ಟಾಟಾ ಸಾಮ್ರಾಜ್ಯ ಕಟ್ಟಿದ್ದು ಜೆಮ್‌ಶೆಡ್‌ಜಿ ಟಾಟಾ - ಸೆಣಬು ಉತ್ಪನ್ನ ರಫ್ತಿನೊಂದಿಗೆ ಆರಂಭವಾದ ಗ್ರೂಪ್‌

| Published : Oct 11 2024, 10:29 AM IST

jamshedji tata
ಟಾಟಾ ಸಾಮ್ರಾಜ್ಯ ಕಟ್ಟಿದ್ದು ಜೆಮ್‌ಶೆಡ್‌ಜಿ ಟಾಟಾ - ಸೆಣಬು ಉತ್ಪನ್ನ ರಫ್ತಿನೊಂದಿಗೆ ಆರಂಭವಾದ ಗ್ರೂಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಜೆಮ್‌ಶೆಡ್‌ಜಿ ಟಾಟಾರವರು ಮೂಲತಃ ಗುಜರಾತಿನ ಪಾರ್ಸಿ ಕುಟುಂಬದಿಂದ ಬಂದವರು. ಆಗ ಪಾರ್ಸಿಗಳಾರೂ ಉದ್ದಿಮೆ ವಲಯದಲ್ಲಿರಲಿಲ್ಲ. ಈ ವೇಳೆ ಟಾಟಾರ ತಂದೆ ನಸ್ಸರ್‌ವನ್ಜಿ ಟಾಟಾ ಗುಜರಾತಿನಿಂದ ಬಾಂಬೆಗೆ ಹೋಗಿ ಸೆಣಬು ಉತ್ಪನ್ನಗಳನ್ನು ರಫ್ತು ಮಾಡುವ ಉದ್ಯಮ ಆರಂಭಿಸಿದರು.

ಮುಂಬೈ :  ಜೆಮ್‌ಶೆಡ್‌ಜಿ ಟಾಟಾರವರು ಮೂಲತಃ ಗುಜರಾತಿನ ಪಾರ್ಸಿ ಕುಟುಂಬದಿಂದ ಬಂದವರು. ಆಗ ಪಾರ್ಸಿಗಳಾರೂ ಉದ್ದಿಮೆ ವಲಯದಲ್ಲಿರಲಿಲ್ಲ. ಈ ವೇಳೆ ಟಾಟಾರ ತಂದೆ ನಸ್ಸರ್‌ವನ್ಜಿ ಟಾಟಾ ಗುಜರಾತಿನಿಂದ ಬಾಂಬೆಗೆ ಹೋಗಿ ಸೆಣಬು ಉತ್ಪನ್ನಗಳನ್ನು ರಫ್ತು ಮಾಡುವ ಉದ್ಯಮ ಆರಂಭಿಸಿದರು.

ಅದು 1857ರ ಆಸುಪಾಸಿನ ಸಂದರ್ಭ. ಭಾರತೀಯ ಸೈನಿಕರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಊದಿದ್ದ ಸಮಯ. ಇಂತಹ ಪ್ರಕ್ಷುಬ್ಧ ಸಂದರ್ಭದಲ್ಲಿ ಉದ್ದಿಮೆ ನಡೆಸುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಜೆಮ್‌ಶೆಟ್‌ಜಿ ಟಾಟಾರವರು ಬಾಂಬೆಗೆ ತೆರಳಿ ತಂದೆಯೊಂದಿಗೆ ತಾವೂ ಉದ್ದಿಮೆಯಲ್ಲಿ ತೊಡಗಿದರು. ಆಗ ಟಾಟಾರಿಗೆ 29ರ ಹರೆಯ. ಕಟ್ಟಿಕೊಂಡಿದ್ದ ನೂರಾರು ಕನಸುಗಳನ್ನ ನನಸು ಮಾಡುವ ಛಲ.

1869ರಲ್ಲಿ ಧೈರ್ಯ ಮಾಡಿ ಚಿಂಚ್‌ಪೋಕ್ಲಿಯಲ್ಲಿ ದಿವಾಳಿಯಾಗಿದ್ದ ತೈಲ ತಯಾರಿಕಾ ಕಂಪೆನಿಯೊಂದನ್ನು ಖರೀದಿಸಿ ಅದನ್ನು ಕಾಟನ್ ಬಟ್ಟೆ ಗಿರಣಿಯಾಗಿ ಪರಿವರ್ತಿಸಿದರು. ಬಳಿಕ ಈ ಕಾರ್ಖಾನೆಯನ್ನು ಅಧಿಕ ಲಾಭಕ್ಕೆ ಮಾರಿ, ಬಂದ ಹಣದಿಂದ ನಾಗಪುರದಲ್ಲಿ 1874ರಲ್ಲಿ ಬೃಹತ್ ಕಾಟನ್ ಗಿರಣಿ ಆರಂಭಿಸಿದರು. ಇಲ್ಲಿಂದಾಚೆಗೆ ಟಾಟಾ ಉದ್ಯಮಸಾಮ್ರಾಜ್ಯದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಹಂತಹಂತವಾಗಿ ಹಲವು ಕಾರ್ಖಾನೆಗಳನ್ನು ಆರಂಭಿಸಿದರು. ಟಾಟಾ ಸ್ಟೀಲ್ , ಟಾಟಾ ಪವರ್ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್‌ ಸೈನ್ಸ್‌ ಸಂಸ್ಥೆಗಳನ್ನು ಹುಟ್ಟುಹಾಕಿದರು. ಮುಂಬೈಯ ಕೊಲಾಬೊ ಜಿಲ್ಲೆಯಲ್ಲಿ ಐಷಾರಾಮಿ ತಾಜ್ ಹೋಟೆಲ್ ಸ್ಥಾಪಿಸಿದರು. ಎಲ್ಲಾ ವಲಯಗಳನ್ನೂ ಒಂದೇ ಸಂಸ್ಥೆಯಡಿ ಬರುವಂತೆ ಮಾಡಲು ಟಾಟಾ ಗ್ರೂಪ್ ಸ್ಥಾಪಿಸಿ ವಿಶ್ವದಲ್ಲೇ ಯಶಸ್ವಿ ಉದ್ದಿಮೆದಾರ ಎನಿಸಿಕೊಂಡರು.

ಇಂದು ಭಾರತದ ಉದ್ಯಮವಲಯದಲ್ಲಿ ಬೃಹತ್ತಾಗಿ ಬೆಳೆದಿರುವ ಟಾಟಾ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ಹಿಂದೆ ಜೆಮ್‌ಶೆಟ್‌ಜಿಯವರ ಪರಿಶ್ರಮಯಿದೆ. ಟಾಟಾ ತಮ್ಮ ಜೀವಿತಾವಧಿಯಲ್ಲಿ ಈ ಕಾರ್ಖಾನೆಯನ್ನು ಸ್ಥಾಪಿಸಲು ಆಗಲಿಲ್ಲ. ಅವರು ಮೃತರಾದ 3 ವರ್ಷಗಳ ಬಳಿಕ 1907ರಲ್ಲಿ ಅವರ ಮಗ ದೊರಾಬ್ಜಿ ಟಾಟಾ ಮತ್ತು ಸಹೋದರರು ತಂದೆಯ ಕನಸನ್ನು ನನಸು ಮಾಡಿದ್ದರು.

ರತನ್ ಎನ್.ಟಾಟಾ ಜೀವನಗಾಥೆ

ಜೆಮ್‌ಶೆಡ್‌ಜಿ ಟಾಟಾರ ಮರಿ ಮೊಮ್ಮಗ

ತಂದೆ -ನಾವಲ್ ಹೊರ್ಮುಸ್ಜಿ ಟಾಟಾ

ತಾಯಿ -ಸೂನೂ

ಸಹೋದರ -ಜಿಮ್ಮಿ ಟಾಟಾ

ಶ್ರೀಮಂತ ಉದ್ಯಮ ಕುಟುಂಬದಲ್ಲಿ ಜನನ, ಅಜ್ಜಿಯದ್ದೇ ಆರೈಕೆ

ಅಮೆರಿಕದಲ್ಲಿ ಎಂಜಿನಿಯರಿಂಗ್‌ ಪದವಿ, ವಾಸ್ತುಶಾಸ್ತ್ರದಲ್ಲಿ ಬಿಎಸ್ಸಿ ಪದವಿ

ಬ್ರಿಟಿಷರ ಆಡಳಿತಕ್ಕೊಳಪಟ್ಟಿದ್ದ ಅಂದಿನ ಬಾಂಬೆ ಪ್ರಾಂತ್ಯದಲ್ಲಿ ಟಾಟಾ ವಂಶಸ್ಥರಿಗೆ ಭಾರತದ ಉದ್ಯಮ ವಲಯದಲ್ಲೇ ಅತ್ಯಂತ ಶ್ರೀಮಂತ ಕುಟುಂಬ ಎಂದು ಹೆಸರಿತ್ತು. ಇಂತಹ ಟಾಟಾ ಕುಟುಂಬದಲ್ಲಿ 1937ರ ಡಿಸೆಂಬರ್ 28ರಂದು ರತನ್ ನಾವಲ್ ಟಾಟಾರ ಜನನವಾಯಿತು.

ಇವರ ತಂದೆ ನಾವಲ್ ಎಚ್‌. ಟಾಟಾ ಅದಾಗಲೇ ಕೈಗಾರಿಕಾ ಪ್ರಪಂಚದಲ್ಲಿ ಪಳಗಿದವರಾಗಿದ್ದರು. ಇವರ ಮೊದಲನೇ ಪತ್ನಿ ಸೂನೂ ಟಾಟಾ ರತನ್‌ಜಿಯವರ ತಾಯಿ. ಆದರೆ 1940ರ ವೇಳೆಗೆ ಸಾಂಸಾರಿಕ ಕಾರಣದಿಂದಾಗಿ ರತನ್‌ರ ತಂದೆ ತಾಯಿ ಪರಸ್ಪರ ಬೇರ್ಪಟ್ಟರು. ಆಗ ರತನ್ ಟಾಟಾರಿಗೆ 7ರ ಪ್ರಾಯ ಹಾಗೂ ಸಹೋದರ ಜಿಮ್ಮಿ ಟಾಟಾರಿಗೆ 5 ವರ್ಷವಾಗಿತ್ತು. ಇದರಿಂದಾಗಿ ಇಬ್ಬರೂ ಅಜ್ಜಿ ನವಾಜ್‌ಬಾಯಿ ಆಶ್ರಯದಲ್ಲಿ ಬೆಳೆಯಬೇಕಾಯ್ತು.

ಶಿಕ್ಷಣ: 

ಮುಂಬೈನ ಕೆಥೆಡ್ರಲ್ ಮತ್ತು ಜಾನ್ ಕ್ಯಾನನ್ ಶಾಲೆಗಳಲ್ಲಿ ರತನ್ ತಮ್ಮ ಆರಂಭಿಕ ಶಿಕ್ಷಣ ಪೂರೈಸಿದರು. 1962ರಲ್ಲಿ ಅಮೆರಿಕದ ಕಾರ್ನೆಲ್ ವಿವಿಯಿಂದ ಎಂಜಿನಿಯರಿಂಗ್ ಹಾಗೂ ವಾಸ್ತು ಶಾಸ್ತ್ರದಲ್ಲಿ ರತನ್ ಬಿಎಸ್ಸಿ ಪದವಿ ಪಡೆದರು. ಶಿಕ್ಷಣ ಮುಗಿಸಿ ಭಾರತಕ್ಕೆ ಮರಳಿದ ರತನ್ ಮೊದಲಿಗೆ ಜೆಮ್‌ಶೆಡ್ ಪುರದಲ್ಲಿರುವ ಟಾಟಾಸ್ಟೀಲ್ ಕಂಪೆನಿಯಲ್ಲಿ ಕಾರ್ಯ ಮಾಡುವ ಮೂಲಕ ಟಾಟಾ ಉದ್ದಿಮೆಯಲಯಕ್ಕೆ ಪದಾರ್ಪಣೆಗೈದರು.

ಟಾಟಾ ಗ್ರೂಪ್‌ಗೆ ಪ್ರವೇಶ:

1971ರಲ್ಲಿ ರತನ್ ಟಾಟ ಸಮೂಹದ ಅಧೀನ ಸಂಸ್ಥೆ ನೆಲ್ಕೋ ಕಂಪೆನಿ ಸೇರಿದರು. ಬಳಿಕ ಟಾಟಾ ಎಂಪ್ರೆಸ್ ಬಟ್ಟೆ ಗಿರಣಿಯ ಹೊಣೆ ಹೊತ್ತುಕೊಂಡರು. ರತನ್ ತಮ್ಮ ಅವಧಿಯಲ್ಲಿ ಈ ಎರಡೂ ಸಂಸ್ಥೆಗಳನ್ನೂ ಲಾಭದಾಯಕವಾಗಿಸಿದ್ದರು. ಈ ನಡುವೆ 1975ರಲ್ಲಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಿಂದ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಪ್ರೊಗ್ರಾಂನಲ್ಲಿ ಪದವಿ ಗಳಿಸಿದರು. 1981ರಲ್ಲಿ ಟಾಟಾ ಇಂಡಸ್ಟ್ರೀಸ್‌ಗೆ ಅಧ್ಯಕ್ಷರಾಗಿ ನೇಮಕರಾದರು. 1991ರಲ್ಲಿ ರತನ್ ಟಾಟಾ ಟಾಟಾ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.