ಸಾರಾಂಶ
ಅಮರಾವತಿ: ಅಗತ್ಯವಸ್ತುಗಳ ಬೆಲೆ ಗಗನಕ್ಕೆ ಏರಿರುವ ನಡುವೆಯೇ, ಆಂಧ್ರಪ್ರದೇಶದಲ್ಲಿ ತಾನು ಅಧಿಕಾರಕ್ಕೆ ಬಂದರೆ ಮದ್ಯದ ಬೆಲೆಯನ್ನು ಇಳಿಸುವುದಾಗಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಭರವಸೆ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಮದ್ಯ ಪ್ರಿಯರ ಮತವನ್ನು ಬುಟ್ಟಿಗೆ ಹಾಕಿಕೊಳ್ಳುವ ಯತ್ನ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಯ್ಡು, ‘ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮದ್ಯ ಮಾರಾಟವನ್ನೇ ನಿಷೇಧಿಸುವುದಾಗಿ ಈ ಹಿಂದೆ ವೈಎಸ್‌ಆರ್ ಕಾಂಗ್ರೆಸ್ ನಾಯಕ ಜಗನ್‌ಮೋಹನ ರೆಡ್ಡಿ ಹೇಳಿದ್ದರು. ಆದರೆ ಗೆದ್ದ ಮೇಲೆ ನಿಷೇಧದ ಬದಲು ಕಳಪೆ ಗುಣಮಟ್ಟದ ಮದ್ಯ ಪೂರೈಕೆ ಮೂಲಕ ಜನರ ಆರೋಗ್ಯ ಕೆಡಿಸುತ್ತಿದ್ದಾರೆ. ಜೊತೆಗೆ ದರವನ್ನೂ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದ್ದಾರೆ. 70 ರು.ಗೆ ಸಿಗುತ್ತಿದ್ದ ಮದ್ಯದ ಬೆಲೆಯನ್ನು 200 ರು.ಗೆ ಹೆಚ್ಚಿಸಿ 100 ರು.ಗಳನ್ನು ತಮ್ಮ ಜೇಬಿಗೆ ಹಾಕಿಕೊಂಡಿದ್ದಾರೆ’ ಎಂದು ಆರೋಪಿಸಿದರು.
‘ಹೀಗಾಗಿಯೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗುಣಮಟ್ಟದ ಮದ್ಯ ಪೂರೈಕೆ ಮಾಡಲಿದೆ. ಜೊತೆಗೆ ದರವನ್ನೂ ಇಳಿಸಲಿದೆ’ ಎಂದು ನಾಯ್ಡು ಭರವಸೆ ನೀಡಿದರು. 2022-23ನೇ ಸಾಲಿನಲ್ಲಿ ಆಂಧ್ರಪ್ರದೇಶ ಸರ್ಕಾರ ಮದ್ಯ ಮಾರಾಟದಿಂದ 24000 ಕೋಟಿ ರು. ಆದಾಯ ಸಂಗ್ರಹಿಸಿತ್ತು.
ಆಂಧ್ರಪ್ರದೇಶದಲ್ಲಿ ಲೋಕಸಭೆಗೆ ಜೊತೆಗೆ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆಯುತ್ತಿದೆ.
;Resize=(128,128))
;Resize=(128,128))
;Resize=(128,128))
;Resize=(128,128))