ಸಾರಾಂಶ
ಇಂಪಾಲ : ಕಳೆದ ಎರಡು ವರ್ಷಗಳಿಂದ ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಸುಮಾರು 8,500 ಕೋಟಿ ರು. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಹಿಂಸಾಚಾರದ ಬಳಿಕ ಮೋದಿ ಅವರು ಮಣಿಪುರಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
2023ರ ಮೇ ತಿಂಗಳಲ್ಲಿ ಮೈತೇಯಿ ಮತ್ತು ಕುಕಿ ಜನಾಂಗದ ನಡುವೆ ಆರಂಭವಾದ ಹಿಂಸಾಚಾರದಲ್ಲಿ ಸುಮಾರು 260 ಮಂದಿ ಮೃತಪಟ್ಟು, 50 ಸಾವಿರಕ್ಕೂ ಹೆಚ್ಚು ಮಂದಿ ನಿರ್ವಸಿತರಾಗಿದ್ದಾರೆ. ಸುದೀರ್ಘ ಹಿಂಸಾಚಾರದ ಹಿನ್ನೆಲೆಯಲ್ಲಿ ಮಣಿಪುರ ಮುಖ್ಯಮಂತ್ರಿಯಾಗಿದ್ದ ಎನ್.ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಿದ ಬಳಿಕ, ಕಳೆದ ಫೆಬ್ರವರಿಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಸದ್ಯ ಹಿಂಸಾಚಾರ ನಿಯಂತ್ರಣದಲ್ಲಿದ್ದರೂ ಶಾಂತಿ ಸ್ಥಾಪನೆ ಇನ್ನೂ ಸಾಧ್ಯವಾಗಿಲ್ಲ. ಇದೀಗ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ ಸ್ಥಾಪನೆಯ ಪ್ರಕ್ರಿಯೆಗಳಿಗೆ ಹೆಚ್ಚಿನ ವೇಗ ಸಿಗುವ ನಿರೀಕ್ಷೆ ಇದೆ.
ಮೋದಿ ಭೇಟಿ ಹಿನ್ನೆಲೆಯಲ್ಲಿ ಶುಕ್ರವಾರವಷ್ಟೇ ಮಣಿಪುರದಲ್ಲಿ ಬೃಹತ್ ಬ್ಯಾನರ್‌ಗಳನ್ನು ಹಾಕಲಾಗಿದೆ. ಈಗಾಗಲೇ ಮೋದಿ ಭೇಟಿಗೆ ಸಂಬಂಧಿಸಿ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೋದಿ ಅವರ ಭೇಟಿಯನ್ನು ಕುಕಿ-ಝೋ ಗುಂಪುಗಳು ಸ್ವಾಗತಿಸಿವೆ. ಇದೊಂದು ಐತಿಹಾಸಿಕ ಭೇಟಿ ಎಂದು ಬಣ್ಣಿಸಿವೆ.
ಸಂತ್ರಸ್ತರ ಜತೆ ಮಾತುಕತೆ:ಮಣಿಪುರ ಭೇಟಿ ವೇಳೆ ಜನಾಂಗೀಯ ಹಿಂಸಾಚಾರದಿಂದ ನಿರಾಶ್ರಿತರಾಗಿರುವವರ ಜತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ. ಮಿಜೋರಾಂ ಮೂಲಕ ಚುರಾಚಂದಾಪುರಕ್ಕೆ ಮಧ್ಯಾಹ್ನ 12.30ಕ್ಕೆ ಆಗಮಿಸಲಿರುವ ಮೋದಿ ಅವರು ಗಲಭೆಪೀಡಿತರ ಜತೆಗೆ ಸಮಾಲೋಚನೆ ನಡೆಸಲಿದ್ದಾರೆ. ಚುರಾಚಂದಾಪುರ ಪ್ರದೇಶವು ಗಲಭೆಯಿಂದ ಅತಿ ಹೆಚ್ಚು ಹಾನಿಗೀಡಾದ ಪ್ರದೇಶವಾಗಿದೆ. ಇದು ಕುಕಿ ಸಮುದಾಯ ಬಹುಸಂಖ್ಯಾತರಿರುವ ಪ್ರದೇಶವಾಗಿದ್ದು, ಇಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನ 2.30ಕ್ಕೆ ಅವರು ಇಂಪಾಲಕ್ಕೆ ತೆರಳಲಿದ್ದಾರೆ. ಇಂಪಾಲದಲ್ಲಿ ಮೈತೇಯಿಗಳೇ ಬಹುಸಂಖ್ಯಾತರು. ಈ ಮೂಲಕ ಎರಡೂ ಸಮುದಾಯದ ನಡುವೆ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನವನ್ನು ಮೋದಿ ಮಾಡಲಿದ್ದಾರೆ.
ಪ್ರಹಸನ: ಮೋದಿ ಭೇಟಿ ‘ಶಾಂತಿ ಮತ್ತು ಸೌಹಾರ್ದತೆಗೆ ಬಲ ನೀಡುವ ಬದಲು ಒಂದು ಪ್ರಹಸನವಾಗಲಿದೆ’ ಎಂದು ವಿಪಕ್ಷ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಅಂತೂ ಇದು ಅಧಿಕೃತವಾಗಿದೆ. ಪ್ರಧಾನಿಗಳು 3 ಗಂಟೆಗಿಂತ ಕಡಿಮೆ ಸಮಯವನ್ನು ಮಣಿಪುರದಲ್ಲಿ ಕಳೆಯಲಿದ್ದಾರೆ. ಅವರ ಈ ಭೇಟಿಯು ಶಾಂತಿ ಮತ್ತು ಸೌಹಾರ್ದತೆಗೆ ಬಲ ನೀಡುವ ಬದಲು ಒಂದು ಪ್ರಹಸನವಾಗಿ ಮಾರ್ಪಡಲಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಈ ಹಿಂದೆ, ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಟೀಕಿಸುತ್ತಿತ್ತು.
ಜನಾಂಗೀಯ ಹಿಂಸಾಚಾರ
ಮೈತೇಯಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ನೀಡುವ ಕುರಿತು ಕೇಂದ್ರಕ್ಕೆ ಪ್ರಸ್ತಾಪನೆ ಕಳುಹಿಸಿಕೊಡುವಂತೆ ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಎಸ್ಟಿ ವಿದ್ಯಾರ್ಥಿಗಳ ಒಕ್ಕೂಟ ಈ ಆದೇಶ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ನಡೆಸಿದ್ದು, ಆ ಬಳಿಕ ಹಿಂಸಾಚಾರ ಭುಗಿಲೆದ್ದಿತು. ಬಹುಸಂಖ್ಯಾತ ಮೈತೀಯಿ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಬಾರದು ಎಂಬುದು ಇವರ ಆಗ್ರಹವಾಗಿತ್ತು. ಮೈತೇಯಿ ಮತ್ತು ಕುಕಿಗಳ ನಡುವೆ ಹಿಂದಿನಿಂದಲೂ ಜನಾಂಗೀಯ ತಿಕ್ಕಾಟ ಇದ್ದು, ಕೋರ್ಟ್ ಆದೇಶ ತಿಕ್ಕಾಟದ ಬೆಂಕಿಗೆ ತುಪ್ಪ ಸುರಿಯಿತು ಅಷ್ಟೆ.