ತಮ್ಮ ಒಡೆತನದ ಸ್ಟಾರ್ ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಗೆ ಭಾರತದಲ್ಲಿ ಅನುಮತಿ ವಿಳಂಬ ವಿಚಾರವಾಗಿ ಅಮೆರಿಕದ ವಿಶ್ವ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ರಿಲಯನ್ಸ್ ಕಂಪನಿ ಮಾಲೀಕ ಮುಖೇಶ್ ಅಂಬಾನಿ ವಿರುದ್ಧದ ವಾಗ್ದಾಳಿ ಮತ್ತಷ್ಟು ಮುಂದುವರಿಸಿದ್ದಾರೆ.
ನವದೆಹಲಿ: ತಮ್ಮ ಒಡೆತನದ ಸ್ಟಾರ್ ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಗೆ ಭಾರತದಲ್ಲಿ ಅನುಮತಿ ವಿಳಂಬ ವಿಚಾರವಾಗಿ ಅಮೆರಿಕದ ವಿಶ್ವ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ರಿಲಯನ್ಸ್ ಕಂಪನಿ ಮಾಲೀಕ ಮುಖೇಶ್ ಅಂಬಾನಿ ವಿರುದ್ಧದ ವಾಗ್ದಾಳಿ ಮತ್ತಷ್ಟು ಮುಂದುವರಿಸಿದ್ದಾರೆ.
ಶುಕ್ರವಾರವಷ್ಟೇ ಮುಕೇಶ್ ಅಂಬಾನಿಯನ್ನು ‘ಪ್ರಧಾನಮಂತ್ರಿ ಅಂಬಾನಿ’ ಎಂದು ಹಾಗೂ ‘ಅವರಿಂದ ಸ್ಟಾರ್‌ಲಿಂಕ್‌ಗೆ ಅನುಮತಿ ಸಿಗುತ್ತಿಲ್ಲ’ ಎಂದು ವ್ಯಂಗ್ಯವಾಡಿದ್ದ ಮಸ್ಕ್, ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪರ ಪ್ರಚಾರಾಂದೋಲನ ಬೆಂಬಲಿಸಿರುವ ಕುರಿತು ಹಾಗೂ ಆಡಳಿತಾರೂಢ ಪಕ್ಷಕ್ಕೆ ಅತಿ ಹೆಚ್ಚು ದೇಣಿಗೆ ನೀಡಿರುವ ಕುರಿತ ರಿಲಯನ್ಸ್ ಮೇಲಿನ ಆರೋಪಗಳ ಕುರಿತ ಪತ್ರಿಕಾ ವರದಿಗಳ ಸ್ಕ್ರೀನ್ ಶಾಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
ವರದಿಯ ಸ್ಕ್ರೀನ್ ಶಾಟ್‌ವೊಂದನ್ನು ಹಂಚಿಕೊಂಡಿದ್ದಾರೆ
‘ರಿಲಯನ್ಸ್ ಬೆಂಬಲಿತ ಕಂಪನಿಯೊಂದು ಯಾವ ರೀತಿ ಫೇಸ್‌ಬುಕ್‌ನಲ್ಲಿ ಬಿಜೆಪಿಯ ಪ್ರಚಾರಾಂದೋಲನಕ್ಕೆ ಪ್ರೋತ್ಸಾಹ ನೀಡುತ್ತಿದೆ’ ಎಂಬ ಅಲ್ ಜಝೀರಾ 2022ರಲ್ಲಿ ಪ್ರಕಟಿಸಿದ್ದ ವರದಿಯ ಸ್ಕ್ರೀನ್ ಶಾಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಜತೆಗೆ, ರಿಲಯನ್ಸ್‌ಗೆ ಸಂಬಂಧಿಸಿದ ಕ್ವಿಕ್ ಸಪ್ಲೈ ಕಂಪನಿ ಬಿಜೆಪಿಗೆ 385 ಕೋಟಿ ರು. ಹಾಗೂ ಶಿವಸೇನೆಗೆ ಚುನಾವಣಾ ಬಾಂಡ್ ಮೂಲಕ 25 ಕೋಟಿ ರು. ನೀಡಿರುವ ಕುರಿತ 2024ರ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯನ್ನೂ ಹಂಚಿಕೊಂಡಿದ್ದಾರೆ.
ವಸಾಹತು ಅಲ್ಲ: ಮಸ್ಕ್‌ಗೆ ಕಮಲ್
ಉದ್ಯಮಿ ಎಲಾನ್ ಮಸ್ಕ್ ಹೇಳಿಕೆಗೆ ತಿರುಗೇಟು ನೀಡಿರುವ ನಟ, ರಾಜ್ಯಸಭಾ ಸಂಸದ ಕಮಲ್ ಹಾಸನ್ ‘ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ, ವಸಾಹತು ಅಲ್ಲ. ನಾವು ಜಗತ್ತನ್ನು ಸ್ವಾಗತಿಸುತ್ತೇವೆ, ಆದರೆ ನಾವು (ಭಾರತೀಯ ಜನರು) ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸುತ್ತೇವೆ’ ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
