ಸಾರಾಂಶ
ಶ್ರೀಕಾಕುಲಂ: ಆಂಧ್ರಪ್ರದೇಶದಲ್ಲಿ ಲೋಕಸಮರದ ಜೊತೆ ಜೊತೆಗೆ ಅಸೆಂಬ್ಲಿ ಎಲೆಕ್ಷನ್ ಕಾವು ಕೂಡ ಜೋರಾಗಿದೆ. ಇಲ್ಲಿ ವಿಧಾನಸಭೆ ಚುನಾವಣೆಯ ಜಿದ್ದಾಜಿದ್ದಿನ ಸ್ಪರ್ಧೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದಲ್ಲಿರುವ ಪತಿ, ಪತ್ನಿಯ ದಾಂಪತ್ಯ ಕಲಹಕ್ಕೆ ಸಾಕ್ಷಿಯಾಗಿದೆ. ತಮ್ಮ ಬದಲಿಗೆ ಪತಿಗೆ ಟಿಕೆಟ್ ನೀಡಿದ್ದಕ್ಕೆ ಸಿಡಿದೆದ್ದಿರುವ ಪತ್ನಿ ಬಂಡಾಯವಾಗಿ ಸ್ಪರ್ಧಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ತೆಕ್ಕಲಿ ಕ್ಷೇತ್ರದಲ್ಲಿ ಪಕ್ಷದ ನಾಯಕ ಶ್ರೀನಿವಾಸ್‌ಗೆ ವಿಧಾನಸಭಾ ಟಿಕೆಟ್ ನೀಡುವುದಾಗಿ ಕಳೆದ ವರ್ಷವೇ ವೈಎಎಸ್ಆರ್ ಕಾಂಗ್ರೆಸ್ ನಾಯಕರು ಘೋಷಿಸಿದ್ದರು. ಆದರೆ ತಮ್ಮ ಪತಿ ಕೆಲವೊಂದು ನಿಲುವುಗಳನ್ನು ಅವರ ಪತ್ನಿ ವಾಣಿ ಪ್ರಶ್ನಿಸಿದ ಬಳಿಕ ವಾಣಿ ಅವರನ್ನು ಕ್ಷೇತ್ರದ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಹೀಗಾಗಿ ವಾಣಿ ತಮಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು.
ಆದರೆ ಇತ್ತೀಚೆಗೆ ಪಕ್ಷ ಶ್ರೀನಿವಾಸ್‌ಗೆ ಟಿಕೆಟ್ ಪ್ರಕಟಿಸಿದೆ. ಅದರ ಬೆನ್ನಲ್ಲೇ ವಾಣಿ ಸಿಟ್ಟಿಗೆದ್ದು ಒಂದು ವೇಳೆ ಪಕ್ಷ ತನ್ನ ನಿರ್ಧಾರವನ್ನು ಬದಲಿಸದಿದ್ದರೆ, ಏ.22 ರಂದು ನಾಮಪತ್ರ ಸಲ್ಲಿಕೆ ಮಾಡಿ, ಪತಿ ಶ್ರೀನಿವಾಸ್ ವಿರುದ್ಧ ಬಂಡಾಯ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.
ಹೀಗೆ ವಿಧಾನಸಭಾ ಚುನಾವಣೆ 30 ವರ್ಷಗಳಿಂದ ಖುಷಿ ಖುಷಿಯಿಂದ ದಾಂಪತ್ಯ ಜೀವನ ನಡೆಸುತ್ತಿದ್ದ ದಂಪತಿಗಳ ನಡುವೆ ಕಲಹ ತಂದಿಟ್ಟಿದೆ. ಶ್ರೀನಿವಾಸ್‌ಗೆ ಟಿಕೆಟ್ ಘೋಷಣೆಯಾಗುತ್ತಲೇ, ಮನೆ ತೊರೆದಿರುವ ವಾಣಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.