ಚೀನಿಯರೊಡನೆ ಅಮೆರಿಕ ನೌಕರರ ಪ್ರಣಯ/ಲೈಂಗಿಕ ಸಂಬಂಧ ನಿಷಿದ್ಧ! ನಿರ್ಧಾರಕ್ಕೆ ಕಾರಣ ಏನು?

| N/A | Published : Apr 04 2025, 12:47 AM IST / Updated: Apr 04 2025, 04:24 AM IST

ಸಾರಾಂಶ

ಅಮೆರಿಕ ಸರ್ಕಾರವು ಚೀನಾದಲ್ಲಿರುವ ಅಮೆರಿಕದ ಸರ್ಕಾರಿ ಸಿಬ್ಬಂದಿ, ಕುಟುಂಬ ಸದಸ್ಯರು, ಭದ್ರತಾ ಅನುಮತಿ ಹೊಂದಿರುವ ಗುತ್ತಿಗೆದಾರರು ಚೀನಾದ ನಾಗರಿಕರೊಂದಿಗೆ ಯಾವುದೇ ಪ್ರಣಯ ಅಥವಾ ಲೈಂಗಿಕ ಸಂಬಂಧ ಹೊಂದುವುದನ್ನು ನಿಷೇಧಿಸಿದೆ.

ವಾಷಿಂಗ್ಟನ್: ಅಮೆರಿಕ ಸರ್ಕಾರವು ಚೀನಾದಲ್ಲಿರುವ ಅಮೆರಿಕದ ಸರ್ಕಾರಿ ಸಿಬ್ಬಂದಿ, ಕುಟುಂಬ ಸದಸ್ಯರು, ಭದ್ರತಾ ಅನುಮತಿ ಹೊಂದಿರುವ ಗುತ್ತಿಗೆದಾರರು ಚೀನಾದ ನಾಗರಿಕರೊಂದಿಗೆ ಯಾವುದೇ ಪ್ರಣಯ ಅಥವಾ ಲೈಂಗಿಕ ಸಂಬಂಧ ಹೊಂದುವುದನ್ನು ನಿಷೇಧಿಸಿದೆ. ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಬೀಜಿಂಗ್‌ನಲ್ಲಿರುವ ರಾಯಭಾರ ಕಚೇರಿ ಮತ್ತು ಗುವಾಂಗ್‌ಝೌ, ಶಾಂಘೈ, ಶೆನ್ಯಾಂಗ್ ಮತ್ತು ವುಹಾನ್‌ನಲ್ಲಿರುವ ದೂತಾವಾಸಗಳು ಹಾಗೂ ಹಾಂಗ್ ಕಾಂಗ್‌ನ ಅರೆ ಸ್ವಾಯತ್ತ ಪ್ರದೇಶದಲ್ಲಿರುವ ದೂತಾವಾಸ ಸೇರಿದಂತೆ ಚೀನಾದ ಮುಖ್ಯ ಭೂಭಾಗದಲ್ಲಿರುವ ಅಮೆರಿಕದ ದೂತಾವಾಸಗಳಿಗೆ ಹೊಸ ನೀತಿ ಅನ್ವಯವಾಗಲಿದೆ. ಇದು ಚೀನಾದ ಹೊರಗೆ ನಿಯೋಜಿಸಲಾದ ಅಮೆರಿಕದ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ.

ಕಳೆದ ಬೇಸಿಗೆಯಲ್ಲಿಯೇ ಈ ನಿಯಮ ಜಾರಿಯಲ್ಲಿತ್ತು. ಆದರೆ ಚೀನಾದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು 5 ದೂತಾವಾಸಗಳಲ್ಲಿ ಗಾರ್ಡ್‌ಗಳು ಮತ್ತು ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಚೀನೀ ನಾಗರಿಕರೊಂದಿಗಿನ ಸಂಬಂಧವನ್ನು ಮಾತ್ರ ನಿಷೇಧಿಸಲಾಗಿತ್ತು. ಆದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಕೆಲವೇ ದಿನಗಳ ಮೊದಲು ಚೀನಾದಿಂದ ನಿರ್ಗಮಿಸಿದ ಬರ್ನ್ಸ್ ಈ ನೀತಿಯನ್ನು ವಿಸ್ತರಿಸಿದ್ದಾರೆ.