ಗೋವಾ ದೇಗುಲ ಕಾಲ್ತುಳಿತ: 6 ಭಕ್ತರು ಬಲಿ

| N/A | Published : May 04 2025, 01:32 AM IST / Updated: May 04 2025, 06:28 AM IST

ಸಾರಾಂಶ

  ಗೋವಾದ ಪ್ರಸಿದ್ಧ ಲೈರೈ ದೇವಸ್ಥಾನ ದೇಗುಲದ ಜಾತ್ರೆ ಸಂದರ್ಭದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, 6 ಭಕ್ತರು ಸಾವನ್ನಪ್ಪಿದ್ದಾರೆ 

 ಪಣಜಿ : ಕರ್ನಾಟಕದ ಭಕ್ತರೂ ಭಾಗಿ ಆಗುವ ಉತ್ತರ ಗೋವಾದ ಪ್ರಸಿದ್ಧ ಲೈರೈ ದೇವಸ್ಥಾನ ದೇಗುಲದ ಜಾತ್ರೆ ಸಂದರ್ಭದಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತಾಗ ಭೀಕರ ಕಾಲ್ತುಳಿತ ಸಂಭವಿಸಿದ್ದು, 6 ಭಕ್ತರು ಸಾವನ್ನಪ್ಪಿದ್ದಾರೆ ಹಾಗೂ 70ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಇವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ.

ಪಣಜಿಯಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಶಿರ್ಗಾವ್‌ ಗ್ರಾಮದ ಲೈರೈ ದೇವಸ್ಥಾನದಲ್ಲಿ ಶನಿವಾರ ವಾರ್ಷಿಕ ಜಾತ್ರೆ ಮಹೋತ್ಸವ ನಡೆಯುತ್ತಿತ್ತು. ಈ ವಾರ್ಷಿಕ ಜಾತ್ರೆಗೆ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳ ಭಕ್ತರು ಆಗಮಿಸಿದ್ದರು.

ಆಗ ಶನಿವಾರ ನಸುಕಿನ 3 ಗಂಟೆ ಸುಮಾರಿಗೆ ಇಳಿಜಾರು ಭಾಗದಲ್ಲಿ ದೇವರ ದರ್ಶನಕ್ಕೆ ಸಾವಿರಾರು ಭಕ್ತರು ನಿಂತಿದ್ದಾಗ ಆಯ ತಪ್ಪಿ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದಾರೆ. ಆಗ ಕಾಲ್ತುಳಿತ ಸಂಭವಿಸಿದೆ. ಅವಘಢದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 6 ಭಕ್ತರು ಸಾವನ್ನಪ್ಪಿದ್ದಾರೆ. 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಬಗ್ಗೆ ಪೊಲೀಸ್‌ ಮಹಾನಿರ್ದೇಶಕ ಅಲೋಕ್ ಕುಮಾರ್‌ ಮಾಹಿತಿ ನೀಡಿದ್ದು, ‘ಜಾತ್ರೆಯಲ್ಲಿ 30 ರಿಂದ 40 ಸಾವಿರ ಭಕ್ತರು ಭಾಗಿಯಾಗಿದ್ದರು. ಈ ಪೈಕಿ ಕೆಲವರು ಇಳಿಜಾರಿನಲ್ಲಿ ನಿಂತಿದ್ದರು. ಭಕ್ತರು ಕಿರಿದಾದ ಜಾಗದಲ್ಲಿ ಗುಂಪುಗುಂಪಾಗಿ ಬರುತ್ತಿದ್ದಾಗ ಒಬ್ಬರಿಗೊಬ್ಬ ತಾಗಿ ಆಯತಪ್ಪಿದ್ದಾರೆ. ಆಗ ಕೆಲ ಭಕ್ತರು ಇಳಿಜಾರಿನಲ್ಲಿ ಬಿದ್ದಿದ್ದಾರೆ. ಕಾಲ್ತುಳಿತವು ಸುಮಾರು 100 ಭಕ್ತರಿದ್ ಇಳಿಜಾರು ಭಾಗಕ್ಕೆ ಮಾತ್ರ ಸೀಮಿತವಾಗಿದ್ದು ಕಾಲ್ತುಳಿತ ಸಂಭವಿಸಿ 6 ಭಕ್ತರು ಸಾವನ್ನಪ್ಪಿದ್ದಾರೆ’ ಎಂದಿದ್ದಾರೆ. ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ಸಿಎಂ ಪ್ರಮೋದ್‌ ಸಾವಂತ್‌ ಭೇಟಿ ನೀಡಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಹಾಗೂ ಉತ್ತರ ಗೋವಾ ಜಿಲ್ಲಾಧಿಕಾರಿ ಮತ್ತು ಎಸ್ಪಿಯನ್ನು ಎತ್ತಂಗಡಿ ಮಾಡಲು ಆದೇಶಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಯಾರಿಗೋ ಸರದಿಯಲ್ಲಿ ಕರೆಂಟ್‌ ಶಾಕ್‌ ತಾಗಿದ್ದರಿಂದ ಭಯ ಉಂಟಾಗಿ ಕಾಲ್ತುಳಿತ ಸಂಭವಿಸಿರಬಹುದು ಎಂಬ ಊಹೇಯೂ ಇದೆ. ಹೀಗಾಗಿ ಘಟನೆಯ ಕುರಿತಾಗಿ ಸಂಪೂರ್ಣ ತನಿಖೆಗೆ ಆದೇಶಿಸಿದ್ದೇವೆ. ಘಟನೆಯ ವರದಿಯನ್ನು ಸಾರ್ವಜನಿಕಗೊಳಿಸುತ್ತೇವೆ. ದೇವಸ್ಥಾನದ ಜಾತ್ರೆ ಸಂದರ್ಭಗಳಲ್ಲಿ ಸಂಬಂಧಪಟ್ಟವರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದಿದ್ದಾರೆ.

ಮೋದಿ, ಮುರ್ಮು ಸಂತಾಪ:

ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದು, ಘಟನೆಯ ಬಗ್ಗೆ ಅವಲೋಕನ ನಡೆಸುವುದಾಗಿ ಹೇಳಿದ್ದಾರೆ. ಇನ್ನು ಘಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಗಾಯಗೊಂಡವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.