ಬೆಂಗಳೂರಿನ ಬೆಮೆಲ್‌ ಕೇಂದ್ರ ಕಚೇರಿಗೆ ದೇಶದ ಮೊದಲ ಬುಲೆಟ್‌ ರೈಲಿನ ಬೋಗಿ ನಿರ್ಮಾಣ ಗುತ್ತಿಗೆ

| Published : Oct 16 2024, 12:39 AM IST / Updated: Oct 16 2024, 05:35 AM IST

ಸಾರಾಂಶ

ಮುಂಬೈ ಮತ್ತು ಅಹಮದಾಬಾದ್‌ ನಡುವೆ ಸಂಚರಿಸಲಿರುವ ದೇಶದ ಮೊಟ್ಟಮೊದಲ ಬುಲೆಟ್‌ ರೈಲಿನ ಬೋಗಿ ನಿರ್ಮಾಣದ ಗುತ್ತಿಗೆಯನ್ನು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿಇಎಂಎಲ್‌ (ಬೆಮೆಲ್‌) ಪಡೆದುಕೊಂಡಿದೆ.

ನವದೆಹಲಿ: ಮುಂಬೈ ಮತ್ತು ಅಹಮದಾಬಾದ್‌ ನಡುವೆ ಸಂಚರಿಸಲಿರುವ ದೇಶದ ಮೊಟ್ಟಮೊದಲ ಬುಲೆಟ್‌ ರೈಲಿನ ಬೋಗಿ ನಿರ್ಮಾಣದ ಗುತ್ತಿಗೆಯನ್ನು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿಇಎಂಎಲ್‌ (ಬೆಮೆಲ್‌) ಪಡೆದುಕೊಂಡಿದೆ.

ಎರಡು ಬುಲೆಟ್‌ ರೈಲಿನ ಬೋಗಿಗಳ ವಿನ್ಯಾಸ, ಉತ್ಪಾದನೆಯ ಹೊಣೆಯನ್ನು ಬೆಮೆಲ್‌ಗೆ ನೀಡಲಾಗಿದೆ. ಪ್ರತಿ ಬೋಗಿಗೆ 27.86 ಕೋಟಿ ರು. ನಿಗದಿಸಿದ್ದು, ಒಟ್ಟು ಒಪ್ಪಂದವು ವಿನ್ಯಾಸ, ಒಂದು ಬಾರಿಯ ಅಭಿವೃದ್ಧಿ, ಪುನರಾವರ್ತಿತವಲ್ಲದ ಶುಲ್ಕಗಳು, ಜಿಗ್‌, ಫಿಕ್ಚರ್‌ಗಳು, ಉಪಕರಣಗಳು ಮತ್ತು ಪರೀಕ್ಷಾ ಸೌಲಭ್ಯಗಳ ವೆಚ್ಚಗಳನ್ನು ಒಳಗೊಂಡಿರುತ್ತದೆ ಎಂದು ಕಂಪನಿ ತಿಳಿಸಿದೆ.

ಈ ಮೊದಲು ಅಹಮದಾಬಾದ್‌ ಮತ್ತು ಮುಂಬೈ ನಡುವಿನ ಬುಲೆಟ್‌ ರೈಲುಗಳಿಗೆ ಜಪಾನ್‌ನ ತಂತ್ರಜ್ಞಾನವನ್ನು ಅವಲಂಬಿಸಿದ್ದ ರೈಲ್ವೆ ಇಲಾಖೆ ಇದೀಗ ಈ ಮಾರ್ಗದಲ್ಲಿ ಸ್ವದೇಶಿ ನಿರ್ಮಿತ ರೈಲುಗಳನ್ನು ಆರಿಸಿದಂತಾಗಿದೆ. ಇದರ ವೆಚ್ಚವೂ ಕಡಿಮೆಯಿರಲಿದೆ.