ರಾಜ್ಯಗಳು ಹೆಚ್ಚಿನ ತೆರಿಗೆ ಪಾಲು ಕೇಳೋದು ಸಣ್ಣತನ : ಕೇಂದ್ರ ಸಚಿವ ಪಿಯೂಷ್‌ ಗೋಯಲ್‌

| N/A | Published : Feb 10 2025, 01:49 AM IST / Updated: Feb 10 2025, 05:26 AM IST

ಸಾರಾಂಶ

 ತೆರಿಗೆ  ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂಬ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬೇಡಿಕೆ ಸರಿಯಲ್ಲ. ತೆರಿಗೆಯಲ್ಲಿ ಪಾಲಿಗೆ ಅನುಗುಣವಾಗಿ ತಮಗೆ ಪಾಲು ಸಿಗಬೇಕು ಎನ್ನುವ ಚಿಂತನೆಯೇ ಸಂಕುಚಿನ ಮನೋಭಾವದ್ದು ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ವಿವಾದಿತ ಹೇಳಿಕೆ ನೀಡಿದ್ದಾರೆ.

ಮುಂಬೈ: ಕೇಂದ್ರ ಸರ್ಕಾರ ತೆರಿಗೆ ಪಾಲು ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂಬ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬೇಡಿಕೆ ಸರಿಯಲ್ಲ. ತಾವು ಕೇಂದ್ರಕ್ಕೆ ಸಲ್ಲಿಸಿದ ತೆರಿಗೆಯಲ್ಲಿ ಪಾಲಿಗೆ ಅನುಗುಣವಾಗಿ ತಮಗೆ ಪಾಲು ಸಿಗಬೇಕು ಎನ್ನುವ ಚಿಂತನೆಯೇ ಸಂಕುಚಿನ ಮನೋಭಾವದ್ದು ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ವಿವಾದಿತ ಹೇಳಿಕೆ ನೀಡಿದ್ದಾರೆ. ಜೊತೆಗೆ ಹೆಚ್ಚಿನ ತೆರಿಗೆ ಆದಾಯ ಹೊಂದಿರುವ ರಾಜ್ಯಗಳು, ಪ್ರಧಾನಿ ನರೇಂದ್ರ ಮೋದಿ ಅವರಂತೆ ವಿಶಾಲ ದೃಷ್ಟಿಕೋನದಿಂದ ಚಿಂತಿಸಬೇಕು ಎಂಬರ್ಥದಲ್ಲಿ ದಕ್ಷಿಣದ ರಾಜ್ಯಗಳಿಗೆ ಸಲಹೆಯನ್ನೂ ನೀಡಿದ್ದಾರೆ.

ಅನುದಾನ ತಾರತಮ್ಯದ ಕುರಿತು ಬಿಜೆಪಿಯೇತರ ಆಡಳಿತದ ದಕ್ಷಿಣದ ರಾಜ್ಯಗಳು ಕೇಂದ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದೂ ಸೇರಿದಂತೆ ನಾನಾ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ಹೊತ್ತಿನಲ್ಲೇ ಸಚಿವ ಗೋಯಲ್‌ ನೀಡಿರುವ ಹೇಳಿಕೆ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಸಾಧ್ಯತೆ ಇದೆ.

ಎಬಿವಿಪಿ ಶನಿವಾರ ಮುಂಬೈನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪಿಯೂಷ್‌ ಗೋಯಲ್‌, ‘ಕಳೆದ 11 ವರ್ಷಗಳಿಂದ ಮೋದಿ ಸರ್ಕಾರವು ಮಹಾಭಾರತದ ಅರ್ಜುನನಂತೆ ತನ್ನೆಲ್ಲಾ ಗುರಿಯನ್ನು ದೇಶದ ಈಶಾನ್ಯ ರಾಜ್ಯಗಳು ಮತ್ತು ಪೂರ್ವದ ರಾಜ್ಯಗಳ ಅಭಿವೃದ್ಧಿಗೆ ಮೀಸಲಿಟ್ಟಿದೆ. ಆದರೆ ದುರದೃಷ್ಟಕರ ವಿಷಯವೆಂದರೆ ಈ ಹಿಂದೆ ರಾಜ್ಯದಲ್ಲಿದ್ದ ಸರ್ಕಾರದ (ಮಹಾ ವಿಕಾಸ ಅಘಾಡಿ) ಕೆಲ ನಾಯಕರು, ಕೇಂದ್ರ ಸರ್ಕಾರಕ್ಕೆ ಮುಂಬೈ ಎಷ್ಟು ತೆರಿಗೆ ಕಟ್ಟಿತು? ಮಹಾರಾಷ್ಟ್ರ ಎಷ್ಟು ತೆರಿಗೆ ಕಟ್ಟಿತು? ಎಂದು ಲೆಕ್ಕಾಚಾರ ಹಾಕಿ ಅಷ್ಟೇ ಪಾಲನ್ನು ಕೇಂದ್ರ ಸರ್ಕಾರ ನಮಗೆ ಮರಳಿಸಬೇಕು ಎಂದು ಆಗ್ರಹಿಸುತ್ತಿದ್ದರು. ಆದರೆ ಸದ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ (ಬಿಜೆಪಿ) ಸರ್ಕಾರ ಹೆಚ್ಚು ಸ್ಪಂದನಶೀಲವಾಗಿದೆ. ಅವರು ದೇಶದ ಸಮಗ್ರ ದೃಷ್ಟಿಕೋನ ಹೊಂದಿದ್ದಾರೆ’ ಎಂದು ಹಾಲಿ ಬಿಜೆಪಿ ಸರ್ಕಾರ ಹೆಚ್ಚಿನ ತೆರಿಗೆ ಪಾಲಿಗೆ ಬೇಡಿಕೆ ಇಡುತ್ತಿಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಇನ್ನು ಕರ್ನಾಟಕ, ತಮಿಳುನಾಡು, ತೆಲಂಗಾಣದಂಥ ಕೆಲ ರಾಜ್ಯಗಳು ತಾವು ಕೇಂದ್ರಕ್ಕೆ ಪಾವತಿಸಿದಷ್ಟೇ ತೆರಿಗೆ ಹಣ ಕೇಂದ್ರ ಸರ್ಕಾರ ನಮಗೆ ಮರಳಿಸಬೇಕು ಎಂದು ಒತ್ತಾಯಿಸುತ್ತಿವೆ. ಇದಕ್ಕಿಂತ ಸಣ್ಣತನದ ಮನೋಭಾವ ಇನ್ನೊಂದಿಲ್ಲ. ಜೊತೆಗೆ ಇದಕ್ಕಿಂತ ಹೆಚ್ಚಿನ ದುರದೃಷ್ಟಕರವಾದ ಘಟನೆ ಇನ್ನೊಂದಿಲ್ಲ ಎಂದು ದಕ್ಷಿಣದ ರಾಜ್ಯಗಳ ವಿರುದ್ಧ ಕಿಡಿಕಾರಿದ್ದಾರೆ.

ಜೊತೆಗೆ, ದೇಶ ಸಮೃದ್ಧವಾಗಬೇಕಾದರೆ ಈಶಾನ್ಯ ಭಾಗದ ಏಳು ರಾಜ್ಯಗಳು ಮತ್ತು ಪೂರ್ವದ ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್‌ನಂಥ ರಾಜ್ಯಗಳು ಅಭಿವೃದ್ಧಿಯಾಗಬೇಕೆಂಬುದು ಪ್ರಧಾನಿ ಮೋದಿ ಅವರ ಅಭಿಪ್ರಾಯ. ಮೋದಿ ಅವರು ಕಳೆದ 11 ವರ್ಷಗಳಿಂದ ಅರ್ಜುನನ ರೀತಿ ಈಶಾನ್ಯ ಮತ್ತು ಪೂರ್ವದ ರಾಜ್ಯಗಳ ಮೇಲೆ ಗಮನ ನೆಟ್ಟಿದ್ದಾರೆ ಎಂದರು. ಇತರೆ ರಾಜ್ಯಗಳು ಕೂಡಾ ಇದೇ ರೀತಿಯ ಮನೋಭಾವ ಹೊಂದಿರಬೇಕು ಎಂದು ಗೋಯಲ್‌ ಸಲಹೆ ನೀಡಿದರು.

 ಗೋಯಲ್‌ ಹೇಳಿದ್ದೇನು?

-ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತಿತರ ರಾಜ್ಯಗಳು ಕೇಂದ್ರಕ್ಕೆ ರಾಜ್ಯಗಳು ಪಾವತಿಸುವ ತೆರಿಗೆ ಹಣದಷ್ಟೇ ಪಾಲನ್ನು ತಮಗೆ ನೀಡಬೇಕೆನ್ನುತ್ತಿವೆ.

-ಇದು ಸಣ್ಣತನದ ಆಲೋಚನೆ. ಹಾಗೆಯೇ ಇದು ದುರದೃಷ್ಟಕರ.