ಸಾರಾಂಶ
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ನೀಟ್ ಹಾಗೂ ನೆಟ್ ಪರೀಕ್ಷೆಗಳಲ್ಲಿ ಅಕ್ರಮದ ಆರೋಪಗಳು ಕೇಳಿಬಂದ ಬೆನ್ನಲ್ಲೇ ಸಂಸ್ಥೆಯಲ್ಲಿ ಸುಧಾರಣೆ ತರಲು ಸಲಹೆಗಳನ್ನು ನೀಡುವಂತೆ ಉನ್ನತ ಮಟ್ಟದ ಸಮಿತಿಯು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮನವಿ ಮಾಡಿದೆ.
ಇಸ್ರೋದ ಮಾಜಿ ಮುಖ್ಯಸ್ಥ ಡಾ. ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ ಶಿಕ್ಷಣ ಸಚಿವಾಲಯ ಈ ಸಮಿತಿ ರಚಿಸಿದ್ದು, ಇದು ಸಂಸ್ಥೆ ನಡೆಸುವ ಪರೀಕ್ಷೆಗಳಲ್ಲಿ ಪಾರದರ್ಶಕತೆ, ನ್ಯಾಯೋಚಿತತೆಯನ್ನು ಖಚಿತಪಡಿಸುವ ಗುರಿ ಹೊಂದಿದೆ.
ನೀಟ್, ನೆಟ್ ಪರೀಕ್ಷೆಗಳ ಯಾಂತ್ರಿಕ ವ್ಯಸಸ್ಥೆ, ಡೇಟಾ ಸುರಕ್ಷತೆಗೆ ಕ್ರಮಗಳು ಹಾಗೂ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಈ ಸಮಿತಿ ಸಲಹೆಗಳನ್ನು ನೀಡಲಿದೆ. ಜೊತೆಗೆ ಸಾಮಾನ್ಯ ಕಾರ್ಯಾಚರಣಾ ವಿಧಾನಗಳನ್ನು ಮರುಪರಿಶೀಲಿಸಿ ಅವುಗಳ ಬಲವರ್ಧನೆಗೂ ಶ್ರಮಿಸಲಿದೆ.
ವೆಬ್‌ಸೈಟ್ ಮೂಲಕ ಸಮಿತಿಗೆ ಸಲಹೆಗಳನ್ನು ಕಳಿಸಲು ಜು.7ರ ವರೆಗೆ ಅವಕಾಶವಿದೆ.
ನೀಟ್‌ನಿಂದ ವಿನಾಯಿತಿಗೆ ತಮಿಳ್ನಾಡು ಅಸೆಂಬ್ಲಿಲೀ ಮತ್ತೆ ನಿಲುವಳಿ ಅಂಗೀಕಾರ
ಚೆನ್ನೈ: ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನಡೆಸುವ ನೀಟ್ ಪರೀಕ್ಷೆಯಿಂದ ರಾಜ್ಯಕ್ಕೆ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರುವ ನಿಲುವಳಿಯೊಂದನ್ನು ತಮಿಳುನಾಡು ವಿಧಾನಸಭೆ ಶುಕ್ರವಾರ ಅಂಗೀಕರಿಸಿದೆ. ಜೊತೆಗೆ ಈ ಹಿಂದಿನಂತೆ 12ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಪ್ರವೇಶಿಸಲು ಅವಕಾಶ ನೀಡಬೇಕೆಂದು ಕೇಂದ್ರವನ್ನು ಒತ್ತಾಯಿಸಿದೆ. ಅಲ್ಲದೆ ಇತ್ತೀಚಿನ ನೀಟ್ ಅಕ್ರಮ ಪರಿಗಣಿಸಿ ಮತ್ತು ಪರೀಕ್ಷೆ ಕುರಿತು ದೇಶವ್ಯಾಪಿ ವಿರೋಧ ಪರಿಗಣಿಸಿ ನೀಟ್ ಪರೀಕ್ಷೆಯನ್ನೇ ರದ್ದು ಮಾಡಬೇಕೆಂದು ನಿಲುವಳಿಯಲ್ಲಿ ಒತ್ತಾಯಿಸಲಾಗಿದೆ.