ಕೇಜ್ರಿವಾಲ್‌ ಪತ್ನಿ ಸುನಿತಾ ಭರ್ಜರಿ ರೋಡ್‌ ಶೋ

| Published : Apr 28 2024, 01:19 AM IST / Updated: Apr 28 2024, 05:11 AM IST

ಸಾರಾಂಶ

ಅಭಿವೃದ್ಧಿ ಮಾಡಿದ್ದಕ್ಕೆ ಕೇಜ್ರಿಗೆ ಜೈಲು ಶಿಕ್ಷೆಯಾಗಿದ್ದು, ಜೈಲಲ್ಲೇ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಅವರ ಪತ್ನಿ ಸುನಿತಾ ತಿಳಿಸಿದ್ದಾರೆ.

ನವದೆಹಲಿ: ಬಂಧಿತ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಪತ್ನಿ ಸುನಿತಾ ಕೇಜ್ರಿವಾಲ್‌ ಅವರು ಲೋಕಸಭಾ ಚುನಾವಣೆ ಪ್ರಚಾರ ಅಖಾಡಕ್ಕೆ ಇಳಿದಿದ್ದಾರೆ. ಶನಿವಾರ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರ ಭರ್ಜರಿ ರೋಡ್‌ ಶೋ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಸುನಿತಾ, ಅರವಿಂದ್ ಕೇಜ್ರಿವಾಲ್ ಅವರು ಉತ್ತಮ ಸರ್ಕಾರಿ ಶಾಲೆಗಳನ್ನು ಕಟ್ಟಿದ್ದು, ಉಚಿತ ವಿದ್ಯುತ್ ನೀಡಿದ್ದಾರೆ. ಮೊಹಲ್ಲಾ ಕ್ಲಿನಿಕ್ ತೆರೆದು ಬಡ ರೋಗಿಗಳ ನೆರವಿಗೆ ಧಾವಿಸಿದ್ದಾರೆ. ಹೀಗಾಗಿ ಅವರ ಜನಪ್ರಿಯತೆ ಸಹಿಸದೇ ಜೈಲು ಪಾಲು ಮಾಡಲಾಗಿದೆ. ಜೈಲಲ್ಲೇ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.

ಅರವಿಂದ್ ಕೇಜ್ರಿವಾಲ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿದ್ದು, ಅವರ ಪರವಾಗಿ ಸುನಿತಾ ಎಎಪಿಯ ಚುನಾವಣಾ ಪ್ರಚಾರ ಮುನ್ನಡೆಸಲಿದ್ದಾರೆ. ಭಾನುವಾರ ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ, ನವದೆಹಲಿ ಲೋಕಸಭಾ ಕ್ಷೇತ್ರಗಳಲ್ಲಿ ರೋಡ್‌ ಶೋ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಪಂಜಾಬ್‌, ಹರ್ಯಾಣ, ಗುಜರಾತ್‌ ರಾಜ್ಯಗಳಲ್ಲೂ ರೋಡ್‌ ಶೋ ನಡೆಸಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.