ಸ್ವಿಸ್‌ನಲ್ಲಿ ಭಾರತದ ಖ್ಯಾತ ಉದ್ಯಮಿ ಗೌತಮ್‌ ಅದಾನಿ ಸಮೂಹದ 2575 ಕೋಟಿ ರು ಹಣ ಜಪ್ತಿ

| Published : Sep 14 2024, 01:50 AM IST / Updated: Sep 14 2024, 08:17 AM IST

Adani Group

ಸಾರಾಂಶ

‘ಭಾರತದ ಖ್ಯಾತ ಉದ್ಯಮಿ ಗೌತಮ್‌ ಅದಾನಿ ಸಮೂಹದ ನಂಟು ಹೊಂದಿರುವ ವ್ಯಕ್ತಿಯೊಬ್ಬರ ಅಂದಾಜು 2575 ಕೋಟಿ ರು. ಹಣವನ್ನು ಸ್ವಿಜರ್ಲೆಂಡ್‌ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನವದೆಹಲಿ: ‘ಭಾರತದ ಖ್ಯಾತ ಉದ್ಯಮಿ ಗೌತಮ್‌ ಅದಾನಿ ಸಮೂಹದ ನಂಟು ಹೊಂದಿರುವ ವ್ಯಕ್ತಿಯೊಬ್ಬರ ಅಂದಾಜು 2575 ಕೋಟಿ ರು. ಹಣವನ್ನು ಸ್ವಿಜರ್ಲೆಂಡ್‌ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅದಾನಿ ಮೇಲಿನ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣ ಸಂಬಂಧ ಈ ಹಣ ಜಪ್ತಿ ಮಾಡಲಾಗಿದೆ’ ಎಂದು ಅಮೆರಿಕದ ಮೂಲದ ಹಿಂಡನ್‌ಬರ್ಗ್‌ ಸಂಸ್ಥೆ ಆರೋಪಿಸಿದೆ. ಆದರೆ ಈ ಆರೋಪಗಳನ್ನು ಅದಾನಿ ಸಮೂಹ ಸಾರಾಸಗಟಾಗಿ ತಿರಸ್ಕರಿಸಿದೆ.

ಈ ಹಿಂದೆ ಅದಾನಿ ಕಂಪನಿ ಷೇರುಪೇಟೆಯಲ್ಲಿ ಅಕ್ರಮ ಎಸಗಿದೆ ಎಂದು ಆರೋಪಿಸಿದ್ದ ಹಿಂಡನ್‌ಬರ್ಗ್‌ ಶುಕ್ರವಾರ ಸರಣಿ ಟ್ವೀಟ್‌ ಮಾಡಿದೆ. ಅದರಲ್ಲಿ, ‘ಇತ್ತೀಚೆಗೆ ಬಿಡುಗಡೆಯಾದ ಸ್ವಿಜರ್ಲೆಂಡ್‌ನ ಕ್ರಿಮಿನಲ್‌ ದಾಖಲೆಗಳ ಕುರಿತು ಸ್ವಿಜರ್ಲೆಂಡ್‌ನ ಮಾಧ್ಯಮಗಳು ವರದಿ ಪ್ರಕಟಿಸಿವೆ. ಅದರನ್ವಯ ಅದಾನಿ ನಂಟಿನ ವ್ಯಕ್ತಿಯೊಬ್ಬರಿಗೆ ಸೇರಿದ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಇದ್ದ 2575 ಕೋಟಿ ರು. ಹಣವನ್ನು ಜಪ್ತಿ ಮಾಡಲಾಗಿದೆ. ಅಕ್ರಮ ಹಣ ವರ್ಗಾವಣೆ ಮತ್ತು ನಕಲಿ ದಾಖಲೆ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 2021ರಿಂದಲೂ ಕೇಳಿಬಂದ ಆರೋಪ ಸಂಬಂಧ ಈ ಕ್ರಮ ಜರುಗಿಸಲಾಗಿದೆ’ ಎಂದಿದೆ.

‘ಈ ವ್ಯಕ್ತಿ ಅದಾನಿ ಸಮೂಹಕ್ಕೆ ನಂಟು ಹೊಂದಿದ್ದಾರೆ. ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌/ ಮಾರಿಷಸ್‌ ಮತ್ತು ಬರ್ಮುಡಾದ ಫಂಡ್‌ಗಳ ಮೂಲಕ ಅದಾನಿ ಸಮೂಹದ ಕಂಪನಿಗಳಲ್ಲಿ ಬೇನಾಮಿಯಾಗಿ ಭಾರೀ ಹೂಡಿಕೆ ಮಾಡಿದ್ದರು’ ಎಂದು ವರದಿ ಕುರಿತು ಹಿಂಡನ್‌ಬರ್ಗ್‌ ಉಲ್ಲೇಖ ಮಾಡಿದೆ.

ವರದಿಯಲ್ಲಿ ಏನಿದೆ?: ಸ್ವಿಸ್‌ ಪತ್ರಿಕೆಯ ವರದಿ ಅನ್ವಯ, ‘ಹಿಂಡನ್‌ಬರ್ಗ್‌ ಸಂಸ್ಥೆ ಮೊದಲ ಬಾರಿಗೆ ಅದಾನಿ ಸಮೂಹದ ಮೇಲೆ ಅಕ್ರಮ ಆರೋಪ ಮಾಡುವುದಕ್ಕೂ ಮೊದಲೇ ಅದಾನಿ ಸಮೂಹದ ಅಕ್ರಮದ ಬಗ್ಗೆ ಸ್ವಿಜರ್ಲೆಂಡ್‌ನ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಗೌತಮ್‌ ಅದಾನಿ ನಂಟಿನ ವ್ಯಕ್ತಿಯ 5 ಸ್ವಿಸ್‌ ಬ್ಯಾಂಕ್‌ ಖಾತೆಗಳಲ್ಲಿನ 2575 ಕೋಟಿ ರು. ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ’ ಎಂದು ವರದಿ ಮಾಡಿದೆ.

ತನಿಖೆಗೆ ಕಾಂಗ್ರೆಸ್‌ ಆಗ್ರಹ: ಈ ವರದಿ ಬೆನ್ನಲ್ಲೇ ಅದಾನಿ ಆಕ್ರಮದ ಬಗ್ಗೆ ಸುಪ್ರೀಂ ಕೋರ್ಟ್‌ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಹಾಗೂ ಜಂಟಿ ಸದನ ಸಮಿತಿ (ಜೆಪಿಸಿ) ವಿಚಾರಣೆ ಆಗಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಇದು ಸುಳ್ಳು- ಅದಾನಿ: ಆದರೆ ಹಿಂಡನ್‌ಬರ್ಗ್‌ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಅದಾನಿ ಸಮೂಹ, ‘ಸ್ವಿಜರ್ಲೆಂಡ್‌ ಕೋರ್ಟ್‌ನ ಯಾವುದೇ ಪ್ರಕರಣಗಳಲ್ಲಿ ನಮ್ಮ ನಂಟಿಲ್ಲ. ಈ ಆರೋಪಗಳನ್ನು ನಾವು ಸಾರಾಸಗಟಾಗಿ ತಿರಸ್ಕರಿಸುತ್ತೇವೆ. ನಮ್ಮ ಕಂಪನಿಯ ಲೆಕ್ಕಪತ್ರಗಳು ಯಾವುದೇ ಅಧಿಕಾರಿಗಳಿಂದ ತನಿಖೆಗೆ ಒಳಪಟ್ಟಿಲ್ಲ. ಆರೋಪ ಮಾಡಲಾದ ನ್ಯಾಯಾಲಯದ ವರದಿಯಲ್ಲೂ ಎಲ್ಲೂ ನಮ್ಮ ಸಂಸ್ಥೆಯ ಹೆಸರನ್ನು ಪ್ರಸ್ತಾಪ ಮಾಡಿಲ್ಲ ಮತ್ತು ಆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಮ್ಮಿಂದ ಯಾವುದೇ ಸ್ಪಷ್ಟನೆಯನ್ನೂ ಯಾರೂ ಕೇಳಿಲ್ಲ. ನಮ್ಮ ಎಲ್ಲಾ ಹೂಡಿಕೆಗಳು ಪಾರದರ್ಶಕವಾಗಿದೆ ಮತ್ತು ಕಾನೂನು ಬದ್ಧವಾಗಿದೆ ಎಂದು ನಾವು ಪುನರುಚ್ಚಾರ ಮಾಡುತ್ತೇವೆ’ ಎಂದು ಹೇಳಿದೆ.

ಸೆಬಿ ಅಧ್ಯಕ್ಷೆ ಮಾಧವಿ ವಿರುದ್ಧ ಲೋಕಪಾಲಕ್ಕೆ ದೂರು

ನವದೆಹಲಿ: ಹಿತಾಸಕ್ತಿಯ ವೈರುಧ್ಯದ ಪ್ರಕರಣದಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್‌ ವಿರುದ್ಧ ತನಿಖೆ ಕೋರಿ ಲೋಕಪಾಲಕ್ಕೆ ಟಿಎಂಸಿ ಸಂಸದೆ ಮಹುವಾ ಮೊಹಿತ್ರಾ ದೂರು ಸಲ್ಲಿಸಿದ್ದಾರೆ. ಅದರಲ್ಲಿ ದೂರು ದಾಖಲಾದ 30 ದಿನಗಳಲ್ಲಿ ಸಿಬಿಐ ಅಥವಾ ಇ.ಡಿ.ಯಿಂದ ಪ್ರಾಥಮಿಕ ತನಿಖೆಗೆ ಆದೇಶಿಸಬೇಕು. ಬಳಿಕ ಪೂರ್ಣ ಎಫ್‌ಐಆರ್‌ ದಾಖಲಿಸಿ ವಿಸ್ತೃತ ತನಿಖೆಗೆ ಸೂಚಿಸಬೇಕು ಎಂದು ಕೋರಿದ್ದಾರೆ.ಮಾಧವಿ ವಿರುದ್ಧ ಇತ್ತೀಚೆಗೆ ಅಮೆರಿಕದ ಮೂಲದ ಹಿಂಡನ್‌ಬರ್ಗ್‌ ಸಮೂಹ ಮತ್ತು ಕಾಂಗ್ರೆಸ್ ಹಲವು ಆರೋಪಗಳನ್ನು ಹೊರಿಸಿದ್ದವು. ಅದರಲ್ಲಿ, ಸೆಬಿ ತನಿಖೆ ನಡೆಸುತ್ತಿದ್ದ ಸಂಸ್ಥೆಗಳಿಂದ ಮಾಧವಿ ಮತ್ತು ಅವರ ಪತಿ ಮುಂಬೈನಲ್ಲಿ ಬಾಡಿಗೆ ಆದಾಯ ಪಡೆಯುತ್ತಿದ್ದಾರೆ; ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಸಂಸ್ಥೆಗೆ ಸಲಹೆ ನೀಡುವ ಸಂಸ್ಥೆಯೊಂದರಲ್ಲಿ ಮಾಧವಿ ಶೇ.99ರಷ್ಟು ಪಾಲು ಹೊಂದಿದ್ದಾರೆ; ಮಾಧವಿ ಅಧ್ಯಕ್ಷೆಯಾಗಿರುವ ಸೆಬಿ ತನಿಖೆ ನಡೆಸುತ್ತಿದ್ದ ಸಂಸ್ಥೆಯೊಂದರಿಂದ ಮಾಧವಿ ಅವರ ಪತಿ 4.78 ಕೋಟಿ ರು. ಆದಾಯ ಸ್ವೀಕರಿಸಿದ್ದಾರೆ ಎಂಬ ಆರೋಪಗಳ ಸೇರಿದ್ದವು. ಅದರ ಬೆನ್ನಲ್ಲೇ ಈ ಎಲ್ಲಾ ಆರೋಪಗಳ ಕುರಿತು ತನಿಖೆ ಕೋರಿ ಮಹುವಾ ದೂರು ಸಲ್ಲಿಸಿದ್ದಾರೆ.

ಆರೋಪ ಸುಳ್ಳು- ಮಾಧವಿ: ಈ ನಡುವೆ ಕಾಂಗ್ರೆಸ್‌ ಮಾಡಿರುವ ಆರೋಪಗಳನ್ನು ಮಾಧವಿ ಮತ್ತು ಅವರ ಪತಿ ಧವಳ್‌ ಬುಚ್‌ ತಳ್ಳಿಹಾಕಿದ್ದಾರೆ. ನಾವು ಸಲ್ಲಿಸಿರು ಆದಾಯ ತೆರಿಗೆ ದಾಖಲೆಗಳನ್ನು ಉಲ್ಲೇಖಿಸಿ ಈ ಆರೋಪ ಮಾಡಲಾಗಿದೆ. ಈ ಎಲ್ಲಾ ಆದಾಯಕ್ಕೂ ತೆರಿಗೆ ಪಾವತಿ ಮಾಡಲಾಗಿದೆ. ಅದರ ಹೊರತಾಗಿಯೂ ಮಾಡಿರುವ ಈ ಆರೋಪ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನಹಾನಿಯ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.