ರಾಯ್‌ಬರೇಲಿಗೆ ಸೋನಿಯಾ ದ್ರೋಹ: ಮೋದಿ

| Published : May 20 2024, 01:36 AM IST / Updated: May 20 2024, 06:27 AM IST

ಸಾರಾಂಶ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಯ್‌ಬರೇಲಿಯನ್ನು ಕೈಬಿಟ್ಟು, ಪುತ್ರ ರಾಹುಲ್‌ ಗಾಂಧಿಯನ್ನು ಅಭ್ಯರ್ಥಿ ಮಾಡಿದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ.

ಜಮ್ಷೆಡ್‌ಪುರ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಯ್‌ಬರೇಲಿಯನ್ನು ಕೈಬಿಟ್ಟು, ಪುತ್ರ ರಾಹುಲ್‌ ಗಾಂಧಿಯನ್ನು ಅಭ್ಯರ್ಥಿ ಮಾಡಿದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ. ಇದು ಕ್ಷೇತ್ರದ ಜನತೆಗೆ ಮಾಡಿದ ದ್ರೋಹ ಎಂದು ಕಿಡಿಕಾರಿದ್ದಾರೆ.

ಭಾನುವಾರ ಜಮ್ಷೆಡ್‌ಪುರದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಇತ್ತೀಚೆಗೆ ಅವರು (ಸೋನಿಯಾ ಗಾಂಧಿ) ಪ್ರಚಾರಕ್ಕಾಗಿ ರಾಯ್‌ಬರೇಲಿಗೆ ಹೋಗಿದ್ದರು ಮತ್ತು ಅವರು ತಮ್ಮ ಮಗನನ್ನು ಜನತೆಗೆ ಒಪ್ಪಿಸುತ್ತಿದ್ದೇನೆ ಎಂದು ಹೇಳಿದರು.

 ರಾಯ್‌ಬರೇಲಿಯಲ್ಲಿ ದೀರ್ಘಕಾಲ ಕೆಲಸ ಮಾಡಿದ ಒಬ್ಬ ಪಕ್ಷದ ಕಾರ್ಯಕರ್ತನೂ ಅವರಿಗೆ ಅಭ್ಯರ್ಥಿ ಸ್ಥಾನಕ್ಕೆ ಸಿಗಲಿಲ್ಲವೆ?’ ಎಂದು ಪ್ರಶ್ನಿಸಿದರು.‘ಅವರು (ಸೋನಿಯಾ ಗಾಂಧಿ) ಕೋವಿಡ್ ನಂತರ ಒಮ್ಮೆಯೂ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಲಿಲ್ಲ ಮತ್ತು ಈಗ ಅವರು ತಮ್ಮ ಮಗನಿಗೆ ಮತ ಕೇಳುತ್ತಿದ್ದಾರೆ. ಅವರು ಸ್ಥಾನವನ್ನು ತಮ್ಮ ಕುಟುಂಬದ ಆಸ್ತಿ ಎಂದು ಭಾವಿಸುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

 ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿಗೆ ಚಾಟಿ ಬೀಸಿದ ಮೋದಿ. ‘ಕಾಂಗ್ರೆಸ್‌ ಯುವರಾಜ ಚುನಾವಣೆಗೆ ಸ್ಪರ್ಧಿಸಲು ವಯನಾಡಿನಿಂದ ರಾಯಬರೇಲಿಗೆ ಓಡಿಹೋಗಿದ್ದಾರೆ. ಇದು ನನ್ನ ತಾಯಿಯ ಸೀಟು ಎಂದು ಎಲ್ಲರಿಗೂ ಹೇಳುತ್ತಾ ತಿರುಗಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಅವರ ತಂದೆ ಅಲ್ಲಿ ಓದಿದ್ದರೂ ಸಹ, ಎಂಟು ವರ್ಷದ ಮಗು ಓದಲು ಶಾಲೆಗೆ ಹೋದಾಗಲೂ ಇದು ನನ್ನ ತಂದೆಯ ಶಾಲೆ ಎಂದು ಹೇಳುವುದಿಲ್ಲ, ಈ ಕುಟುಂಬ ಆಧಾರಿತ ಜನರು ಸಂಸತ್ತಿನ ಸ್ಥಾನಗಳ ಮೇಲೆ ಉಯಿಲು ಬರೆಯುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.