ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಸೇರಿ ವಿವಿಧ ವಿಚಾರಗಳಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಜಾ ಮತ್ತು ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗೆ ನಿರ್ಧರಿಸಿದೆ.

ನವದೆಹಲಿ: ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಸೇರಿ ವಿವಿಧ ವಿಚಾರಗಳಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಜಾ ಮತ್ತು ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗೆ ನಿರ್ಧರಿಸಿದೆ.

2 ಹಂತದಲ್ಲಿ ಪ್ರತಿಭಟನೆ

2 ಹಂತದಲ್ಲಿ ಪ್ರತಿಭಟನೆ ನಡೆಯಲಿದೆ. ಮೊದಲ ಹಂತದಲ್ಲಿ ಶುಕ್ರವಾರ ರಾಜ್ಯ ಚುನಾವಣಾ ಆಯೋಗದ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸುವಂತೆ ಎಲ್ಲಾ ಪ್ರದೇಶ ಕಾಂಗ್ರೆಸ್‌ ಸಮಿತಿಗಳಿಗೆ ಪಕ್ಷದ ಹೈಕಮಾಂಡ್‌ ನಿರ್ದೇಶನ ನೀಡಿದೆ. 2ನೇ ಹಂತದಲ್ಲಿ ಎಲ್ಲಾ ಜಿಲ್ಲಾ ಕಾಂಗ್ರೆಸ್‌ ಸಮಿತಿಗಳು ರಾಜ್ಯಮಟ್ಟದ ರೀತಿಯಲ್ಲೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಸೆ.28ರಂದು ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ.

ಭಾರೀ ಮತಚೋರಿ ಕುರಿತು ಬಹಿರಂಗಪಡಿಸುತ್ತಲೇ ಬಂದಿದ್ದಾರೆ

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ‘ಆರಂಭದಿಂದಲೂ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಬಿಜೆಪಿ ಮತ್ತು ಜ್ಞಾನೇಶ್‌ ಕುಮಾರ್‌ ನಡೆಸುತ್ತಿರುವ ಭಾರೀ ಮತಚೋರಿ ಕುರಿತು ಬಹಿರಂಗಪಡಿಸುತ್ತಲೇ ಬಂದಿದ್ದಾರೆ. ಇದೀಗ ಜ್ಞಾನೇಶ್‌ ಕುಮಾರ್‌ ವಂಚನೆ ಜಗಜ್ಜಾಹೀರಾಗಿದೆ. ರಾಷ್ಟ್ರವಿರೋಧಿ ಕೃತ್ಯಗಳಿಗಾಗಿ ಜ್ಞಾನೇಶ್‌ರನ್ನು ತಕ್ಷಣ ಬಂಧಿಸಬೇಕು’ ಎಂದು ಆಗ್ರಹಿಸಿದರು.

ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಶಿ ಅವರ ಆಕ್ಷೇಪಣೆಗಳನ್ನು ಬದಿಗೊತ್ತಿ ಎಸ್‌ಐಆರ್‌ ವಿಚಾರದಲ್ಲಿ ಜ್ಞಾನೇಶ್‌ ಕುಮಾರ್‌ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದರು ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿತ್ತು. ಈ ಕುರಿತು ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.