪ್ರಚೋದನಕಾರಿ ಲೇಖನಗಳನ್ನು ಬರೆದು, ಸಭೆಗಳನ್ನು ಆಯೋಜಿಸಿ ಜಿಹಾದಿಗಳನ್ನು ತಯಾರು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.ಹನೀಫ್ ಶೇಖ್‌ಗೆ ಮೂವರು ಸಹೋದರರು, ಇಬ್ಬರು ಸಹೋದರಿಯರು ಹಾಗೂ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ.