ಝೀ ಗ್ರೂಪ್ ಸಂಸ್ಥಾಪಕ, ಉದ್ಯಮಿ ಸುಭಾಷ್ ಚಂದ್ರ ಅವರ ವೈಯಕ್ತಿಕ ದಿವಾಳಿತನ ಪ್ರಕರಣದಲ್ಲಿ 22 ಸಾವಿರ ಕೋಟಿ ರು. ಸಾಲಕ್ಕೆ ಪ್ರತಿಯಾಗಿ 6.5 ಕೋಟಿ ರು. ಅಷ್ಟೇ ವಸೂಲಿ ಮಾಡುವ ಪ್ರಸ್ತಾಪಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಒಪ್ಪಿಗೆ ನೀಡಿದೆ.
ನವದೆಹಲಿ: ಝೀ ಗ್ರೂಪ್ ಸಂಸ್ಥಾಪಕ, ಉದ್ಯಮಿ ಸುಭಾಷ್ ಚಂದ್ರ ಅವರ ವೈಯಕ್ತಿಕ ದಿವಾಳಿತನ ಪ್ರಕರಣದಲ್ಲಿ 22 ಸಾವಿರ ಕೋಟಿ ರು. ಸಾಲಕ್ಕೆ ಪ್ರತಿಯಾಗಿ 6.5 ಕೋಟಿ ರು. ಅಷ್ಟೇ ವಸೂಲಿ ಮಾಡುವ ಪ್ರಸ್ತಾಪಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಒಪ್ಪಿಗೆ ನೀಡಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಯೋಜನೆಯಡಿ 22 ಸಾವಿರ ಕೋಟಿ ರು. ಸಾಲದ ಬದಲು ಸಾಲ ನೀಡಿದ ಬ್ಯಾಂಕ್, ಹಣಕಾಸು ಕಂಪನಿಗಳಿಗೆ ಕೇವಲ 6.5 ಕೋಟಿ ರು.(ಉಳಿದ ವೆಚ್ಚ ಪ್ರತ್ಯೇಕ) ಅಷ್ಟೇ ವಸೂಲಿ ಆಗಲಿದೆ. ಸರಳವಾಗಿ ಹೇಳಬೇಕೆಂದರೆ ಬ್ಯಾಂಕ್‌ಗಳು ನೀಡಿದ ಪ್ರತಿ 100 ರು. ಸಾಲದಲ್ಲಿ ಕೇವಲ ಮೂರು ಪೈಸೆಯಷ್ಟೇ ವಾಪಸ್ ಆಗಲಿದೆ.
ಏಕೆ ಈ ಯೋಜನೆಗೆ ಒಪ್ಪಿಗೆ?:
ಪ್ರಕರಣದಲ್ಲಿ ಎನ್‌ಸಿಎಲ್‌ಟಿಯ ಇಬ್ಬರು ಸದಸ್ಯರು ವಿಭಜಿತ ಆದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಈ ವಿಚಾರವನ್ನು ಮೂರನೇ ಸದಸ್ಯರಾದ ನೀಲೇಶ್ ಶರ್ಮಾ ಅವರಿಗೆ ವಹಿಸಲಾಯಿತು. ಶರ್ಮಾ ಅವರು ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ ಸೆಕ್ಷನ್ 114ರ ಅಡಿ ಸಾಲ ಮರುಪಾವತಿಯ ಈ ಯೋಜನೆಗೆ ಅನುಮೋದನೆ ನೀಡಿದರು.
ಅಷ್ಟೊಂದು ಕಡಿಮೆ ಮೊತ್ತಕ್ಕೆ ಒಪ್ಪಿಗೆ ಹೇಗೆ?:
ಸುಭಾಷ್ ಚಂದ್ರ ಅವರ ವೈಯಕ್ತಿಕ ಆಸ್ತಿ ಮೌಲ್ಯ ತೀರಾ ಕಡಿಮೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಪ್ರಸ್ತಾಪಕ್ಕೆ ಸಾಲ ನೀಡಿರುವ ಎಲ್‌ಐಸಿ ಹೌಸಿಂಗ್ ಫೈನಾನ್ಸ್, ಆರ್‌ಬಿಎಲ್, ಐಡಿಬಿಐ ಸೇರಿ ಸುಭಾಷ್‌ಚಂದ್ರ ಅವರಿಗೆ ಸಾಲ ನೀಡಿದ ಹಲವು ಕಂಪನಿಗಳು, ಬ್ಯಾಂಕ್‌ಗಳು ವಿರೋಧ ವ್ಯಕ್ತಪಡಿಸಿವೆ. ಆದರೆ ಈ ದಿವಾಳಿತನ ಯೋಜನೆ ವಿರೋಧಿಸುವ ಸಾಲಗಾರರ ಮತದಾನ ಪ್ರಮಾಣ ಶೇ.20ಕ್ಕಿಂತ ಕಡಿಮೆ ಇದ್ದ ಹಿನ್ನೆಲೆಯಲ್ಲಿ 6.5 ಕೋಟಿ ರು. ಸಾಲ ಮರುಪಾವತಿ ಯೋಜನೆಗೆ ಈಗ ಅನುಮೋದನೆ ಸಿಕ್ಕಿದೆ.
ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಕಂಪನಿಯು ಕೆಲ ಕಂಪನಿಗಳಿಗೆ 726 ಕೋಟಿ ರು. ಸಾಲ ನೀಡಿತ್ತು. ಸುಭಾಷ್‌ಚಂದ್ರ ಅವರು ಈ ಸಾಲಕ್ಕೆ ಪ್ರತಿಯಾಗಿ ಗ್ಯಾರಂಟಿ ನೀಡಿದ್ದರು. ಯಾವಾಗ ಕಂಪನಿ ಸಾಲ ಮರುಪಾವತಿಯಲ್ಲಿ ವಿಫಲವಾಯಿತೋ ಆಗ 2022ರಲ್ಲಿ ಸುಭಾಷ್‌ಚಂದ್ರ ವಿರುದ್ಧ ಕಾನೂನು ಕ್ರಮ ಆರಂಭಿಸಿತು. 2024ರಿಂದಲೂ ಈ ಪ್ರಕರಣ ಎನ್‌ಸಿಎಲ್‌ಟಿ ಮುಂದಿದೆ. ಬ್ಯಾಂಕ್‌ಗಳು ಮೂಲ ಸಾಲದಾತರಿಂದ ಬಾಕಿ ವಸೂಲಿ ಮಾಡಲು ಅವಕಾಶವಿದೆ.