ಯುವಕರೇ ಮತ ಹಾಕಿ, ವಂಶ ರಾಜಕೀಯಕ್ಕೆ ಅಂತ್ಯ ಹಾಡಿ: ಮೋದಿ

| Published : Jan 13 2024, 01:36 AM IST

ಸಾರಾಂಶ

‘ಯುವಕರೇ.. ವಂಶಾಡಳಿತದಿಂದ ದೇಶಕ್ಕೆ ಹಾನಿಯಾಗಿದೆ ಎಂಬುದು ನಿಮಗೆ ಗೊತ್ತಿದೆ. ನೀವು ದೇಶಕ್ಕಾಗಿ ಮತ ಚಲಾಯಿಸಬೇಕು ಮತ್ತು ಈ ಮೂಲಕ ವಂಶ ರಾಜಕಾರಣವನ್ನು ಕೊನೆಗೊಳಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಯುವಕರಿಗೆ ಕರೆ ನೀಡಿದ್ದಾರೆ.

ಪಿಟಿಐ ನಾಸಿಕ್‌

‘ಯುವಕರೇ.. ವಂಶಾಡಳಿತದಿಂದ ದೇಶಕ್ಕೆ ಹಾನಿಯಾಗಿದೆ ಎಂಬುದು ನಿಮಗೆ ಗೊತ್ತಿದೆ. ನೀವು ದೇಶಕ್ಕಾಗಿ ಮತ ಚಲಾಯಿಸಬೇಕು ಮತ್ತು ಈ ಮೂಲಕ ವಂಶ ರಾಜಕಾರಣವನ್ನು ಕೊನೆಗೊಳಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಯುವಕರಿಗೆ ಕರೆ ನೀಡಿದ್ದಾರೆ.

ಜ.12ರ ಶುಕ್ರವಾರ ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆಯಲ್ಲಿ 27ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಿದ ಮೋದಿ ‘ಮಾದಕ ವಸ್ತುಗಳಿಂದ ಯುವಕರು ದೂರವಿರಿ. ಅಲ್ಲದೇ ತಾಯಿ ಮತ್ತು ಸಹೋದರಿಯರ ಹೆಸರಿನಲ್ಲಿ ನಿಂದನೀಯ ಅವಾಚ್ಯ ಶಬ್ದಗಳನ್ನು ಬಳಸುವುದನ್ನು ನಿಲ್ಲಿಸಿ. ಭಾರತ ಪ್ರಜಾಪ್ರಭುತ್ವದ ತಾಯಿ. ಯುವಕರು ಮತ ಚಲಾಯಿಸುವ ಮೂಲಕ ತಮ್ಮ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸಿದರೆ ದೇಶದ ಭವಿಷ್ಯ ಉತ್ತಮವಾಗಿರಲಿದೆ. ಯುವಕರು ವಂಶ ರಾಜಕಾರಣದ ಪ್ರಭಾವ ನಿಯಂಯ್ರಿಸಬೇಕು’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ಕುಟುಕಿದರು.

ಅಲ್ಲದೇ ‘ಈ ಅಮೃತ ಕಾಲವು ದೇಶದ ಯುವಜನರಿಗೆ ಸುವರ್ಣ ಯುಗವಾಗಿದೆ. ಯುವಶಕ್ತಿಯಿಂದಾಗಿ ದೇಶವು ಪ್ರಪಂಚದ 5ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ಅಲ್ಲದೇ ಭಾರತವು ಇದೀಗ ದೇಶದ ಟಾಪ್‌ ಸ್ಟಾರ್ಟ್ ಅಪ್‌ಗಳಲ್ಲಿ ಒಂದಾಗಿದೆ. ಭಾರತವು ಇದೀಗ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ. ಮತ್ತು ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇದೆಲ್ಲದರ ಹಿಂದೆ ಅಮೃತ ಕಾಲದ ಸುವರ್ಣ ಯುಗದಲ್ಲಿರುವ ದೇಶದ ಯುವಜನರಿದ್ದಾರೆ. ಇಂದು ಯುವಶಕ್ತಿಯ ದಿನ. ಗುಲಾಮಗಿರಿಯ (ಬ್ರಿಟಿಷ್‌ ಆಳ್ವಿಕೆ) ದಿನಗಳಲ್ಲಿ ಭಾರತವನ್ನು ಹೊಸ ಚೈತನ್ಯವನ್ನು ತುಂಬಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದನವರಿಗೆ ಈ ದಿನವನ್ನು ಅರ್ಪಿಸಲಾಗಿದೆ’ ಎಂದರು.