ಸಾರಾಂಶ
ಘಟನೆಯಲ್ಲಿ ಹಲವರಿಗೆ ಗಾಯವಾಗಿದ್ದು ಬಿಜೆಪಿ ಕೃತ್ಯ ಇದು ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಅಮೇಠಿ: ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ 25 ವರ್ಷಗಳ ಬಳಿಕ ಗಾಂಧಿಯೇತರ ಕುಟುಂಬದ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ನಿಂತಿದ್ದ ಹಲವು ಕಾರುಗಳಿಗೆ ದುಷ್ಕರ್ಮಿಗಳು ಭಾನುವಾರ ರಾತ್ರಿ ಕಲ್ಲೆಸೆದ ಘಟನೆ ನಡೆದಿದೆ. ಈ ವೇಳೆ ಕಾರಿನೊಳಗಿದ್ದ ಆರಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಂಗ್ರೆಸ್ ಜಿಲ್ಲಾ ವಕ್ತಾರ ಅನಿಲ್ ಸಿಂಗ್, ‘ಬಿಜೆಪಿಯು ಕಾಂಗ್ರೆಸ್ ಅಭ್ಯರ್ಥಿಯ ಕುರಿತು ಹತಾಶೆಗೊಂಡು ಈ ರೀತಿಯ ಕೃತ್ಯ ನಡೆಸಿದೆ. ಗೌರಿಗಂಜ್ ಬಳಿ ನಿಂತಿದ್ದ ಕಾರುಗಳ ಗಾಜಿಗೆ ಕಲ್ಲೆಸೆದು ಹಲವರಿಗೆ ಹಲ್ಲೆ ನಡೆಸಲು ಷಡ್ಯಂತ್ರ ನಡೆಸಿರುವ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದು ತಿಳಿಸಿದ್ದಾರೆ.
ಈ ನಡುವೆ ಹಲ್ಲೆಗೊಳಗಾದ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.