ತಾಯಂದಿರ ಎದೆಹಾಲಲ್ಲೂ ವಿಷಕಾರಿ ಯುರೇನಿಯಂ!

| Published : Nov 24 2025, 02:15 AM IST

ಸಾರಾಂಶ

ಶಿಶುಗಳ ಪಾಲಿಗೆ ಅಮೃತವಾಗಿರುವ ತಾಯಿಯ ಎದೆ ಹಾಲೇ ವಿಷವಾಗುತ್ತಿದೆ. ಬಿಹಾರದ 6 ಜಿಲ್ಲೆಗಳ ತಾಯಂದಿರು ತಮ್ಮ ಕರುಳ ಕುಡಿಗೆ ಉಣಿಸುವ ಹಾಲಿನಲ್ಲೇ ಯುರೇನಿಯಂ ಪತ್ತೆಯಾಗಿದೆ ಎಂದು ಪಟನಾದ ಸಂಶೋಧನಾ ಸಂಸ್ಥೆಯೊಂದು ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.

- ಬಿಹಾರದ 6 ಜಿಲ್ಲೆಗಳಲ್ಲಿ ಆತಂಕದ ಬೆಳವಣಿಗೆ

- ಅಂತರ್ಜಲದಲ್ಲಿನ ಯುರೇನಿಯಂ ಕಾರಣ

--

ಅಪಾಯ ಯೇಗೆ?

- ಬಿಹಾರದ 6 ಜಿಲ್ಲೆಗಳ 40 ಹಾಲುಣಿಸುತ್ತಿರುವ ತಾಯಂದಿರ ಆಯ್ಕೆ ಮಾಡಿ ಪರೀಕ್ಷೆ

- ಈ ವೇಳೆ ಅದರಲ್ಲಿ 5 ಪಿಪಿಬಿಯಷ್ಟು ಯುರೇನಿಯಂ ಪತ್ತೆ. ಇದು ಕಳವಳದ ವಿಚಾರ

- ಯುರೇನಿಯಂ ಅಂಶ ಹೆಚ್ಚಿದ್ದರೆ ಹುಟ್ಟುವ ಮಕ್ಕಳಲ್ಲಿ ಕಿಡ್ನಿ, ನರರೋಗ ಸಮಸ್ಯೆ ಸಂಭವ

- ಪಟನಾದ ವೈದ್ಯಕೀಯ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನ ವರದಿ ಎಚ್ಚರಿಕೆ

=-==

ನವದೆಹಲಿ: ಶಿಶುಗಳ ಪಾಲಿಗೆ ಅಮೃತವಾಗಿರುವ ತಾಯಿಯ ಎದೆ ಹಾಲೇ ವಿಷವಾಗುತ್ತಿದೆ. ಬಿಹಾರದ 6 ಜಿಲ್ಲೆಗಳ ತಾಯಂದಿರು ತಮ್ಮ ಕರುಳ ಕುಡಿಗೆ ಉಣಿಸುವ ಹಾಲಿನಲ್ಲೇ ಯುರೇನಿಯಂ ಪತ್ತೆಯಾಗಿದೆ ಎಂದು ಪಟನಾದ ಸಂಶೋಧನಾ ಸಂಸ್ಥೆಯೊಂದು ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.

ದೆಹಲಿಯ ಏಮ್ಸ್‌ ಸಹಯೋಗದಲ್ಲಿ ಪಟನಾದ ಮಹಾವೀರ್‌ ಕ್ಯಾನ್ಸರ್‌ ಸಂಸ್ಥೆ, 6 ಜಿಲ್ಲೆಗಳ ವ್ಯಾಪ್ತಿಯ 40 ಹಾಲುಣಿಸುತ್ತಿರುವ ತಾಯಂದಿರನ್ನು ಆಯ್ಕೆ ಮಾಡಿ, ಅವರ ಎದೆಹಾಲನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು. ಈ ವೇಳೆ ಅದರಲ್ಲಿ 5 ಪಿಪಿಬಿಯಷ್ಟು ಯುರೇನಿಯಂ ಪತ್ತೆಯಾಗಿದೆ. ಮಾದರಿಗೆ ಸಂಗ್ರಹಿಸಲಾದ ಎಲ್ಲಾ ಎದೆಹಾಲಲ್ಲೂ ಯುರೇನಿಯಂ - 238 ಕಣಗಳು ಪತ್ತೆಯಾಗಿವೆ. ಇಂಥ ಹಾಲು ಕುಡಿದ ಶೇ.70ರಷ್ಟು ಮಕ್ಕಳು ಕ್ಯಾನ್ಸರ್‌ ಹೊರತಾದ ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗಬಹುದು. ಮಕ್ಕಳಲ್ಲಿ ಕಿಡ್ನಿ, ನರರೋಗ ಮತ್ತಿತರೆ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಇಂಥ ಅಪಾಯ ತಾಯಿಗಿಂತ ಮಕ್ಕಳಲ್ಲೇ ಹೆಚ್ಚು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಇದೆಲ್ಲದರ ಹೊರತಾಗಿಯೂ ತಾಯಂದಿರು, ನವಜಾತ ಶಿಶುಗಳಿಗೆ ಎದೆ ಹಾಲು ಕುಡಿಸುವುದನ್ನು ಬಿಡಬಾರದು. ಮುಂದುವರೆಸಬೇಕು. ಎದೆಹಾಲಿನಲ್ಲಿ ಮಕ್ಕಳಿಗೆ ಇನ್ನೆಲ್ಲೂ ಸಿಗದ ಹಲವು ರೋಗನಿರೋಧಕ ಅಂಶಗಳು ಸಿಗುತ್ತವೆ ಎಂದು ವರದಿ ಹೇಳಿದೆ.

ಎಲ್ಲಿಂದ ಸೇರ್ಪಡೆ:

ಬಿಹಾರ ಈ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಅಂತರ್ಜಲವೇ ಮೂಲ. ಅಲ್ಲಿಯ ಭೂಮಿಯಲ್ಲಿ ಮೇಲ್ಮಟ್ಟದಲ್ಲೇ ಹೆಚ್ಚಿನ ಯುರೇನಿಯಂ ಅಂಶ ಕಂಡುಬರುತ್ತದೆ. ಹೀಗಾಗಿ ಈ ನೀರು, ಅದರಲ್ಲಿ ಬೆಳೆದ ಆಹಾರ ಸೇರಿಸುವ ಕಾರಣ ತಾಯಂದಿರ ದೇಹಕ್ಕೆ ಯುರೇನಿಯಂ ಸೇರ್ಪಡೆಯಾಗುತ್ತಿದೆ. ಜೊತೆಗೆ ಗಾಳಿಯಿಂದಲೂ ಯುರೇನಿಯಂ ಕಣಗಳು ದೇಹವನ್ನು ಸೇರುತ್ತಿದೆ. ಅಂತಿಮವಾಗಿ ಅದು ಎದೆಹಾಲಿನ ಭಾಗವಾಗಿ ಮಗುವಿಗೂ ವರ್ಗಾವಣೆಯಾಗುತ್ತಿದೆ.

ಎಲ್ಲೆಲ್ಲಿ ಪತ್ತೆ?:

ಸಮಷ್ಠೀಪುರ, ಬೇಗುಸರಾಯ್‌, ಭೋಜ್‌ಪುರ, ಖಗಾರಿಯಾ, ಕಟಿಹಾರ್‌ ಮತ್ತು ನಳಂದ ಜಿಲ್ಲೆಗಳಲ್ಲಿ ನಡೆಸಿದ ಸಂಶೋಧನೆ ವೇಳೆ ಈ ಆತಂಕಕಾರಿ ಬೆಳವಣಿಗೆ ಕಂಡುಬಂದಿದೆ.

ಆತಂಕವಿಲ್ಲ:

ಆದರೆ ವರದಿ ಬಗ್ಗೆ ತೀವ್ರ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಅಣು ವಿಜ್ಞಾನಿ ಡಾ। ದಿನೇಶ್‌ ಕೆ. ಅಸ್ವಾಲ್‌ ಪ್ರತಿಕ್ರಿಯಿಸಿದ್ದಾರೆ. ‘ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 30 ಪಿಪಿಬಿಯಷ್ಟು ಯುರೇನಿಯಂ ದೇಹ ಸೇರುವುದು ಅಪಾಯಕಾರಿಯಲ್ಲ. ಹೀಗಿರುವಾಗ ಎದೆಹಾಲಿನಲ್ಲಿ ಅದು ಬರೀ 5 ಪಿಪಿಬಿಯಷ್ಟು ಕಡಿಮೆ ಪ್ರಮಾಣದಲ್ಲಿರುವುದರಿಂದ ವಿಪರೀತ ಪರಿಣಾಮಗಳಾಗದು ಎದು ದಿನೇಶ್‌ ಹೇಳಿದ್ದಾರೆ.