2013ರ ಹೈದರಾಬಾದ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಯಾಸಿನ್‌ ಭಟ್ಕಳ ಸೇರಿ ಐವರಿಗೆ ಗಲ್ಲು ಕಾಯಂ

| N/A | Published : Apr 09 2025, 12:31 AM IST / Updated: Apr 09 2025, 04:52 AM IST

ಸಾರಾಂಶ

2013ರ ಹೈದರಾಬಾದ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಯಾಸಿನ್‌ ಭಟ್ಕಳ್‌ ಸೇರಿದಂತೆ ಐವರಿಗೆ ಮರಣದಂಡನೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತೆಲಂಗಾಣ ಹೈಕೋರ್ಟ್‌ ಮಂಗಳವಾರ ಎತ್ತಿ ಹಿಡಿದಿದೆ.

ಹೈದರಾಬಾದ್‌: 2013ರ ಹೈದರಾಬಾದ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಯಾಸಿನ್‌ ಭಟ್ಕಳ್‌ ಸೇರಿದಂತೆ ಐವರಿಗೆ ಮರಣದಂಡನೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತೆಲಂಗಾಣ ಹೈಕೋರ್ಟ್‌ ಮಂಗಳವಾರ ಎತ್ತಿ ಹಿಡಿದಿದೆ. 2013ರ ಫೆಬ್ರವರಿ 21 ರಂದು ನಗರದ ಜನದಟ್ಟಣೆಯ ಶಾಪಿಂಗ್ ಪ್ರದೇಶವಾದ ದಿಲ್‌ಸುಖ್‌ನಗರದಲ್ಲಿ ಅವಳಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 18 ಮಂದಿ ಸಾವನ್ನಪ್ಪಿದ್ದರೆ, 131 ಮಂದಿ ಗಾಯಗೊಂಡಿದ್ದರು.

ಈ ಪ್ರಕರಣ ಸಂಬಂಧ 2016ರ ಡಿಸೆಂಬರ್‌ 13 ರಂದು ವಿಚಾರಣಾಧೀನ ನ್ಯಾಯಾಲಯ ಕರ್ನಾಟಕದ ಭಟ್ಕಳ ಮೂಲದ ಮೊಹದ್‌ ಅಹ್ಮದ್‌ ಸಿದ್ದಿಬಾಪಾ ಅಲಿಯಾಸ್‌ ಯಾಸಿನ್ ಭಟ್ಕಳ್‌, ಜಿಯಾ- ಉರ್‌- ರಹಮಾನ್ ಅಲಿಯಾಸ್‌ ವಕಾಸ್‌, ಅಸಾದುಲ್ಲಾ ಅಖ್ತರ್‌ ಅಲಿಯಾಸ್‌ ಹಡ್ಡಿ, ತಹಸೀನ್ ಅಖ್ತರ್‌ ಅಲಿಯಾಸ್‌ ಮೋನು ಮತ್ತು ಅಜಾರನ್ನು ದೋಷಿಗಳೆಂದು ಪರಿಗಣಿಸಿ ಮರಣದಂಡನೆ ವಿಧಿಸಿತ್ತು. ಬಳಿಕ ಐವರು ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಆದರೆ ಹೈಕೋರ್ಟ್‌ ಎನ್‌ಐಎ ನ್ಯಾಯಾಲಯ ತೀರ್ಪನ್ನು ಎತ್ತಿ ಹಿಡಿದಿದ್ದು, ವಿಚಾರಣಾ ನ್ಯಾಯಾಲಯ ತೀರ್ಪನ್ನು ದೃಢೀಕರಿಸಲಾಗುತ್ತದೆ ಎಂದಿದೆ.

ಈ ಕೃತ್ಯದ ಮುಖ್ಯ ರೂವಾರಿ ರಿಯಾಜ್‌ ಭಟ್ಕಳ್‌ ಈಗಲೂ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ.