ನೀಟ್‌ ಮರು ಪರೀಕ್ಷೆ ಹಿನ್ನೆಲೆಯಲ್ಲಿ ಜೂ.22ರ ವರೆಗೆ ಭಾರತದಲ್ಲಿ ಮೊಬೈಲ್ ಸಾಮಾಜಿಕ ಮಾಧ್ಯಮ ‘ಟೆಲಿಗ್ರಾಂ’ಗೆ ನಿರ್ಬಂಧ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಟೆಲಿಗ್ರಾಂ ಬಳಸಿಕೊಂಡು ನಕಲಿ ಪ್ರಶ್ನೆ ಪತ್ರಿಕೆ ಹಂಚುವುದು, ವಿದ್ಯಾರ್ಥಿಗಳನ್ನು ದಾರಿತಪ್ಪಿಸುವ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

- ನೀಟ್‌ ಮರುಪರೀಕ್ಷೆ ಮುಗಿವವರೆಗೆ ನಿರ್ಬಂಧ ಜಾರಿ

- ಪ್ರಶ್ನೆ ಪತ್ರಿಕೆ ಲೀಕ್‌ ಆಗಿದೆ ಎಂದು ದಾರಿತಪ್ಪಿಸಲೆತ್ನ

- ವಿದ್ಯಾರ್ಥಿ, ಪೋಷಕರಿಂದ ಕೆಲವರಿಂದ ಹಣ ವಸೂಲಿ

- ಇದಕ್ಕೆ ಕಡಿವಾಣ ಹಾಕಲು ಕೇಂದ್ರದಿಂದ ಈ ನಿರ್ಧಾರ

ಪಿಟಿಐ ನವದೆಹಲಿ

ನೀಟ್‌ ಮರು ಪರೀಕ್ಷೆ ಹಿನ್ನೆಲೆಯಲ್ಲಿ ಜೂ.22ರ ವರೆಗೆ ಭಾರತದಲ್ಲಿ ಮೊಬೈಲ್ ಸಾಮಾಜಿಕ ಮಾಧ್ಯಮ ‘ಟೆಲಿಗ್ರಾಂ’ಗೆ ನಿರ್ಬಂಧ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಟೆಲಿಗ್ರಾಂ ಬಳಸಿಕೊಂಡು ನಕಲಿ ಪ್ರಶ್ನೆ ಪತ್ರಿಕೆ ಹಂಚುವುದು, ವಿದ್ಯಾರ್ಥಿಗಳನ್ನು ದಾರಿತಪ್ಪಿಸುವ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಈ ಹಿಂದೆ ಮೇ 3ರಂದು ನಡೆದಿದ್ದ ಈ ವೈದ್ಯಕೀಯ ಕೋರ್ಸ್‌ ಪ್ರವೇಶದ ಅರ್ಹತಾ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿತ್ತು. ಟೆಲಿಗ್ರಾಂನಲ್ಲಿ ಪ್ರಶ್ನೆಪತ್ರಿಕೆ ಹರಿದಾಡಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮರು ಪರೀಕ್ಷೆಯಲ್ಲಿ ಅಂಥ ಯಾವುದೇ ಎಡವಟ್ಟು ಪುನರಾವರ್ತನೆ ಆಗದಂತೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಅದರ ಭಾಗವಾಗಿ ಇದೀಗ ಟೆಲಿಗ್ರಾಂಗೆ ತಾತ್ಕಾಲಿಕ ನಿರ್ಬಂಧ ಹೇರಿದೆ.

ಕೇಂದ್ರದ ಈ ಕ್ರಮವನ್ನು ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ಸ್ವಾಗತಿಸಿದ್ದು, ಟೆಲಿಗ್ರಾಂ ಮೂಲಕ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಸಂಘಟಿತ ರೂಪದಲ್ಲಿ ವಂಚಿಸುತ್ತಿರುವ ಪ್ರಕರಣಗಳಿಗೆ ಇದರಿಂದ ಕಡಿವಾಣ ಬೀಳಲಿದೆ ಎಂದು ಹೇಳಿಕೊಂಡಿದೆ.

ಹಲವು ಗ್ರೂಪ್‌ಗಳು ಸಕ್ರಿಯ:

ಬಿಹಾರ, ರಾಜಸ್ಥಾನ, ಗುಜರಾತ್‌ ಪೊಲೀಸರು ಈಗಾಗಲೇ ಪೇಪರ್‌ ಲೀಕ್ಡ್‌ ನೀಟ್‌, ಪ್ರೈವೇಟ್‌ ಮಾಫಿಯಾ ಸೇರಿ ಹಲವು ಟೆಲಿಗ್ರಾಂ ಗ್ರೂಪ್‌ಗಳ ಕುರಿತು ಕೇಂದ್ರಕ್ಕೆ ಮಾಹಿತಿ ನೀಡಿವೆ. ಅಹಮದಾಬಾದ್‌ ಸಿಟಿ ಸೈಬರ್‌ ಕ್ರೈಂ ಬ್ರಾಂಚ್‌ ಪೊಲೀಸರು ಇತ್ತೀಚೆಗಷ್ಟೇ ಅಂತರ್‌ ರಾಜ್ಯ ಗ್ಯಾಂಗ್‌ವೊಂದನ್ನು ಬಂಧಿಸಿದ್ದು, ಅ‍ವರು 8 ಟೆಲಿಗ್ರಾಂ ಚಾನೆಲ್‌ಗಳನ್ನು ನಡೆಸುತ್ತಿದ್ದು, ಪ್ರಶ್ನೆ ಪತ್ರಿಕೆ ಒದಗಿಸುತ್ತೇವೆ ಎಂದು ಹೇಳಿಕೊಂಡು 1.5 ಕೋಟಿ ರು. ವ್ಯವಹಾರ ಮಾಡಿರುವುದು ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರಕ್ಕೆ ಇಂಥ ಚಾನೆಲ್‌ಗಳನ್ನು ಪ್ರತ್ಯೇಕವಾಗಿ ನಿರ್ಬಂಧಿಸುವುದು ಕಠಿಣವಾಗಿದ್ದರಿಂದ ಅಂತಿಮವಾಗಿ ವಿಧಿ ಇಲ್ಲದೆ ಪರೀಕ್ಷೆ ಮುಗಿಯುವವರೆಗೆ ಟೆಲಿಗ್ರಾಂ ಮೇಲೆಯೇ ನಿರ್ಬಂಧ ಹೇರಿದೆ.