ಸಾರಾಂಶ
ಲೇಹ್ : ಲಡಾಖ್‌ಗೆ ರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸಿ ಇತ್ತೀಚೆಗೆ ನಡೆದ ಜೆನ್ ಝೀ ದಂಗೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತ, ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್‌ಗೆ ವಿದೇಶಿ ಶಕ್ತಿಗಳು ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಸಂಪರ್ಕದ ಆರೋಪ ಕೇಳಿಬಂದಿದ್ದು, ಈ ಕುರಿತು ತನಿಖೆ ಆರಂಭವಾಗಿದೆ.
ಲಡಾಖ್ ಹಿಂಸೆಯಲ್ಲಿ ಬುಧವಾರ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ವಾಂಗ್‌ಚುಕ್ ಅವರನ್ನು ಬಂಧಿಸಿ ರಾಜಸ್ಥಾನದ ಜೋಧಪುರ ಜೈಲಿಗೆ ಕಳಿಸಲಾಗಿದೆ.
ಕಳೆದ ತಿಂಗಳು ಪಾಕಿಸ್ತಾನದ ಐಎಸ್‌ಐ ಏಜೆಂಟ್‌ವೊಬ್ಬರ ಬಂಧನ ಆಗಿತ್ತು. ಆತ ವಾಂಗ್‌ಚುಕ್ ಅವರ ಪ್ರತಿಭಟನೆಯ ವಿಡಿಯೋವನ್ನು ಆತ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಇದೇ ವೇಳೆ ಅವರು ಪಾಕ್‌ನ ಡಾನ್ ಪತ್ರಿಕೆ ನಡೆಸಿದ ಕಾರ್ಯಕ್ರಮವೊಂದರಲ್ಲಿ ಬಾಗಿಯಾಗಿದ್ದ ಮಾಹಿತಿ ಇದೆ. ಬಾಂಗ್ಲಾದೇಶಕ್ಕೂ ಅವರು ಭೇಟಿ ನೀಡಿದ್ದರು. ಇವೆಲ್ಲ ಅನುಮಾನಗಳಿಗೆ ಕಾರಣವಾಗಿದೆ’ ಎಂದು ಲಡಾಖ್ ಡಿಜಿಪಿ ಎಸ್.ಡಿ. ಸಿಂಗ್ ಜಮ್ವಾಲ್ ಹೇಳಿದ್ದಾರೆ.
ವಾಂಗ್‌ಚುಕ್ ವಿರುದ್ಧದ ತನಿಖೆ ವೇಳೆ ಏನೇನು ಬೆಳಕಿಗೆ ಬಂದಿದೆ ಎಂದು ಈ ಸಂದರ್ಭದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಇತ್ತೀಚೆಗೆ ನೇಪಾಳ, ಬಾಂಗ್ಲಾ, ಶ್ರೀಲಂಕಾದಲ್ಲಿ ನಡೆದ ದಂಗೆ, ಅರಬ್ ಕ್ರಾಂತಿ ಕುರಿತು ಅವರು ಮಾತನಾಡಿರುವ ಭಾಷಣಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡಿವೆ ಎಂದು ಜಮ್ವಾಲ್ ಹೇಳಿದರು.
ವಾಂಗ್‌ಚುಕ್ ಅವರಿಗೆ ಅವರದ್ದೇ ಆದ ಅಜೆಂಡಾ ಇದೆ. ಅವರಿಗೆ ವಿದೇಶಿ ದೇಣಿಗೆ ಸಿಗುತ್ತಿರುವ ಕುರಿತು ತನಿಖೆ ನಡೆಯುತ್ತಿದೆ ಎಂದರು.
4 ತಾಸು ಕರ್ಫ್ಯೂ ಸಡಿಲ : ಈ ನಡುವೆ, ಹಿಂಸಾಪೀಡಿತ ಲಡಾಖ್‌ನಲ್ಲಿ 4ಣೆ ದಿನವಾದ ಶನಿವಾರ 4 ತಾಸು ಕರ್ಫ್ಯೂ ಸಡಿಲಿಸಲಾಗಿತ್ತು. ಸದ್ಯ ಪರಿಸ್ಥಿತಿ ಶಾಂತವಾಗಿದೆ.
ಲಡಾಖ್‌ಗೆ ರಾಜ್ಯಸ್ಥಾನಕ್ಕೆ ಆಗ್ರಹಿಸಿ ಇತ್ತೀಚೆಗೆ ನಡೆದಿದ್ದ ಜೆನ್ ಝೀ ದಂಗೆ ವೇಳೆ ನಾಲ್ವರು ಬಲಿ.
ವಾಂಗ್ಚುಕ್ ಪ್ರಚೋದನಾಕಾರಿ ಭಾಷಣದಿಂದಲೇ ಹಿಂಸಾತ್ಮಕ ಪ್ರತಿಭಟನೆ ಎಂದು ಕೇಂದ್ರ ಆರೋಪ
ಇತ್ತೀಚೆಗೆ ಬಂಧಿತ ಪಾಕ್ ಏಜೆಂಟ್, ವಾಂಗ್ಚುಕ್‌ರ ಪ್ರತಿಭಟನೆ ವಿಡಿಯೋ ಪಾಕ್‌ಗೆ ಕಳಿಸಿದ್ದು ಬೆಳಕಿಗೆ
ಈ ಹಿನ್ನೆಲೆಯಲ್ಲಿ ವಾಂಗ್ಚುಕ್ ಪಾಕ್ ಭೇಟಿ. ಅವರಿಗೆ ಪಾಕ್‌ನಲ್ಲಿ ಯಾರ್‍ಯಾರ ನಂಟು ಎಂಬ ಬಗ್ಗೆ ತನಿಖೆ