ಸಾರಾಂಶ
ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಪೌರತ್ವ ಸ್ಥಿತಿ ಮಾಹಿತಿ ಕೋರಿ, ಭಾರತೀಯ ಜನತಾ ಪಕ್ಷದ ನಾಯಕ, ಸುಬ್ರಮಣಿಯನ್ ಸ್ವಾಮಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
2019ರಲ್ಲಿ ರಾಹುಲ್, ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ತಮ್ಮನ್ನು ಬ್ರಿಟಿಷ್ ಪ್ರಜೆಯೆಂದು ಘೋಷಿಸಿಕೊಂಡಿದ್ದರು. ಭಾರತೀಯರು ದ್ವಿಪೌರತ್ವ ಹೊಂದುವಂತಿಲ್ಲ. ರಾಹುಲ್ ಸಾಂವಿಧಾನಿಕ ನಿಬಂಧನೆ ಉಲ್ಲೇಖಿಸಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ 2019ರಲ್ಲಿ ಕೇಂದ್ರ ಸರ್ಕಾರ ರಾಹುಲ್ ಬಳಿ ಸ್ಪಷ್ಟನೆ ಕೇಳಿ ನೋಟಿಸ್ ನೀಡಿತ್ತು. ಇದರ ಹೊರತಾಗಿಯೂ ತಮ್ಮ ದೂರಿನಲ್ಲಿ ಯಾವುದೇ ಬೆಳವಣಿಗೆ ಕಂಡುಬಾರದ ಹಿನ್ನೆಲೆ ಹೈಕೋರ್ಟ್ ಮೊರೆ ಹೋಗಿದ್ದು, ದೂರಿನ ಸ್ಥಿತಿಗತಿ ಕುರಿತು ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಅಡ ಇಟ್ಟಿದ್ದ 25 ಕೆ.ಜಿ. ಚಿನ್ನೊಂದಿಗೆ ಬ್ಯಾಂಕ್ ಮ್ಯಾನೇಜರ್ ಪರಾರಿ
ಕಲ್ಲಿಕೋಟೆ: ಬ್ಯಾಂಕ್ ಮ್ಯಾನೇಜರ್ ಒಬ್ಬರು ಬ್ಯಾಂಕ್‌ನಲ್ಲಿ ಅಡ ಇಟ್ಟಿದ್ದ 17 ಕೋಟಿ ರು. ಮೌಲ್ಯದ 25 ಕೆ.ಜಿ. ಚಿನ್ನಾಭರಣಗಳೊಂದಿಗೆ ಪರಾರಿಯಾದ ಘಟನೆ ಕೇರಳದಲ್ಲಿ ನಡೆದಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ವಡಕರ ಶಾಖೆಯ ಮಧು ಜಯಕರ್ ಈ ಆರೋಪಿ. ಘಟನೆ ಕುರಿತಂತೆ ಬ್ಯಾಂಕ್‌ನ ಹೊಸ ಮ್ಯಾನೇಜರ್ ಪೊಲಿಸರಿಗೆ ದೂರು ಸಲ್ಲಿಸಿದ್ದಾರೆ. ಮಧು 2023 ಜೂನ್‌ನಿಂದ 2024 ಜೂನ್ ವರೆಗೆ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರು. ಆ ವೇಳೆ ಗಿರವಿ ಇಟ್ಟಿದ್ದ ಚಿನ್ನಾಭರಣವನ್ನು ಕದ್ದು ನಕಲಿ ಚಿನ್ನಾಭರಣವಿಟ್ಟಿದ್ದರು. ಇದು ಇತ್ತೀಚಿಗೆ ಪತ್ತೆಯಾದ ಹಿನ್ನೆಲೆಯಲ್ಲಿ ಹೊಸ ಮ್ಯಾನೇಜರ್ ಇರ್ಷಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮೊದಲು ಅಘಾಡಿ ಸಿಎಂ ಅಭ್ಯರ್ಥಿ ಹೆಸರಿಸಿ: ನೀವು ಹೇಳಿದವರಿಗೆ ನಮ್ಮ ಬೆಂಬಲ’ಮುಂಬೈ: ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಮೊದಲು ಮಹಾ ವಿಕಾಸ ಅಘಾಡಿ ಸಿಎಂ ಅಭ್ಯರ್ಥಿ ಯಾರೆಂದು ಹೆಸರಿಸಿ. ನೀವು ಯಾರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುತ್ತೀರೋ ಅವರಿಗೆ ನನ್ನ ಬೆಂಬಲ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಯಾವ ಪಕ್ಷ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂಬ ತರ್ಕದಿಂದ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುವ ನೀತಿಗೆ ನೀವು ಹೋಗಬೇಡಿ. ಚುನಾವಣೆಗೂ ಮೊದಲೇ ಆಘಾಡಿ ಅಭ್ಯರ್ಥಿ ಯಾರೆಂದು ಘೋಷಿಸಿ. ಕಾಂಗ್ರೆಸ್ ಮತ್ತು ಎನ್‌ಸಿಪಿ (ಶರದ್ ಬಣ) ಆಘಾಡಿ ಸಿಎಂ ಎಂದು ಯಾರನ್ನು ಘೋಷಿಸುತ್ತೀರೋ ಅವರಿಗೆ ನನ್ನ ಬೆಂಬಲ ಎಂದಿದ್ದಾರೆ.
ಸೆನ್ಸೆಕ್ಸ್ 1300 ಅಂಕಗಳ ಏರಿಕೆ: ಹೂಡಿಕೆದಾರರಿಗೆ ₹7 ಲಕ್ಷ ಕೋಟಿ ಲಾಭ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಶುಕ್ರವಾರ 1330 ಅಂಕಗಳ ಭಾರೀ ಏರಿಕೆ ಕಂಡು 80518 ಅಂಕಗಳಲ್ಲಿ ಮುಕ್ತಾಯಾಗಿದೆ. ಇದೇ ವೇಳೆ ನಿಫ್ಟಿ ಕೂಡಾ 397 ಅಂಕ ಏರಿ 24541 ಅಂಕಗಳಲ್ಲಿ ಕೊನೆಗೊಂಡಿತು. ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಭೀತಿ ದೂರವಾಗಿದ್ದು, ಜಪಾನ್ ಕರೆನ್ಸಿ ಯೆನ್ ಚೇತರಿಕೆಯಾಗಿದ್ದ ಪರಿಣಾಮ ಜಾಗತಿಕ ಷೇರುಪೇಟೆಗಳು ಏರಿಕೆ ಕಂಡವು. ಅದರ ಪರಿಣಾಮ ಭಾರತದಲ್ಲೂ ಸೂಚ್ಯಂಕ ಭಾರೀ ಏರಿಕೆ ಕಂಡಿತು. ಐಟಿ ಮತ್ತು ಬ್ಯಾಂಕಿಂಗ್ ವಲಯದ ಷೇರು ಉತ್ತಮ ಏರಿಕೆ ಕಂಡವು. ಷೇರುಪೇಟೆಯಲ್ಲಿ ನೊಂದಾಯಿತ ಕಂಪನಿಗಳ ಷೇರು ಮೌಲ್ಯ ಏರಿಕೆ ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 7.3 ಲಕ್ಷ ಕೋಟಿ ರು.ನಷ್ಟು ಏರಿಕೆಯಾಯಿತು.
ಉಲ್ಘಾ ಉಗ್ರರು ಇಟ್ಟಿದ್ದ 2 ಐಇಡಿ ವಶ: 2 ದಿನದಲ್ಲಿ 10 ಸ್ಫೋಟಕ ಪತ್ತೆ
ಗುವಾಹಟಿ: ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಶುಕ್ರವಾರ ಎರಡು ಸುಧಾರಿತ ಸ್ಫೋಟಕ ಸಾಧನಗಳು ಪತ್ತೆಯಾಗಿದೆ. ಇದರೊಂದಿಗೆ ಕಳೆದ 24 ಗಂಟೆಗಳಲ್ಲಿ ರಾಜ್ಯದಾದ್ಯಂತ ಪತ್ತೆಯಾದ ಸ್ಫೋಟಕಗಳ ಸಂಖ್ಯೆ 10ಕ್ಕೆ ಏರಿದೆ. ನರೇಂಗಿ ಸೇನಾ ಕಂಟೋನ್ಮೆಂಟ್ ಬಳಿಯ ಸತ್ಗಾಂವ್ ಪ್ರದೇಶದಲ್ಲಿ ಒಂದು ಸಾಧನ ಹಾಗೂ ಮುಖ್ಯಮಂತ್ರಿ ನಿವಾಸವಿರುವ ರಾಜ್ಯ ಸಚಿವಾಲಯ ಮತ್ತು ಮಂತ್ರಿಗಳ ಕಾಲೋನಿಯ ಸಮೀಪದಲ್ಲಿರುವ ಲಾಸ್ಟ್ ಗೇಟ್‌ನಲ್ಲಿ ಮತ್ತೊಂದು ಸಾಧನ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೆಲಸವನ್ನು ನಾವೇ ಮಾಡಿರುವುದಾಗಿ ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ) ಉಗ್ರಗಾಮಿ ಗುಂಪು ಒಪ್ಪಿಕೊಂಡಿದೆ. 24 ಸ್ಥಳಗಳಲ್ಲಿ ಸ್ಫೋಟ ಮಾಡಿಸಲು ಮುಂದಾಗಿದ್ದಾಗಿಯೂ ಹೇಳಿಕೊಂಡಿದೆ.