ಸಾರಾಂಶ
ಕೊಲಂಬೋ : ಪ್ರಧಾನಿ ನರೇಂದ್ರ ಮೋದಿ ಅವರ ಶ್ರೀಲಂಕಾ ಭೇಟಿ ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿ ಭಾರತ ಹಾಗೂ ಶ್ರೀಲಂಕಾ ರಕ್ಷಣಾ ಒಪ್ಪಂದ ಹಾಗೂ ಇಂಧನ ಕೇಂದ್ರ ಸ್ಥಾಪನೆ ಒಪ್ಪಂದ ಸೇರಿ 7 ಒಡಂಬಡಿಕೆಗೆ ಸಹಿ ಹಾಕಿವೆ. ಇವು ಈ ಪ್ರದೇಶದಲ್ಲಿ ಚೀನಾ ಪ್ರಭಾವ ತಗ್ಗಿಸಲು ಸಹಕಾರಿಯಾಗಲಿವೆ.
ಲಂಕಾ ಅಧ್ಯಕ್ಷ ಅನುರಕುಮಾರ ದಿಸ್ಸಾನಾಯಕೆ ಜತೆಗಿನ ಭೇಟಿ ವೇಳೆ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ರಕ್ಷಣಾ ಒಪ್ಪಂದದ ಸ್ವರೂಪವೇನು ಎಂಬುದನ್ನು ಎರಡೂ ದೇಶಗಳು ಬಹಿರಂಗಪಡಿಸಿಲ್ಲ. ಆದರೆ ಲಂಕಾದಲ್ಲಿ ಭಾರತ 35 ವರ್ಷ ಹಿಂದೆ ಶಾಂತಿ ಪಡೆಗಳನ್ನು ನಿಯೋಜಿಸಿದ ನಂತರದ ಮಹತ್ವದ ಒಪ್ಪಂದ ಇದಾಗಿದೆ.
ಇದೇ ವೇಳೆ ಭಾರತಕ್ಕೆ ಹತ್ತಿರ ಇರುವ ಟ್ರಿಂಕೋಮಲಿ ಬಂದರನ್ನು ಇಂಧನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇಲ್ಲಿ ಯುಎಇ ಜತೆಗೂಡಿ ಭಾರತ ಇಂಧನ ಕೇಂದ್ರ ಅಭಿವೃದ್ಧಿಪಡಿಸಲಿದೆ. ಇಲ್ಲಿ ಇಂಡಿಯನ್ ಆಯಿಲ್ ತನ್ನ ತೈಲ ಕೇಂದ್ರ ಸ್ಥಾಪನೆ ಮಾಡುವ ನಿರೀಕ್ಷೆ ಇದೆ. ಇದರ ಜತೆಗೆ ಟ್ರಿಂಕೋಮಲಿಯು ಸಾಗರ ತಳದ ಸಂಶೋಧನೆ, ಭಾರತದ ಹಡಗು ಲಂಗರು ಹಾಕಲು ಸಹಕಾರಿ ಆಗಲಿದೆ.
ಈಗಾಗಲೇ ಲಂಕಾದ ಹಂಬನ್‌ತೋಟ ಬಂದರನ್ನು ಚೀನಾ ಅಭಿವೃದ್ಧಿಪಡಿಸಿ ತನ್ನ ಪ್ರಭಾವ ಹೊಂದಿದೆ. ಆದರೆ ಭಾರತದ ಹೊಸ ನಡೆಯು ಲಂಕಾದಲ್ಲಿನ ಚೀನಾ ಪ್ರಭಾವ ತಗ್ಗಿಸಲಿದೆ. ಇದನ್ನು ವ್ಯೂಹಾತ್ಮಕ ಸಂಬಂಧಗಳನ್ನು ಬಲಪಡಿಸುವ ಪ್ರಮುಖ ಕ್ರಮವೆಂದು ಪರಿಗಣಿಸಲಾಗಿದೆ.
--ಭಾರತ-ಶ್ರೀಲಂಕಾ ಒಪ್ಪಂದಗಳು:- ಮೊದಲ ಬಾರಿ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ. ಈ ಮೂಲಕ ಪರಸ್ಪರ ಸೇನಾ ಸಹಕಾರ, ಶಸ್ತ್ರಾಸ್ತ್ರ ಸಾಗಣೆ, ಇತ್ಯಾದಿ ರಕ್ಷಣಾ ವ್ಯವಹಾರ ಸುಲಭ- ಭಾರತಕ್ಕೆ ಹತ್ತಿರ ಇರುವ ಟ್ರಿಂಕೋಮಲಿ ಬಂದರನ್ನು ಇಂಧನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಒಪ್ಪಂದ. ಈ ಮೂಲಕ ಸಾಗರ ತಳದ ಸಂಶೋಧನೆ, ಭಾರತದ ಹಡಗು ಲಂಗರು ಹಾಕಲು ಸಹಕಾರಿ- ಶ್ರೀಲಂಕಾದ ಪೂರ್ವ ವಲಯದ ಅಭಿವೃದ್ಧಿಗೆ ಭಾರತದಿಂದ 240 ಕೋಟಿ ರು. ಅನುದಾನ- ಇದರಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಈ ಭಾಗದ ಏಳ್ಗೆ
- ಲಂಕಾಗೆ ನೀಡಲಿರುವ ಸಾಲದ ಬಡ್ಡಿ ಇಳಿಕೆಗೆ ಭಾರತ ಸಮ್ಮತಿ. ಆರೋಗ್ಯ, ಔಷಧ, ಡಿಜಿಟಲ್, ಇಂಧನ ಆಮದು-ರಫ್ತು ಒಪ್ಪಂದವೂ ಅಂತಿಮ