ಜನಪ್ರತಿನಿಧಿಗಳ ಮೇಲೆ 24 ಗಂಟೆ ನಿಗಾ: ಸುಪ್ರೀಂನಿಂದ ಅರ್ಜಿ ವಜಾ

| Published : Mar 02 2024, 01:47 AM IST

ಸಾರಾಂಶ

ನಾವು ಜನಪ್ರತಿನಿಧಿಗಳ ಮೇಲೆ ಚಿಪ್‌ ಹಾಕಲು ಸಾಧ್ಯವೇ ಎಂಬುದಾಗಿ ಪ್ರಶ್ನಿಸುವ ಮೂಲಕ ಸುಪ್ರೀಂ ಕೋರ್ಟ್‌ ಅರ್ಜಿಯನ್ನು ತಿರಸ್ಕರಿಸಿದೆ.

ನವದೆಹಲಿ: ಸಂಸದರು ಮತ್ತು ಶಾಸಕರ ಮೇಲೆ ದಿನದ 24 ಗಂಟೆಯೂ ಡಿಜಿಟಲ್‌ ನಿಗಾ ವಹಿಸಲು ಆದೇಶಿಸಬೇಕೆಂದು ಕೋರಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ. ಅಲ್ಲದೆ ಅರ್ಜಿ ಹಿಂಪಡೆಯದೇ ವಾದ ಮಾಡಿದಲ್ಲಿ 5 ಲಕ್ಷ ರು. ದಂಡ ವಿಧಿಸುವ ಎಚ್ಚರಿಕೆ ನೀಡಿದ ಘಟನೆಯೂ ನಡೆದಿದೆ.ಶಾಸಕರು ಮತ್ತು ಸಂಸದರು ಜನರಿಂದ ವೇತನ ಪಡೆದು ಕಾರ್ಯನಿರ್ವಹಿಸುವ ಜನಸೇವಕರಾಗಿದ್ದಾರೆ. ಆದರೆ ಅಧಿಕಾರಕ್ಕೆ ಏರುತ್ತಲೇ ಅವರು ಅರಸನ ರೀತಿ ಆಡುತ್ತಾರೆ. ಹೀಗಾಗಿ ಉತ್ತಮ ಆಡಳಿತದ ನಿಟ್ಟಿನಲ್ಲಿ ಅವರೇನು ಮಾಡುತ್ತಾರೆ ಎನ್ನುವುದು ತಿಳಿಯಲು ಅವರ ಮೇಲೆ ಡಿಜಿಟಲ್‌ ನಿಗಾ ವಹಿಸಬೇಕು ಎಂದು ದೆಹಲಿಯ ಸುರಿಂದರ್‌ ನಾಥ್‌ ಕುಂದ್ರಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಆದರೆ ಅರ್ಜಿ ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ‘ಪ್ರತಿಯೊಬ್ಬರಿಗೂ ಖಾಸಗಿತನ ಎನ್ನುವುದು ಇರುತ್ತದೆ. ನೀವು ಕೇಳುವ ರೀತಿಯಲ್ಲಿ ನಾವು ಜನಪ್ರತಿನಿಧಿಗಳಿಗೆ ಚಿಪ್ ಅಳವಡಿಸಲು ಸಾಧ್ಯವೇ? ಇಂಥ ನಿಗಾವನ್ನು ಕೇವಲ ಶಿಕ್ಷೆಗೊಳಗಾದ ಅಪರಾಧಿಗಳ ವಿರುದ್ಧ ಮಾಡಬಹುದು. ಸಂಸತ್ತಿಗೆ ಆಯ್ಕೆಯಾದವರ ಮೇಲೆ ನಾವು ದಿನದ 24 ಗಂಟೆಯೂ ನಿಗಾ ಇಡಲು ಸಾಧ್ಯವಿಲ್ಲ. ಜೊತೆಗೆ ಆಯ್ಕೆಯಾದ ಎಲ್ಲಾ ಜನಪ್ರತಿನಿಧಿಗಳ ಮೇಲೂ ಏಕರೂಪ ಆರೋಪ ಹೊರಿಸುವುದು ಸರಿಯಲ್ಲ ಎಂದು ಹೇಳಿ ಅರ್ಜಿ ವಜಾ ಮಾಡಿತು.