ಟ್ರಂಪ್ ತರಿಗೆ ಎಫೆಕ್ಟ್: ಭಾರತದ ಷೇರುಪೇಟೆಯಲ್ಲಿ ರಕ್ತಪಾತ : ಸೆನ್ಸೆಕ್ಸ್‌ 2,227, ನಿಫ್ಟಿ 742 ಪತನ

| N/A | Published : Apr 08 2025, 12:31 AM IST / Updated: Apr 08 2025, 05:14 AM IST

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವಿಶ್ವದ ಹಲವು ದೇಶಗಳ ವಸ್ತುಗಳ ಮೇಲೆ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದ ಬೆನ್ನಲ್ಲೇ ಜಾಗತಿಕ ಷೇರುಪೇಟೆಗಳು ಮಂಕಾಗಿದ್ದು, ಇದಕ್ಕೆ ಭಾರತ ಕೂಡ ಸೇರಿಕೊಂಡಿದೆ.  

ಮುಂಬೈ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವಿಶ್ವದ ಹಲವು ದೇಶಗಳ ವಸ್ತುಗಳ ಮೇಲೆ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದ ಬೆನ್ನಲ್ಲೇ ಜಾಗತಿಕ ಷೇರುಪೇಟೆಗಳು ಮಂಕಾಗಿದ್ದು, ಇದಕ್ಕೆ ಭಾರತ ಕೂಡ ಸೇರಿಕೊಂಡಿದೆ. ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ ಒಂದೇ ದಿನ 2227 ಅಂಕ ಹಾಗೂ ನಿಫ್ಟಿ 742 ಅಂಕಗಳ ಮಹಾಪತನ ಕಂಡಿವೆ. 10 ತಿಂಗಳಲ್ಲಿ (2024ರ ಲೋಕಸಭೆ ಚುನಾವಣೆ ಫಲಿತಾಂಶ ಘೋಷಣೆ ಬಳಿಕ) ಏಕದಿನದ ಅತಿ ಕನಿಷ್ಠ ಕುಸಿತವಾಗಿದೆ. ಇದರಿಂದ ಒಂದೇ ದಿನ ಹೂಡಿಕೆದಾರರಿಗೆ ₹14 ಲಕ್ಷ ಕೋಟಿ ನಷ್ಟವಾಗಿದೆ.ಸೆನ್ಸೆಕ್ಸ್‌ ಸತತ ಮೂರನೇ ದಿನವು ಇಳಿಕೆ ಕಂಡಿದೆ. ಸೋಮವಾರದ ಆರಂಭದಲ್ಲಿ 3939.6 ಅಂಕ (ಶೇ.5ರಷ್ಟು) ಕುಸಿತ ಕಂಡು 71,425ಕ್ಕೆ ಇಳಿದಿತ್ತು. ಅನಂತರ ಅಲ್ಪ ಚೇತರಿಕೆ ಕಂಡು ದಿನದ ಅಂತ್ಯಕ್ಕೆ 2,226.7 ಅಂಕ ಇಳಿಕೆಯಾಗಿ ದಿನದ ಅಂತ್ಯಕ್ಕೆ 73,137.9 ಅಂಕದಲ್ಲಿ ಮುಕ್ತಾಯಗೊಂಡಿತು.

ಇನ್ನು ನಿಫ್ಟಿಯಲ್ಲಿಯೂ ಇಳಿಕೆಯಾಗಿದ್ದು 742.8 ಅಂಕ ಕುಸಿತದೊಂದಿಗೆ 22,161ರಲ್ಲಿ ಅಂತ್ಯಗೊಂಡಿತು. ಮಧ್ಯಂತರದಲ್ಲಿ ನಿಫ್ಟಿ 1,160.8 (ಶೇ.5.06)ರಷ್ಟು ಕುಸಿದಿತ್ತು.

ಒಟ್ಟಾರೆ ಇಳಿಕೆ ಪ್ರಮಾಣ ಶೇ.3ರಷ್ಟಾಗಿದ್ದು, ಹೂಡಿಕೆದಾರರು ಸಂಪತ್ತು ಒಂದೇ ದಿನದಲ್ಲಿ 14 ಲಕ್ಷ ಕೋಟಿ ರು. ಕರಗಿದೆ.

ಹಿಂದುಸ್ತಾನ್‌ ಯುನಿಲಿವರ್‌ ಬಿಟ್ಟು ಇನ್ನೆಲ್ಲ ಕಂಪನಿಗಳ ಷೇರು ಭಾರಿ ಇಳಿಕೆ ಕಂಡಿವೆ. ಅಮೆರಿಕಕ್ಕೆ ಹೆಚ್ಚು ಉಕ್ಕು ರಫ್ತು ಮಾಡುವ ಟಾಟಾ ಸ್ಟೀಲ್‌ ಷೇರು ಶೇ.7.33ರಷ್ಟು ಇಳಿದಿದೆ.

ಕಳೆದ ವರ್ಷ ಜೂ.4ಕ್ಕೆ 4389 ಅಂಕ ಕುಸಿದಿತ್ತು:

ಇಷ್ಟೊಂದು ಏಕದಿನದ ಕುಸಿತ, 2024ರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಜೂ.4ರಂದು ಆಗಿತ್ತು. ಬಿಜೆಪಿಗೆ ಸಂಪೂರ್ಣ ಬಹುಮತ ಬಾರದೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಕಾರಣ 4,389.73 ಅಂಕ ಕುಸಿತ ಸಂಭವಿಸಿತ್ತು. ಅದಾದ ನಂತರದ ಒಂದು ದಿನದ ಗರಿಷ್ಠ ಕುಸಿತ ಈಗ ಆಗಿದೆ.

 ಅಮೆರಿಕ ಷೇರುಪೇಟೆ ಕೂಡ ಹೊಯ್ದಾಟ -

ದೇಶ ಅಂಕ ಇಳಿಕೆ ಶೇಕಡಾ ಅಂತ್ಯಜರ್ಮನಿ 917.77 6.5% 19,803

ಫ್ರಾನ್ಸ್‌ 286 5.7% 6,988.74ಬ್ರಿಟನ್‌ 331.93 4.12% 7,723.84

ಪಾಕಿಸ್ತಾನ 3,882.18 3.27% 114,909.48ಜಪಾನ್‌ 2,644.00 7.83% 31136.58

ಶಾಂಘೈ 245.43 7.3% 3,096.58ಹಾಂಕಾಂಗ್‌ 3,021.51 3.22% 19,828

ತೈವಾನ್ 2,065.87 9.70% 19,232.35

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿಶ್ವದ ಹಲವು ದೇಶಗಳ ವಸ್ತುಗಳ ಮೇಲೆ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದ ಬೆನ್ನಲ್ಲೇ ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಕಾಡುತ್ತಿದೆ. ಇದರ ಪರಿಣಾಮ, ಭಾರತ ಮಾತ್ರವಲ್ಲ, ಏಷ್ಯಾ ಹಾಗೂ ಯುರೋಪ್‌ ಮಾರುಕಟ್ಟೆಗಳು ಸೋಮವಾರ ಭಾರಿ ಕುಸಿತ ಕಂಡಿವೆ. ಖುದ್ದು ಅಮೆರಿಕ ಷೇರುಪೇಟೆಗಳೂ ಏರಿಳಿತ ಕಂಡಿವೆ.ಜರ್ಮನಿ ಷೇರುಪೇಟೆ ಶೇ.6.5ರಷ್ಟು ಭಾರಿ ಕುಸಿತ ಕಂಡಿದ್ದು, 19,803 ಅಂಕಕ್ಕೆ ಇಳಿದಿದೆ. ಫ್ರಾನ್ಸ್‌ ಷೇರುಪೇಟೆ ಶೇ.5.7ರಷ್ಟು ಕುಸಿದು 6,988.74ಕ್ಕೆ ಬಂದು ನಿಂತಿದೆ. ಬ್ರಿಟನ್‌ ಷೇರುಪೇಟೆ ಶೇ.4.5ರಷ್ಟು ಇಳಿದಿದ್ದು, 7,723.84ಅಂಕಕ್ಕೆ ಸ್ಥಿರವಾಗಿದೆ.

ಏಷ್ಯಾ ಷೇರುಪೇಟೆಗಳನ್ನು ಗಮನಿಸಬಹುದಾದರೆ ಪಾಕಿಸ್ತಾನದ ಷೇರುಪೇಟೆ ಮಧ್ಯಂತರದಲ್ಲಿ 8,600 ಸಾವಿರ ಅಂಕ ಕುಸಿದಿತ್ತು. ಬಳಿಕ 3,882 ಅಂಕ ಇಳಿದು 114,909.48ಕ್ಕೆ ಸ್ಥಿರವಾಗಿದೆ. ಭಾರಿ ಕುಸಿತದ ಆತಂಕದಿಂದ ಮಧ್ಯದಲ್ಲಿ 1 ತಾಸು ವಹಿವಾಟು ನಿಲ್ಲಿಸಲಾಗಿತ್ತು.ಜಪಾನ್‌ ಷೇರುಪೇಟೆ ಒಂದು ಹಂತದಲ್ಲಿ ಶೇ.8ರಷ್ಟು ಕುಸಿದು 31,758.28 ಅಂಕಕ್ಕೆ ಇಳಿಕೆ ಕಂಡಿತ್ತು. ಬಳಿಕ ಕೊಂಚ ಚೇತರಿಸಿ ಶೇ.6ರಷ್ಟು ಕುಸಿಯಿತು.

ಚೀನಾ ಮಾರುಕಟ್ಟೆಗಳು ಹೆಚ್ಚಾಗಿ ವಿಶ್ವ ಮಾರುಕಟ್ಟೆಯನ್ನು ಅನುಸರಿಸುವುದಿಲ್ಲ. ಆದರೂ ಅವು ಕುಸಿದಿವೆ. ಹಾಂಕಾಂಗ್‌ ಪೇಟೆ ಶೇ.13.5ರಷ್ಟು ಇಳಿದು 19,828.30ಕ್ಕೆ, ಶಾಂಘೈ ಪೇಟೆ ಶೇ.7.3ರಷ್ಟು ಇಳಿದು 3,096.58ಕ್ಕೆ ಹಾಗೂ ತೈವಾನ್‌ ಷೇರುಪೇಟೆ ಶೇ.9.7ರಷ್ಟು ಕುಸಿದಿದೆ. 

ಅಮೆರಿಕ ಪೇಟೆಗಳೂ ಕುಸಿತ:

ಈ ನಡುವೆ ಅಮೆರಿಕ ಷೇರುಪೇಟೆಗಳಾದ ಡೌ ಜೋನ್ಸ್ ಆರಂಭದಲ್ಲಿ 1,212.98 ಅಂಕ, ಎಸ್ ಆ್ಯಂಡ್‌ ಪಿ 181.37 ಅಂಕ ಹಾಗೂ ನಾಸ್ಡಾಕ್ 623.23 ಅಂಕ ಕುಸಿದರೂ ನಂತರ ಚೇತರಿಸಿಕೊಂಡವು. 

ಫ್ಲೋರಿಡಾ  ವಿಶ್ವದ ಅನೇಕ ದೇಶಗಳ ವಸ್ತುಗಳ ಆಮದಿಗೆ ಭಾರಿ ಸುಂಕ ಘೋಷಿಸಿ ವಿಶ್ವಾದ್ಯಂತ ಆರ್ಥಿಕ ವಿಪ್ಲವಕ್ಕೆ ಕಾರಣವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸುಂಕ ಘೋಷಣೆಯಿಂದ ಹಿಂದೆ ಸರಿಯುವ ಸಾಧ್ಯತೆಗಳನ್ನು ಸೋಮವಾರ ನಿರಾಕರಿಸಿದ್ದಾರೆ. ‘ಕೆಲವೊಮ್ಮೆ ಏನನ್ನಾದರೂ ಸರಿಪಡಿಸಲು ನೀವು ಔಷಧಿ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಖಡಕ್ಕಾಗಿ ಹೇಳಿದ್ದಾರೆ. ಅಲ್ಲದೆ, ಚೀನಾ ತನ್ನ ಪ್ರತಿತೆರಿಗೆ ಹಿಂಪಡೆಯದಿದ್ದರೆ ಕ್ರಮ ಕೈಗೊಳ್ಳುವೆ ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ ತಮ್ಮ ಟ್ರುತ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಕಚ್ಚಾತೈಲ ಬೆಲೆಗಳು ಕಡಿಮೆಯಾಗಿವೆ, ಬಡ್ಡಿದರಗಳು ಕಡಿಮೆಯಾಗಿವೆ. ಆಹಾರ ಬೆಲೆಗಳು ಕಡಿಮೆಯಾಗಿವೆ, ಹಣದುಬ್ಬರವಿಲ್ಲ. ಅಮೆರಿಕವನ್ನು ದುರುಪಯೋಗಪಡಿಸಿಕೊಂಡು ಭಾರಿ ಸುಂಕ ಪೀಕಿದ್ದ ದೇಶಗಳಿಂದ ಶತಕೋಟಿ ಡಾಲರ್‌ನಷ್ಟು ಹಣ ಮರಳಿ ತರುತ್ತಿದ್ದೇನೆ’ ಎಂದಿದ್ದಾರೆ. ಈ ಮೂಲಕ ತಮ್ಮ ತೆರಿಗೆ ಹೇರಿಕೆ ಕ್ರಮ ಸಮರ್ಥಿಸಿದ್ದಾರೆ.ಇದಕ್ಕೂ ಮುನ್ನ ಫ್ಲೋರಿಡಾ ಪ್ರವಾಸದಲ್ಲಿದ್ದ ಅವರು ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಕುಸಿತಕ್ಕೆ ಪ್ರತಿಕ್ರಿಯಿಸಿ, ‘ಮಾರುಕಟ್ಟೆಗಳಿಗೆ ಏನಾಗಲಿದೆ ಎಂದು ನಾನು ನಿಮಗೆ ಹೇಳಲಾರೆ. ಜಾಗತಿಕ ಮಾರುಕಟ್ಟೆಗಳು ಕುಸಿತ ಕಾಣುವುದು ನನಗೆ ಇಷ್ಟವಿಲ್ಲ. ಆದರೆ ಹಾಗಂತ ಕೆಲವು ವಿಪ್ಲವಗಳು ಸಂಭವಿಸಿದರೂ ಅದರಿಂದ ನನಗೆ ಚಿಂತೆಯಿಲ್ಲ. ಆದರೆ ನಮ್ಮ ದೇಶವು ಹೆಚ್ಚು ಬಲಿಷ್ಠವಾಗಿದೆ’ ಎಂದರು.

‘ಇತರ ದೇಶಗಳು ನಮ್ಮನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿವೆ. ಕೆಲವೊಮ್ಮೆ ಏನನ್ನಾದರೂ ಸರಿಪಡಿಸಲು ನೀವು ಔಷಧಿ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಮಾರ್ಮಿಕವಾಗಿ ನುಡಿದರು.ಟ್ರಂಪ್‌ ಘೋಷಿಸಿರುವ ಪರಿಷ್ಕೃತ ಆಮದು ಸುಂಕ ಬುಧವಾರದಿಂದ ಜಾರಿಗೆ ಬರಲಿದೆ. ಅವರು ಭಾರತದ ಮೇಲೆ ಶೇ.26, ಚೀನಾ ಮೇಲೆ ಹೆಚ್ಚುವರಿ ಶೇ.34 ಹಾಗೂ ವಿಶ್ವದ ಇನ್ನೂ ಅನೇಕ ದೇಶಗಳ ಮೇಲೆ ಭಾರಿ ಪ್ರಮಾಣದ ಆಮದು ಸುಂಕ ಹೇರಿದ್ದಾರೆ.

ಅಮೆರಿಕದ ಮೇಲೆ ಪ್ರತೀಕಾರವಿಲ್ಲ: ಭಾರತ

ನವದೆಹಲಿ: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಸ್ತುಗಳ ಆಮದಿನ ಮೇಲೆ ಶೇ.26 ರಷ್ಟು ಪ್ರತಿಸುಂಕ ವಿಧಿಸಿದ್ದಕ್ಕೆ ಭಾರತ ಪ್ರತೀಕಾರ ತೀರಿಸಿಕೊಳ್ಳಲು ಯೋಜಿಸಿಲ್ಲ’ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರ ಬದಲು, ‘ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆ ನಡೆಯುತ್ತಿದ್ದು, ಅದರತ್ತ ಗಮನ ಹರಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.‘ವಾಷಿಂಗ್ಟನ್‌ ಜೊತೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ಆರಂಭಿಸಿದ ಮೊದಲ ರಾಷ್ಟ್ರಗಳಲ್ಲಿ ಭಾರತವೂ ಒಂದು. ಇದು ಭಾರತಕ್ಕೆ ಅನುಕೂಲ ತರಲಿದೆ. ಹೀಗಾಗಿ ಈ ಹಂತದಲ್ಲಿ ಭಾರತವು ಅಮೆರಿಕ ವಸ್ತುಗಳ ಮೇಲೆ ಇನ್ನಷ್ಟು ತೆರಿಗೆ ಹೇರುವ ಚಿಂತನೆ ಮಾಡುವುದಿಲ್ಲ’ ಎಂದು ಅಧಿಕಾರಿ ಹೇಳಿದ್ದಾಗಿ ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದೇ ವೇಳೆ, ‘ಅಮೆರಿಕದ ಹೆಚ್ಚಿನ ಸುಂಕಗಳಿಂದ ಹಾನಿಗೊಳಗಾದ ದೇಶಗಳೆಂದರೆ ಚೀನಾ, ವಿಯೆಟ್ನಾಂ ಮತ್ತು ಇಂಡೋನೇಷ್ಯಾ. ಅವುಗಳಿಗೆ ಹೋಲಿಸಿದರೆ ಭಾರತ ಉತ್ತಮ ಸ್ಥಾನದಲ್ಲಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.ಟ್ರಂಪ್‌ ಘೋಷಣೆ ಮಾಡಿದ್ದ ಪ್ರತಿತೆರಿಗೆ ಏ.9ರಿಂದ ಜಾರಿಗೆ ಬರಲಿದೆ.

ತೆರಿಗೆ ಕಡಿತಕ್ಕೆ ಟ್ರಂಪ್‌ಗೆ 50 ದೇಶಗಳ ದುಂಬಾಲು

ವಾಷಿಂಗ್ಟನ್‌: ಅನೇಕ ದೇಶಗಳ ವಸ್ತುಗಳ ಆಮದಿಗೆ ಭಾರಿ ಸುಂಕ ಘೋಷಿಸಿ ವಿಶ್ವಾದ್ಯಂತ ಆರ್ಥಿಕ ವಿಪ್ಲವಕ್ಕೆ ಕಾರಣವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜತೆ ಈಗ ವಿಶ್ವದ 50 ದೇಶಗಳು ಸುಂಕ ಇಳಿಕೆ ಬಗ್ಗೆ ಮಾತುಕತೆ ನಡೆಸುತ್ತಿವೆ ಹಾಗೂ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿವೆ ಎಂಬ ಕುತೂಹಲದ ವಿಷಯ ಹೊರಬಿದ್ದಿದೆ.ಖುದ್ದು ಟ್ರಂಪ್‌ ಆಪ್ತರಾದ ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ನಿರ್ದೇಶಕ ಕೆವಿನ್ ಹ್ಯಾಸೆಟ್ ಈ ವಿಷಯ ತಿಳಿಸಿದ್ದಾರೆ. ಟ್ರಂಪ್‌ ಕೂಡ ಇದನ್ನು ದೃಢಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಹ್ಯಾಸೆಟ್, ‘ಮಾತುಕತೆಯನ್ನು ಪ್ರಾರಂಭಿಸಲು 50ಕ್ಕೂ ಹೆಚ್ಚು ದೇಶಗಳು ಅಧ್ಯಕ್ಷರ ಸಂಪರ್ಕದಲ್ಲಿವೆ ಎಂದು ನಿನ್ನೆ ರಾತ್ರಿ ನನಗೆ ವರದಿ ಸಿಕ್ಕಿದೆ. ತಾವು ಹೆಚ್ಚು ಸುಂಕ ಹಾಕುತ್ತಿದ್ದೇವೆ ಎಂದು ಆ ದೇಶಗಳಿಗೆ ಅರ್ಥವಾಗಿದೆ. ಹೀಗಾಗಿ ಅವು ಮಾತುಕತೆಗೆ ಮುಂದಾಗಿವೆ’ ಎಂದಿದ್ದಾರೆ.ಇದನ್ನು ದೃಢಪಡಿಸಿರುವ ಟ್ರಂಪ್‌, ‘ನಾನು ವಿಶ್ವದ, ಯುರೋಪ್‌ ಹಾಗೂ ಏಷ್ಯಾದ ಅನೇಕ ನಾಯಕರ ಜತೆ ಮಾತನಾಡಿದ್ದೇನೆ. ಅವರು ಅಮೆರಿಕ ಜತೆ ಒಪ್ಪಂದ ಮಾಡಿಕೊಳ್ಳಲು ಹಾತೊರೆಯುತ್ತಿದ್ದಾರೆ. ಒಪ್ಪಂದದಿಂದ ನಿಮಗೇನೂ ನಷ್ಟವಾಗುವುದಿಲ್ಲ ಎಂದು ನಾನು ಅವರಿಗೆ ಸ್ಪಷ್ಟಪಡಿಸಿದ್ದೇನೆ’ ಎಂದು ಹೇಳಿದ್ದಾರೆ.

ಷೇರು ಮಾರುಕಟ್ಟೆ ಕುಸಿತ; ಮೋದಿ ವಿರುದ್ಧ ರಾಹುಲ್ ಗರಂ

ನವದೆಹಲಿ: ಅಮೆರಿಕ ಹೇರಿರುವ ಪ್ರತಿಸುಂಕದ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ನಿರಂತರ ಕುಸಿತ ಉಂಟಾಗುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.‘ಟ್ರಂಪ್ ಭ್ರಮೆಯ ಮುಚ್ಚಳವನ್ನು ತೆರೆದಿದ್ದಾರೆ. ಆದರೆ ವಾಸ್ತವವು ಬೇರೆಯೇ ಇದೆ. ಪ್ರಧಾನಿ ಮೋದಿ ಎಲ್ಲಿಯೂ ಕಾಣುತ್ತಿಲ್ಲ. ಭಾರತ ವಾಸ್ತವವನ್ನು ಒಪ್ಪಿಕೊಳ್ಳಬೇಕು. ಎಲ್ಲಾ ಭಾರತೀಯರಿಗೂ ಅನುಕೂಲ ಕಲ್ಪಿಸುವ ಉತ್ಪಾದನೆ ಆಧರಿತ ಆರ್ಥಿಕತೆಯನ್ನು ನಿರ್ಮಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಭಾರತದ 4 ಅಗ್ರ ಶ್ರೀಮಂತರಿಗೆ 85 ಸಾವಿರ ಕೋಟಿ ರು. ನಷ್ಟ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಎಲ್ಲಾ ದೇಶಗಳ ವಿರುದ್ಧ ಪ್ರತಿತೆರಿಗೆ ವಿಧಿಸಿದರ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆಯು ಕುಸಿತ ಕಂಡಿದ್ದು, ಇದರ ಭಾಗವಾಗಿ ಭಾರತದಲ್ಲಿನ ಅಗ್ರ 4 ಶ್ರೀಮಂತರ ಆಸ್ತಿಯು 10 ಬಿಲಿಯನ್‌ ಡಾಲರ್‌ನಷ್ಟು (85,000 ಕೋಟಿ ರು.) ಕರಗಿದೆ.

ಈ ಪೈಕಿ ರಿಲಯನ್ಸ್‌ ಮುಖ್ಯಸ್ಥ, ದೇಶದ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಆಸ್ತಿಯು ಅತಿ ಹೆಚ್ಚು 3.6 ಬಿಲಿಯನ್‌ ಡಾಲರ್‌ (30,600 ಕೋಟಿ ರು.) ಕರಗಿ 7.4 ಲಕ್ಷ ಕೋಟಿ ರು.ಗೆ ತಲುಪಿದೆ. ಇವರ ನಂತರದಲ್ಲಿ ಅದಾನಿ ಸಂಸ್ಥೆಯ ಮುಖ್ಯಸ್ಥ ಗೌತಮ್‌ ಅದಾನಿ ಅವರ ಆಸ್ತಿಯು 3 ಬಿಲಿಯನ್‌ ಡಾಲರ್‌ (25,500 ಕೋಟಿ ರು.) ಕರಗಿ 4.87 ಲಕ್ಷ ಕೋಟಿ ರು.ಗೆ ತಲುಪಿದೆ.ದೇಶದ ಮೂರನೇ ಶ್ರೀಮಂತ ಉದ್ಯಮಿ ಸಾವಿತ್ರಿ ಜಿಂದಾಲ್‌ ಮತ್ತು ಕುಟುಂಬದ ಆಸ್ತಿಯು 2.2 ಬಿಲಿಯನ್‌ ಡಾಲರ್‌ (18,700 ಕೋಟಿ ರು.) ನಷ್ಟವಾಗಿದೆ.

ಎಚ್‌ಸಿಎಲ್‌ ಸ್ಥಾಪಕ ಶಿವ್‌ ನಾಡಾರ್‌ ಅವರು 1.5 ಬಿಲಿಯನ್‌ ಡಾಲರ್‌ (12,750 ಕೋಟಿ ರು.)ಗಳನ್ನು ಕಳೆದುಕೊಂಡಿದ್ದಾರೆ.