ರಾಯ್ಬರೇಲಿಯ ಅಭಿನವ್‌ ಹೆಸರು ಸೂಚಿಸಿ ರಾಗಾಗೆ ಪತ್ರ ಬರೆದಿರುವ ತೇಜಸ್ವಿ ಸೂರ್ಯ ಸ್ಥಳ ಮತ್ತು ಸಮಯ ನಿಗದಿಪಡಿಸುವಂತೆ ಕೋರಿದ್ದಾರೆ.

ನವದೆಹಲಿ: ಲೋಕಸಭೆ ಚುನಾವಣೆ ನಡೆಯುತ್ತಿರುವ ಈ ಹಂತದಲ್ಲಿ ಪ್ರಧಾನಿನರೇಂದ್ರ ಮೋದಿಜತೆ ಬಹಿರಂಗ ಚರ್ಚೆಗೆ ತಾವು ಸಿದ್ಧ ಎಂದಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸವಾಲನ್ನು ಬಿಜೆಪಿ ಸ್ವೀಕರಿಸಿದೆ. ಆದರೆ ಮೋದಿ ಈ ಚರ್ಚೆಗೆ ಬರುವುದಿಲ್ಲ. ಬದಲಿಗೆ ರಾಹುಲ್‌ ಜತೆ ಬಹಿರಂಗ ಚರ್ಚೆ ಮಾಡಲು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಅಭಿನವ್‌ ಪ್ರಕಾಶ್‌ ಅವರ ಹೆಸರನ್ನು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರು ಸೂಚಿಸಿದ್ದಾರೆ.

ಅಭಿನವ್‌ ಅವರು ಯುವಕರಾಗಿದ್ದು, ಉತ್ತಮ ವ್ಯಾಸಂಗ ಪಡೆದ ನಾಯಕರಾಗಿದ್ದಾರೆ. ರಾಯ್‌ಬರೇಲಿಯಲ್ಲಿ ಶೇ.30ರಷ್ಟಿರುವ ಪಾಸಿ (ಎಸ್ಸಿ) ಸಮುದಾಯಕ್ಕೆ ಸೇರಿದವರಾಗಿದ್ದಾರೆ. ರಾಜಕೀಯ ವಂಶದ ಕುಡಿ ಹಾಗೂ ಶ್ರೀಸಾಮಾನ್ಯ ಯುವಕನ ನಡುವಣ ಉತ್ಕೃಷ್ಟ ಸಂವಾದ ಇದಾಗಲಿದೆ ಎಂದು ರಾಹುಲ್‌ ಗಾಂಧಿ ಅವರಿಗೆ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ.

ಈ ನಡುವೆ, ರಾಹುಲ್‌ ಜತೆ ಬಹಿರಂಗ ಚರ್ಚೆಗೆ ತಮ್ಮ ಹೆಸರನ್ನು ನಾಮನಿರ್ದೇಶನ ಮಾಡಿದ್ದಕ್ಕೆ ತೇಜಸ್ವಿ ಸೂರ್ಯ ಅವರಿಗೆ ಅಭಿನವ್‌ ಧನ್ಯವಾದ ತಿಳಿಸಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನ, ಆಡಳಿತ, ಉದ್ಯೋಗ ಕುರಿತು ಚರ್ಚೆಯಾಗಲಿ ಎಂದು ಹೇಳಿದ್ದಾರೆ.