ಸಾರಾಂಶ
ಮುಂಬೈ: ಬಾಂಬೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸತತ 7ನೇ ದಿನವೂ ಗೆಲುವಿನ ನಾಗಾಲೋಟ ಮುಂದುವರೆಸಿದೆ. 4 ತಿಂಗಳ ಬಳಿಕ 80,000 ಗಡಿಯನ್ನು ದಾಟಿದೆ. ಬುಧವಾರ 520.90 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ 80,116.49ಕ್ಕೆ ಸ್ಥಿರಗೊಂಡಿತು. ದಿನದ ಮಧ್ಯದಲ್ಲಿ ಇದು 658.96 ಅಂಕ ಏರಿಕೆ ಕಂಡಿತಾದರೂ, ಮುಕ್ತಾಯದ ವೇಳೆಗೆ 520 ಅಂಕ ಮಾತ್ರ ಜಿಗಿಯಿತು.
ಮತ್ತೊಂದೆಡೆ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 161.70 ಅಂಕ ಏರಿಕೆಯಿಂದ 24,358.95ಕ್ಕೆ ತಲುಪಿತು. ವಿದೇಶಿ ಹಣ ಒಳಹರಿವು, ಐಟಿ ಕ್ಷೇತ್ರದಲ್ಲಿ ಉತ್ತಮ ಸಾಧನೆ, ಜಾಗತಿಕ ಮಾರುಕಟ್ಟೆಯಲ್ಲಿ ಗುಣಾತ್ಮಕ ಬೆಳವಣಿಗೆಗಳು ಏರಿಕೆಗೆ ಕಾರಣವಾಗಿವೆ. ಸೆನ್ಸೆಕ್ಸ್‌ನಲ್ಲಿ ಐಟಿ ಷೇರುಗಳಾದ ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರಾ, ಟಿಸಿಎಸ್ ಲಾಭಗಳಿಸಿತು. ಬ್ಯಾಂಕಿಂಗ್ ಷೇರುಗಳು ನಷ್ಟದಲ್ಲಿ ಮುಕ್ತಾಯಗೊಂಡಿತು.
ಚಿನ್ನದ ದರ ₹2400 ಇಳಿಕೆ: ₹1 ಲಕ್ಷಕ್ಕಿಂತ ಕೆಳಗೆ ಕುಸಿತ
ನವದೆಹಲಿ: ಮಂಗಳವಾರ ದಾಖಲೆಯ ಏರಿಕೆ ಕಂಡು 1 ಲಕ್ಷ ರು. ಗಡಿ ದಾಟಿದ್ದ ಚಿನ್ನದ ಬೆಲೆಯು ಬುಧವಾರ ಕೊಂಚ ಇಳಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನ 2400 ರು. ಇಳಿಕೆಯಾಗಿ 99.9 ಶುದ್ಧತೆಯ ಚಿನ್ನ 99,200 ರು.ಗೆ ತಲುಪಿದೆ.ಚೀನಾ ಮೇಲಿನ ತೆರಿಗೆಯನ್ನು ಕ್ರಮೇಣವಾಗಿ ಇಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ ಬೆನ್ನಲ್ಲೇ ಚಿನ್ನದ ಮೇಲಿನ ಬೇಡಿಕೆಯು ಕೊಂಚ ಇಳಿಕೆಯಾಗಿದೆ.
99.5 ಶುದ್ಧತೆಯ ಬಂಗಾರ ಬರೋಬ್ಬರಿ 3400 ರು. ಇಳಿದು, 98,700 ರು.ಗೆ ತಲುಪಿದೆ.ಆದರೆ ಬೆಳ್ಳಿ ಬೆಲೆ ಮಾತ್ರ ಏರುಗತಿಯಲ್ಲಿದ್ದು, ಬುಧವಾರ 700 ರು. ಏರಿಕೆಯಾಗಿ ಕೇಜಿ ಬೆಳ್ಳಿಗೆ 99,200 ರು.ಗೆ ಜಿಗಿದಿದೆ. ಮಂಗಳವಾರ ಚಿನ್ನ 1,01,600 ರು,ಗೆ ತಲುಪಿತ್ತು.