ಸಾರಾಂಶ
ನವದೆಹಲಿ: ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಭಾರತ ಮಹತ್ವದ ಮೈಲುಗಲ್ಲು ಸಾಧಿಸಿದ್ದು, ಅಮೆರಿಕಕ್ಕೆ ರಫ್ತು ಮಾಡುವ ಸ್ಮಾರ್ಟ್‌ಫೋನ್‌ಗಳ ಪ್ರಮಾಣದಲ್ಲಿ ಚೀನಾವನ್ನು ಹಿಂದಿಕ್ಕಿದೆ ಎಂದು ಸಂಶೋಧನಾ ಸಂಸ್ಥೆ ಕನಾಲಿಸ್ ವರದಿ ಮಾಡಿದೆ.
ಮೇಕ್ ಇನ್ ಇಂಡಿಯಾ, ಪಿಎಲ್‌ಐನಂತಹ ಯೋಜನೆಗಳಿಂದಾಗಿ ಭಾರತ ಔದ್ಯಮಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ. ಈ ವರ್ಷದ 2ನೇ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್), ಅಮೆರಿಕಕ್ಕೆ ಸ್ಮಾರ್ಟ್‌ಫೋನ್‌ಗಳ ರಫ್ತಿನಲ್ಲಿ ಚೀನಾವನ್ನು ಭಾರತ ಹಿಂದಿಕ್ಕಿದೆ. ಕಳೆದ ವರ್ಷ ಈ ಪಾಲು ಶೇ.31ರಷ್ಟಿತ್ತು. ಆದರೆ ಈ ವರ್ಷ ಶೇ.13ರಷ್ಟು ಏರಿಕೆಯಾಗಿ, ಶೇ.44ಕ್ಕೆ ತಲುಪಿದೆ. ಆದರೆ ಚೀನಾದ ಪಾಲು ಕಳೆದ ವರ್ಷದ ಶೇ.61ರಿಂದ ಈ ವರ್ಷ ಶೇ.25ಕ್ಕೆ ಇಳಿದಿದೆ ಎಂದು ಕನಾಲಿಸ್‌ನ ವರದಿ ತಿಳಿಸಿದೆ.
2014-15 ಮತ್ತು 2024-25ರ ನಡುವೆ, ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಉತ್ಪಾದನಾ ವಲಯವು ಗಮನಾರ್ಹ ಪರಿವರ್ತನೆಗೆ ಸಾಕ್ಷಿಯಾಗಿದೆ. ಇದೇ ಅವಧಿಯಲ್ಲಿ ಮೊಬೈಲ್ ಫೋನ್‌ಗಳ ಉತ್ಪಾದನೆಯು 18,000 ಕೋಟಿ ರು.ನಿಂದ 5.45 ಲಕ್ಷ ಕೋಟಿ ರು.ಗೆ ಏರಿದೆ, ರಫ್ತು 1,500 ಕೋಟಿ ರು.ನಿಂದ 2 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಇದು 127 ಪಟ್ಟು ಏರಿಕೆ ದಾಖಲಿಸಿದೆ. ಎಲೆಕ್ಟ್ರಾನಿಕ್ ಸರಕುಗಳ ಉತ್ಪಾದನೆಯು 2014-15ರಲ್ಲಿ 1.9 ಲಕ್ಷ ಕೋಟಿ ರು.ನಿಂದ 2024-25ರಲ್ಲಿ 11.3 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ, ಇದು 6 ಪಟ್ಟು ಹೆಚ್ಚಳವನ್ನು ಸೂಚಿಸುತ್ತದೆ. 2014-15ರಲ್ಲಿ ಕೇವಲ 2ರಷ್ಟಿದ್ದ ಮೊಬೈಲ್ ಉತ್ಪಾದನಾ ಘಟಕಗಳ ಸಂಖ್ಯೆ 2024-25ರ ವೇಳೆಗೆ 300ಕ್ಕೆ ವಿಸ್ತರಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಮಾಹಿತಿ ಆಧರಿಸಿ ಪತ್ರಿಕಾ ಮಾಹಿತಿ ಬ್ಯೂರೋ ಪೋಸ್ಟ್ ಮಾಡಿದೆ.
ವರ್ಷ2023 - 2024
ಚೀನಾ ಶೇ.61 ಶೇ.25
ಭಾರತ ಶೇ.31 ಶೇ.44
ಮೊಬೈಲ್ ಉತ್ಪಾದನೆ ಪ್ರಮಾಣ
2014 - 18000 ಕೋಟಿ ರು.
2024 - 5.45 ಲಕ್ಷ ಕೋಟಿ ರು.
==
ಕಂಪನಿಗಳ ಸಂಖ್ಯೆ
2013 - 2
2024 - 300