ನಾನೀಗ ಬಹುತೇಕ ಹೋರಾಟಗಾರನಂತಿದ್ದೇನೆ-ಶೀಘ್ರ ರಾಜಕೀಯ ಪ್ರವೇಶ : ಸೋನಿಯಾ ಅಳಿಯ ವಾದ್ರಾ ಘೋಷಣೆ

| N/A | Published : Apr 17 2025, 12:09 AM IST / Updated: Apr 17 2025, 04:42 AM IST

ಸಾರಾಂಶ

ನಾನೀಗ ಬಹುತೇಕ ಹೋರಾಟಗಾರನಂತಿದ್ದೇನೆ, 1999ರಿಂದ ಜನರ ಜತೆಗಿರುವ ನಾನು ಶೀಘ್ರದಲ್ಲೇ ರಾಜಕೀಯಕ್ಕೆ ಪ್ರವೇಶಿಸುತ್ತೇನೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕ್‌ ಗಾಂಧಿ ಪತಿ, ಸೋನಿಯಾ ಗಾಂಧಿ ಅವರ ಅಳಿಯ ಉದ್ಯಮಿ ರಾಬರ್ಟ್‌ ವಾದ್ರಾ ಘೋಷಿಸಿದ್ದಾರೆ.

 ನವದೆಹಲಿ: ನಾನೀಗ ಬಹುತೇಕ ಹೋರಾಟಗಾರನಂತಿದ್ದೇನೆ, 1999ರಿಂದ ಜನರ ಜತೆಗಿರುವ ನಾನು ಶೀಘ್ರದಲ್ಲೇ ರಾಜಕೀಯಕ್ಕೆ ಪ್ರವೇಶಿಸುತ್ತೇನೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕ್‌ ಗಾಂಧಿ ಪತಿ, ಸೋನಿಯಾ ಗಾಂಧಿ ಅವರ ಅಳಿಯ ಉದ್ಯಮಿ ರಾಬರ್ಟ್‌ ವಾದ್ರಾ ಘೋಷಿಸಿದ್ದಾರೆ.

ಹರ್ಯಾಣದಲ್ಲಿ ಭೂಖರೀದಿ ಅಕ್ರಮಕ್ಕೆ ಸಂಬಂಧಿಸಿ ಎರಡನೇ ದಿನವಾದ ಬುಧವಾರವೂ ಜಾರಿ ನಿರ್ದೇಶನಾಲಯ(ಇ.ಡಿ)ದ ವಿಚಾರಣೆ ಎದುರಿಸಿದ ಅವರು, ನಂತರ ಸುದ್ದಿಗಾರರ ಜತೆಗೆ ಮಾತನಾಡಿದರು.

ನಾನು ಗಾಂಧಿ ಕುಟುಂಬಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ತನಿಖಾ ಸಂಸ್ಥೆಗಳು ನನ್ನನ್ನು ಗುರಿ ಮಾಡುತ್ತಿವೆ. ಒಂದು ವೇಳೆ ನಾನು ಬಿಜೆಪಿಯವನಾಗಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ನಾನೀಗ ಜನರ ದನಿಯಾಗಿದ್ದೇನೆ ಮತ್ತು ಜನರಿಗೋಸ್ಕರ ಹೋರಾಟ ಮುಂದುವರಿಸುತ್ತೇನೆ ಎಂದು ವಾದ್ರಾ ಹೇಳಿದ್ದಾರೆ.

ನಾನು ರಾಜಕೀಯ ಪ್ರವೇಶಿಸಿದರೆ ಬದಲಾವಣೆ ತರಲು ಬಯಸುತ್ತೇನೆ. ನಾನು ರಾಜಕೀಯಕ್ಕೆ ಬರುವ ಕಾಲ ಬಂದೇ ಬರುತ್ತದೆ. ಸತ್ಯಕ್ಕೆ ಯಾವತ್ತೂ ಗೆಲುವಿದೆ ಎಂದ ಅವರು, ಮುಖ್ಯಮಂತ್ರಿಯಾಗಲು ಹೊರಟವರು ಅಥವಾ ರಾಜಕೀಯಕ್ಕೆ ಪ್ರವೇಶಿಸಬಯಸುವವರು ಬಿಜೆಪಿ ಸೇರದಿದ್ದರೆ ಇ.ಡಿ. ಕಿರುಕುಳ ನೀಡುತ್ತದೆ. ಆದರೆ, ಬಿಜೆಪಿಯ ಯಾವುದೇ ನಾಯಕ ಅಥವಾ ಸಚಿವರಿಗೆ ಇ.ಡಿ. ಸಮನ್ಸ್‌ ನೀಡಲ್ಲ ಎಂದು ಕಿಡಿಕಾರಿದರು.

ಭೂ ಖರೀದಿ ಪ್ರಕರಣದಲ್ಲಿ ಹರ್ಯಾಣ ಸರ್ಕಾರ ಕ್ಲೀನ್‌ ಚಿಟ್ ನೀಡಿದ್ದರೂ ಇ.ಡಿ. ವಿಚಾರಣೆ ನಡೆಸುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನನ್ನ ಮೇಲಷ್ಟೇ ಅಲ್ಲ, ನನ್ನ ಕುಟುಂಬವಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೂ ಚಾರ್ಚ್ ಶೀಟ್ ಹಾಕಿದ್ದಾರೆ. ಅವರು ನಮಗೆ ಎಷ್ಟು ಕಿರುಕುಳ ನೀಡುತ್ತಾರೋ ನಾವೂ ಅಷ್ಟೇ ಗಟ್ಟಿಯಾಗುತ್ತೇವೆ. ನಮ್ಮ ದಾರಿಗೆ ಬರುವ ಪ್ರತಿಯೊಂದು ಅಡ್ಡಿಯ ವಿರುದ್ಧವೂ ನಾವು ಹೋರಾಟ ನಡೆಸುತ್ತೇವೆ ಎಂದರು.

ಪತ್ನಿ ಜತೆಗೆ ಇ.ಡಿ. ಕಚೇರಿಗೆ ಭೇಟಿ:

ಎರಡನೇ ದಿನ ಬೆಳಗ್ಗೆ 11 ಗಂಟೆಗೆ ಇ.ಡಿ. ಕಚೇರಿಗೆ ಪತ್ನಿ ಪ್ರಿಯಾಂಕಾ ಗಾಂಧಿ ಜತೆಗೆ ಆಗಮಿಸಿದ ವಾದ್ರಾ ವಿಚಾರಣೆಗೆ ಒಳಗಾದರು.

ಹರ್ಯಾಣದ ಷಿಕೋಪುರ್‌ನಲ್ಲಿ 3.5 ಎಕ್ರೆ ಜಮೀನನ್ನು ವಾದ್ರಾ ಅವರ ಕಂಪನಿ ಕೇವಲ 7.5 ಕೋಟಿ ರು.ನೀಡಿ ಖರೀದಿಸಿತ್ತು. ಇದಾಗಿ ನಾಲ್ಕು ವರ್ಷಗಳ ಬಳಿಕ ಇದೇ ಜಾಗವನ್ನು ವಾದ್ರಾ ಅವರು ರಿಯಲ್‌ ಎಸ್ಟೇಟ್‌ ಸಂಸ್ಥೆ ಡಿಎಲ್‌ಎಫ್‌ಗೆ 58 ಕೋಟಿ ರು.ಗೆ ಮಾರಾಟ ಮಾಡಿದ್ದರು. ಈ ಕುರಿತು ಇ.ಡಿ. ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ವಿಚಾರಣೆ ನಡೆಸುತ್ತಿದೆ.

ವಾದ್ರಾ ವಿರುದ್ಧ ಶೀಘ್ರ ಮೂರು ಆರೋಪಪಟ್ಟಿ?

ನವದೆಹಲಿ: ಅಕ್ರಮ ಹಣ ವರ್ಗಾವಣೆಯ ಮೂರು ಪ್ರಕರಣ ಸಂಬಂಧ ರಾಬರ್ಟ್‌ ವಾದ್ರಾ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಶೀಘ್ರವೇ ಆರೋಪಪಟ್ಟಿ ಸಲ್ಲಿಸಲಿದೆ ಎನ್ನಲಾಗಿದೆ. ಹರ್ಯಾಣದಲ್ಲಿ ನಡೆದ ಭೂ ಖರೀದಿ ಅಕ್ರಮದ ಆರೋಪದ ಪ್ರಕರಣದಲ್ಲಿ ವಾದ್ರಾ ಅವರನ್ನು ಇ.ಡಿ. ಅಧಿಕಾರಿಗಳು ಸತತ 2 ದಿನ ವಿಚಾರಣೆ ನಡೆಸಿ, ಗುರುವಾರವೂ ವಿಚಾರಣೆಗೆ ಕರೆದಿದ್ದಾರೆ. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆಸಿದೆ.