ಭಾರತದಿಂದ ಸ್ಟಾರ್‌ವಾರ್‌ ರೀತಿ ಅತ್ಯಾಧುನಿಕ ಲೇಸರ್‌ ದೇಸಿ ಅಸ್ತ್ರದ ಪ್ರಯೋಗ ಯಶಸ್ವಿ

| N/A | Published : Apr 14 2025, 01:20 AM IST / Updated: Apr 14 2025, 05:05 AM IST

ಸಾರಾಂಶ

ಜಗತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿಕೊಳ್ಳುತ್ತಿರುವ ಹೊತ್ತಿನಲ್ಲೇ ವಿಮಾನ, ಕ್ಷಿಪಣಿ, ಡ್ರೋನ್‌ ಮತ್ತು ಹೆಲಿಕಾಪ್ಟರ್‌ಗಳ ಸಮೂಹವನ್ನೇ ಧ್ವಂಸಗೊಳಿಸುವಂಥ ಅತ್ಯಾಧುನಿಕ ಲೇಸರ್‌ ಅಸ್ತ್ರವನ್ನು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ)  ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ

ನವದೆಹಲಿ: ಜಗತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿಕೊಳ್ಳುತ್ತಿರುವ ಹೊತ್ತಿನಲ್ಲೇ ವಿಮಾನ, ಕ್ಷಿಪಣಿ, ಡ್ರೋನ್‌ ಮತ್ತು ಹೆಲಿಕಾಪ್ಟರ್‌ಗಳ ಸಮೂಹವನ್ನೇ ಧ್ವಂಸಗೊಳಿಸುವಂಥ ಅತ್ಯಾಧುನಿಕ ಲೇಸರ್‌ ಅಸ್ತ್ರವನ್ನು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಭಾನುವಾರ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ. ಹಾಲಿವುಡ್‌ನ ‘ಸ್ಟಾರ್‌ವಾರ್‌’ ಸರಣಿ ಚಿತ್ರಗಳಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ರೀತಿಯ ಅಸ್ತ್ರ ಇದೀಗ ಭಾರತದ ಪಾಲಿಗೆ ನನಸಾಗಿ ಹೊರಹೊಮ್ಮಿದೆ.

ಇದರೊಂದಿಗೆ ಭಾರತ ಇದೇ ಮೊದಲ ಬಾರಿಗೆ ಲೇಸರ್‌ ಅಸ್ತ್ರವನ್ನು ಹೊಂದಿದಂತಾಗಿದ್ದು, ಇಂಥ ಸಾಮರ್ಥ್ಯ ಹೊಂದಿದ ಅಮೆರಿಕ, ರಷ್ಯಾ, ಚೀನಾದಂಥ ವಿಶ್ವದ ಕೆಲವೇ ಕೆಲವು ದೇಶಗಳ ಸಾಲಿಗೆ ಭಾರತ ಕೂಡಾ ಸೇರಿದೆ.

ಪ್ರದರ್ಶನ:

ಡಿಆರ್‌ಡಿಒದ ವಿಜ್ಞಾನಿಗಳ ತಂಡ ಸಂಪೂರ್ಣ ದೇಶೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿರುವ ‘ಡೈರೆಕ್ಟೆಡ್‌ ಎನರ್ಜಿ ವೆಪನ್‌’ (ಡಿಇಡಬ್ಲ್ಯು) ಅನ್ನು ಭಾನುವಾರ ಆಂಧ್ರಪ್ರದೇಶದ ಕರ್ನೂಲ್‌ ಬಳಿ ಪರೀಕ್ಷಿಸಿತು. 30 ಕಿಲೋವ್ಯಾಟ್‌ ಸಾಮರ್ಥ್ಯದ ಲೇಸರ್‌ ಅಸ್ತ್ರ ಇದಾಗಿದೆ. ಈ ಪ್ರಯೋಗದ ವೇಳೆ ಆಗಸದಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿ ಹಾರುತ್ತಿದ್ದ ಡ್ರೋನ್‌ ಒಂದನ್ನು ಅತ್ಯಾಧುನಿಕ ಲೇಸರ್‌ ಅಸ್ತ್ರ ಬಳಸಿ ಧ್ವಂಸಗೊಳಿಸಲಾಗಿದೆ. ಈ ವೇಳೆ ಡ್ರೋನ್‌ನಲ್ಲಿದ್ದ ಸೆನ್ಸರ್‌ ಉಪಕರಣ, ಆ್ಯಂಟೆನಾಗಳನ್ನು ಪೂರ್ಣವಾಗಿ ನಾಶಪಡಿಸುವ ಮೂಲಕ ಅಸ್ತ್ರ ತನ್ನೆಲ್ಲಾ ಪರಿಪೂರ್ಣತೆ ಸಾಧಿಸಿತು ಎಂದು ವಿಜ್ಞಾನಿಗಳ ತಂಡ ಹೇಳಿದೆ.

ದಾಳಿ ಹೇಗೆ?:

ರಾಕೆಟ್‌, ಕ್ಷಿಪಣಿ, ಬಾಂಬ್‌ ದಾಳಿಗೆ ಸಂಪೂರ್ಣ ವಿರುದ್ಧವಾದ ತಂತ್ರಜ್ಞಾನವನ್ನು ಲೇಸರ್ ಅಸ್ತ್ರದಲ್ಲಿ ಬಳಸಲಾಗುವುದು. ಇದರಲ್ಲಿ ಇನ್‌ಫ್ರಾರೆಡ್‌ ಕಿರಣಗಳನ್ನು ಅತ್ಯಂತ ತೀಕ್ಷ್ಣ ಪ್ರಮಾಣದಲ್ಲಿ ಎದುರಿನ ಗುರಿಯ ಮೇಲೆ ಹಾಯಿಸಲಾಗುವುದು. ಇದರಿಂದಾಗಿ ಗುರಿಗೆ ಬೆಂಕಿ ಹೊತ್ತಿಕೊಂಡು, ಅದರ ಕಾರ್ಯನಿರ್ವಹಣೆ ಸ್ಥಗಿತಗೊಂಡು ಅದು ಪತನಗೊಳ್ಳುತ್ತದೆ.

ಈ ಕುರಿತು ಡಿಆರ್‌ಡಿಒ ಮುಖ್ಯಸ್ಥ ಡಾ.ಸಮೀರ್‌ ವಿ.ಕಾಮತ್‌ ಮಾತನಾಡಿ, ಇದು ಆರಂಭ ಅಷ್ಟೆ, ಇನ್ನೂ ಅನೇಕ ಮಹತ್ವಾಕಾಂಕ್ಷೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. ಸದ್ಯ ಅಮೆರಿಕ, ರಷ್ಯಾ, ಚೀನಾ ಮಾತ್ರ ಇಂಥ ಶಸ್ತ್ರಾಸ್ತ್ರವನ್ನು ಪ್ರದರ್ಶಿಸಿದೆ. ಇಸ್ರೇಲ್‌ ಕೂಡ ಇಂಥ ಆಯುಧ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ. ನಾವು ಈ ರೀತಿಯ ಆಯುಧವನ್ನು ಹೊಂದಿರುವ ನಾಲ್ಕನೇ ಅಥವಾ ಐದನೇ ದೇಶ ಆಗಿದ್ದೇವೆ ಎಂದು ಹೇಳಿದರು.

ಸ್ಟಾರ್‌ವಾರ್‌ ಟೆಕ್ನಾಲಜಿಯಂಥ ಹೈಎನರ್ಜಿ ಮೈಕ್ರೋವೇವ್ಸ್‌, ಎಲೆಕ್ಟ್ರೋಮ್ಯಾಗ್ನೆಟಿಕ್‌ ಪಲ್ಸ್‌ನಂಥ ತಂತ್ರಜ್ಞಾನದ ಅಭಿವೃದ್ಧಿ ನಿಟ್ಟಿನಲ್ಲೂ ಡಿಆರ್‌ಡಿಒ ಕೆಲಸ ಮಾಡುತ್ತಿದೆ. ಇನ್ನು ಮುಂದಿನ ಒಂದು ವರ್ಷದಲ್ಲಿ ನಮ್ಮ ಹಲವು ಶಸ್ತ್ರಾಸ್ತ್ರಗಳು ಸೇನೆಗೆ ಸೇರ್ಪಡೆಯಾಗಲಿವೆ ಎಂದರು.

ಲೇಸರ್‌ ಅಸ್ತ್ರ ಹೇಗೆ ಕೆಲಸ ಮಾಡುತ್ತದೆ?

ರಾಕೆಟ್‌, ಕ್ಷಿಪಣಿ, ಬಾಂಬ್‌ ದಾಳಿಗೆ ಸಂಪೂರ್ಣ ವಿರುದ್ಧವಾದ ತಂತ್ರಜ್ಞಾನವನ್ನು ಲೇಸರ್ ಅಸ್ತ್ರದಲ್ಲಿ ಬಳಸಲಾಗುತ್ತದೆ. ಇದರಲ್ಲಿ ಇನ್‌ಫ್ರಾರೆಡ್‌ ಕಿರಣಗಳನ್ನು ಅತ್ಯಂತ ತೀಕ್ಷ್ಣ ಪ್ರಮಾಣದಲ್ಲಿ ಶತ್ರು ದೇಶಗಳ ವಿಮಾನ, ಕ್ಷಿಪಣಿ, ಡ್ರೋನ್‌, ಹೆಲಿಕಾಪ್ಟರ್‌ ಮೇಲೆ ಹಾಯಿಸಲಾಗುತ್ತದೆ. ಇದರಿಂದ ಗುರಿಗೆ ಬೆಂಕಿ ಹೊತ್ತಿಕೊಂಡು, ಅದರ ಕಾರ್ಯನಿರ್ವಹಣೆ ಸ್ಥಗಿತಗೊಂಡು ಅದು ಪತನಗೊಳ್ಳುತ್ತದೆ.