ಸಾರಾಂಶ
ನವದೆಹಲಿ: ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ವಯನಾಡು ಕ್ಷೇತ್ರಕ್ಕೆ ಮಂಗಳವಾರ ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕಿ ಹೆಸರನ್ನು ಪಕ್ಷ ಪ್ರಕಟಿಸಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ತಾವು ಗೆದ್ದಿದ್ದ ಎರಡು ಕ್ಷೇತ್ರಗಳ ಪೈಕಿ ರಾಯ್‌ಬರೇಲಿ ಉಳಿಸಿಕೊಂಡು, ವಯನಾಡಿಗೆ ರಾಜೀನಾಮೆ ನೀಡಿದ್ದರು. ಅಲ್ಲಿ ನ.13ರಂದು ಉಪ ಚುನಾವಣೆ ನಿಗದಿಯಾಗಿದ್ದು, ಅಲ್ಲಿಂದ ಇದೀಗ ಅವರ ಸೋದರಿಯನ್ನು ಕಣಕ್ಕೆ ಇಳಿಸಲು ಪಕ್ಷ ನಿರ್ಧರಿಸಿದೆ.ಇದರೊಂದಿಗೆ ಮೊದಲ ಬಾರಿಗೆ ಪ್ರಿಯಾಂಕಾ ಚುನಾವಣಾ ಕಣಕ್ಕೆ ಇಳಿಯಲು ವೇದಿಕೆ ಸಜ್ಜಾಗಿದೆ.
ಒಂದು ವೇಳೆ ಈ ಚುನಾವಣೆಯಲ್ಲಿ ಅವರು ಗೆದ್ದರೆ ತಾಯಿ ಸೋನಿಯಾ, ಸೋದರ ರಾಹುಲ್ ಜೊತೆಗೆ ಸಂಸತ್ತಿನಲ್ಲಿ ಪ್ರಿಯಾಂಕಾ ಕೂಡ ಆಸೀನರಾಗಲಿದ್ದಾರೆ. ಸ್ಪರ್ಧೆ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ, ‘ಸ್ಪರ್ಧೆ ಕುರಿತು ನಾನೇನೂ ಆತಂಕಗೊಂಡಿಲ್ಲ. ವಯನಾಡನ್ನು ಪ್ರತಿನಿಧಿಸಲು ನಾನು ಸಂತೋಷವಾಗಿದ್ದೇನೆ. ಅಲ್ಲಿನ ಮತದಾರರಿಗೆ ರಾಹುಲ್ ಕೊರತೆ ಕಾಣಿಸದಂತೆ ನೋಡಿಕೊಳ್ಳುತ್ತೇನೆ. ಕ್ಷೇತ್ರದ ಎಲ್ಲಾ ಮತದಾರರು ಸಂತೋಷವಾಗಿರಲು ಮತ್ತು ಒಬ್ಬ ಉತ್ತಮ ಜನಪ್ರತಿನಿಧಿಯಾಗಲು ಎಲ್ಲಾ ಶ್ರಮವನ್ನೂ ಹಾಕುವೆ’ ಎಂದು ಹೇಳಿದ್ದಾರೆ.
1999ರಲ್ಲೇ ಪ್ರಿಯಾಂಕಾ ರಾಜಕೀಯ ಪ್ರವೇಶಿಸಿದ್ದರೂ 2019ರ ನಂತರ ಹೆಚ್ಚು ಸಕ್ರಿಯರಾಗಿದ್ದಾರೆ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೂಡ ಆಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಇವರು ಸ್ಪರ್ಧಿಸಬಹುದು ಎಂಬ ನಿರೀಕ್ಷೆ ಹುಸಿ ಆಗಿತ್ತು.
;Resize=(690,390))
;Resize=(128,128))
;Resize=(128,128))
;Resize=(128,128))