ಜಾಗತಿಕ ತೆರಿಗೆ ದಾಳಿಯಿಂದ ಭಾರತಕ್ಕೆ ಲಾಭ ? ಬಾಂಗ್ಲಾ, ಚೀನಾ, ವಿಯೆಟ್ನಾಂ ಮೇಲೆ ಹೆಚ್ಚಿನ ತೆರಿಗೆ

| N/A | Published : Apr 04 2025, 12:48 AM IST / Updated: Apr 04 2025, 04:22 AM IST

ಜಾಗತಿಕ ತೆರಿಗೆ ದಾಳಿಯಿಂದ ಭಾರತಕ್ಕೆ ಲಾಭ ? ಬಾಂಗ್ಲಾ, ಚೀನಾ, ವಿಯೆಟ್ನಾಂ ಮೇಲೆ ಹೆಚ್ಚಿನ ತೆರಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂದುಕೊಂಡಂತೆ ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಶೇ.27ರಷ್ಟು ಪ್ರತಿ ತೆರಿಗೆ ಘೋಷಿಸಿದೆ. ಮೇಲ್ನೋಟಕ್ಕೆ ಇದರಿಂದ ಭಾರತದ ರಫ್ತಿಗೆ ಭಾರೀ ಹೊಡೆತ ಬೀಳುವುದು ನಿಶ್ಚಿತ. ಆದರೆ, ಏಷ್ಯಾದ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಭಾರತದ ಮೇಲೆ ಹಾಕಿರುವ ತೆರಿಗೆ ಕಡಿಮೆ.  

 ನವದೆಹಲಿ: ಅಂದುಕೊಂಡಂತೆ ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಶೇ.27ರಷ್ಟು ಪ್ರತಿ ತೆರಿಗೆ ಘೋಷಿಸಿದೆ. ಮೇಲ್ನೋಟಕ್ಕೆ ಇದರಿಂದ ಭಾರತದ ರಫ್ತಿಗೆ ಭಾರೀ ಹೊಡೆತ ಬೀಳುವುದು ನಿಶ್ಚಿತ. ಆದರೆ, ಏಷ್ಯಾದ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಭಾರತದ ಮೇಲೆ ಹಾಕಿರುವ ತೆರಿಗೆ ಕಡಿಮೆ. ಹಾಗಾಗಿ ಏಷ್ಯಾದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತ ತನ್ನ ಉತ್ಪನ್ನಗಳನ್ನು ಸ್ಪರ್ಧಾತ್ಮಕ ದರಕ್ಕೆ ಮಾರಲು ಅವಕಾಶ ಇದೆ ಎಂದು ಉದ್ಯಮ ತಜ್ಞರು ವಿಶ್ಲೇಷಿಸಿದ್ದಾರೆ.

ಟೆಕ್ಸ್‌ಟೈಲ್‌ ಉದ್ಯಮ:

ಕಳೆದ ವರ್ಷ ಭಾರತದಿಂದ ಅಮೆರಿಕಕ್ಕೆ 59,794 ಕೋಟಿ ರು. ಟೆಕ್ಸ್‌ಟೈಲ್‌ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಭಾರತದ ವಸ್ತ್ರಗಳ ರಫ್ತಿನ ಮೇಲೆ ಅಮೆರಿಕವು ಶೇ.27ರಷ್ಟು ತೆರಿಗೆ ಹಾಕಿದ್ದರೂ ಪ್ರತಿಸ್ಪರ್ಧಿ ವಿಯೆಟ್ನಾಂ (ಶೇ.46) ಮತ್ತು ಬಾಂಗ್ಲಾದೇಶ (ಶೇ.37)ಕ್ಕೆ ಹೋಲಿಸಿದರೆ ಇದು ಕಡಿಮೆ. ಇದರಿಂದಾಗಿ ವಿಯೆಟ್ನಾಂ, ಬಾಂಗ್ಲಾ, ಚೀನಾ, ಕಾಂಬೋಡಿಯಾ ಮತ್ತು ಶ್ರೀಲಂಕಾ ದೇಶಗಳತ್ತ ಮುಖಮಾಡಿರುವ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳು ಮುಂದಿನ ದಿನಗಳಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಭಾರತಕ್ಕೆ ವರ್ಗಾಯಿಸುವ ಸಾಧ್ಯತೆಯೂ ಇಲ್ಲದಿಲ್ಲ.

ವಜ್ರ, ಸೋಲಾರ್‌ ಪ್ಯಾನಲ್‌:

ಅಮೆರಿಕದ ಪ್ರತಿ ತೆರಿಗೆಯು ಭಾರತದ ವಜ್ರದ ರಫ್ತಿನ ಮೇಲೆ ಅಡ್ಡ ಪರಿಣಾಮ ಬೀರಲಿದೆ. ಕಳೆದ ವರ್ಷ ಭಾರತವು ಅಮೆರಿಕಕ್ಕೆ 76,870 ಕೋಟಿ ರು.ನಷ್ಟು ವಜ್ರಗಳನ್ನು ರಫ್ತು ಮಾಡಿದೆ. ಇದರ ಜತೆಗೆ 42,708 ಕೋಟಿ ರು.ನಷ್ಟು ಸ್ಮಾರ್ಟ್ ಪೋನ್‌ಗಳು ಹಾಗೂ 17 ಸಾವಿರ ಕೋಟಿಯಷ್ಟು ಸೋಲಾರ್‌ ಪಿವಿ ಮಾಡ್ಯೂಲ್‌ಗಳನ್ನು ರಫ್ತು ಮಾಡಲಾಗಿದೆ. ಭಾರತದ ಸ್ಮಾರ್ಟ್‌ಫೋನ್‌ಗಳು ಮತ್ತು ಸೋಲಾರ್‌ ಮಾಡ್ಯೂಲ್‌ಗಳಿಗೆ ಅಮೆರಿಕವು ದೊಡ್ಡ ಮಾರುಕಟ್ಟೆ. ಹೀಗಾಗಿ ದೊಡ್ಡಣ್ಣನ ಪ್ರತಿ ತೆರಿಗೆಯಿಂದಾಗಿ ನಮ್ಮ ರಫ್ತು ಮೇಲೆ ಹೊಡೆತ ಬಿದ್ದೇ ಬೀಳುತ್ತದೆ. ಆದರೆ, ಸ್ಮಾರ್ಟ್‌ ಫೋನ್‌ ಮತ್ತು ಸೋಲಾರ್‌ ಮಾಡ್ಯೂಲ್‌ ರಫ್ತಿನಲ್ಲಿ ಭಾರತಕ್ಕಿಂತ ವಿಯೆಟ್ನಾಂ ಮುಂದಿದೆ. ವಿಯೆಟ್ನಾಂ ಮೇಲೆ ಹೆಚ್ಚಿನ ಪ್ರತಿ ತೆರಿಗೆ ಬಿದ್ದಿರುವುದರಿಂದ ಅದರ ಲಾಭ ಮುಂದಿನ ದಿನಗಳಲ್ಲಿ ಭಾರತಕ್ಕೆ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೆಷಿನರಿ, ಆಟಿಕೆ, ಆಟೋ ಬಿಡಿಭಾಗ:

ಚೀನಾ ಮತ್ತು ಥಾಯ್ಲೆಂಡ್‌ ದೇಶಗಳಲ್ಲಿ ಉತ್ಪಾದನೆಯಾಗುವ ಮೆಷಿನರಿ, ಆಟಿಕೆ ಮತ್ತು ಆಟೋ ಬಿಡಿಭಾಗಗಳ ಮೇಲೆ ಅಮೆರಿಕವು ಹೆಚ್ಚಿನ ಪ್ರತಿ ತೆರಿಗೆ ಹಾಕಿದೆ. ಭಾರತವು ಇದನ್ನೇ ಬಂಡವಾಳ ಮಾಡಿಕೊಂಡು ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಈ ದೇಶಗಳಿಗೆ ಪರ್ಯಾಯವಾಗಿ ಈ ಕ್ಷೇತ್ರದಲ್ಲಿ ಬೆಳೆಯಲು ಅವಕಾಶ ಇದೆ.

ಸೆಮಿಕಂಡಕ್ಟರ್‌:

ತೈವಾನ್‌, ದಕ್ಷಿಣ ಕೊರಿಯಾಗೆ ಹೋಲಿಸಿದರೆ ಭಾರತವು ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಆರಂಭಿಕ ಹೆಜ್ಜೆ ಇಡುತ್ತಿದೆ ಅಷ್ಟೆ. ಇದೀಗ ತೈವಾನ್‌, ದಕ್ಷಿಣ ಕೊರಿಯಾ ಮೇಲೆ ಅಮೆರಿಕವು ಹೆಚ್ಚಿನ ತೆರಿಗೆ ವಿಧಿಸುತ್ತಿರುವುದರಿಂದ ಅಲ್ಲಿನ ಕೆಲ ಸೆಮಿಕಂಡಕ್ಟರ್‌ ಕಂಪನಿಗಳು ತನ್ನ ಉತ್ಪಾದನಾ ವಿಭಾಗಗಳನ್ನು ಬೇರೆಡೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ. ಭಾರತವು ಅಂತಾರಾಷ್ಟ್ರೀಯ ಚಿಪ್‌ ಇಕೋಸಿಸ್ಟಂಗೆ ಬೇಕಿರುವ ಮೂಲಸೌಲಭ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಿದ್ದೇಆದರೆ ಈ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ನಮ್ಮ ದೇಶಕ್ಕೆ ಹರಿದುಬರಲಿದೆ.

ಟ್ರಂಪ್‌ ಜಾಗತಿಕ ತೆರಿಗೆ ಯುದ್ಧ ಆರಂಭ

ವಾಷಿಂಗ್ಟನ್‌: ದೇಶೀಯ ಉದ್ಯಮಗಳಿಗೆ ಆದ್ಯತೆ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿರುವ ಗುರಿಯೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತ ಸೇರಿದಂತೆ ವಿವಿಧ ವಿವಿಧ ದೇಶಗಳ ಮೇಲೆ ಬುಧವಾರ ಪ್ರತಿತೆರಿಗೆ ಘೋಷಿಸಿದ್ದಾರೆ. ವಿಯೆಟ್ನಾಂಗೆ ಶೇ.46, ಥಾಯ್ಲೆಂಡ್‌ಗೆ ಶೇ.34, ಚೀನಾಕ್ಕೆ ಶೇ.34 ಹೀಗೆ ಒಂದೊಂದು ದೇಶಗಳಿಗೆ ಒಂದೊಂದು ರೀತಿಯ ಪ್ರತಿತೆರಿಗೆ ಹಾಕಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ತೆರಿಗೆ ಯುದ್ಧಕ್ಕೆ ನಾಂದಿ ಹಾಡಿದ್ದಾರೆ.

ಅಮೆರಿಕದ ಈ ನಡೆಯಿಂದಾಗಿ ವಿಶ್ವಾದ್ಯಂತ ಅಟೋಮೊಬೈಲ್‌, ಡೈರಿ, ಸ್ಟೀಲ್‌ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರೀ ತಲ್ಲಣ ಸೃಷ್ಟಿಯಾಗಿದೆ.ಹಲವು ದಶಕಗಳ ಕಾಲ ನಮ್ಮ ದೇಶವನ್ನು ಸ್ನೇಹಿತರು ಸೇರಿ ಎಲ್ಲರೂ ವ್ಯಾಪಾರದ ಹೆಸರಿನಲ್ಲಿ ಲೂಟಿ, ಅತ್ಯಾಚಾರ ಮಾಡಿದ್ದಾರೆ. ಇದೀಗ ನ್ಯಾಯಸಮ್ಮತ ವ್ಯಾಪಾರಕ್ಕಾಗಿ ಆ ದೇಶಗಳ ಮೇಲೆ ಪ್ರತಿ ತೆರಿಗೆ ಹಾಕುತ್ತಿದ್ದೇವೆ. ಇಂದು ವಿಮೋಚನೆಯ ದಿನ. ಈ ದಿನವನ್ನು ಅಮೆರಿಕದ ಉದ್ಯಮ ಉದ್ಯಮದ ಮರುಹುಟ್ಟಿನ ದಿನವಾಗಿ ನೆನಪಿನಲ್ಲಿಟ್ಟುಕೊಳ್ಳಲಾಗುತ್ತದೆ ಎಂದು ಪ್ರತಿ ತೆರಿಗೆ ಘೋಷಿಸಿದ ಬಳಿಕ ಟ್ರಂಪ್‌ ಹೇಳಿದ್ದಾರೆ.

ಈ ರೀತಿಯ ತೆರಿಗೆಯ ಮೂಲಕ ಅಮೆರಿಕದ ಖಜಾನೆಗೆ ನೂರಾರು ಶತಕೋಟಿ ಆದಾಯ ಬರಲಿದೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರವನ್ನು ನ್ಯಾಯಸಮ್ಮತಗೊಳಿಸಲಿದೆ ಎಂದು ಟ್ರಂಪ್‌ ಇದೇ ವೇಳೆ ತಿಳಿಸಿದರು.ಚೀನಾ ಕಿಡಿ: ಅಮೆರಿಕದ ಪ್ರತಿ ತೆರಿಗೆಗೆ ಚೀನಾ ಕಿಡಿಕಾರಿದೆ. ತನ್ನ ದೇಶದ ಹಿತಾಸಕ್ತಿ ಕಾಪಾಡಲು ಬದ್ಧ ಎಂದು ಚೀನಾ ಘೋಷಿಸಿದೆ. ಈ ಮೂಲಕ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಪ್ರತಿ ತೆರಿಗೆ ಹಾಕುವ ಸಂದೇಶ ನೀಡಿದೆ.

 ಯಾವ್ಯಾವ ದೇಶಗಳ ಮೇಲೆ ಎಷ್ಟೆಷ್ಟು ತೆರಿಗೆ?

ವಿಯೆಟ್ನಾಂ ಶೇ.46 

ಥಾಯ್ಲೆಂಡ್‌ ಶೇ.36

ಚೀನಾ ಶೇ.34 

ತೈವಾನ್‌ ಶೇ.32

ಪಾಕಿಸ್ತಾನ ಶೇ.29 

ಇಯು ಶೇ.20

ಜಪಾನ್‌ ಶೇ.24