26/11 ಮುಂಬೈ ದಾಳಿ ಉಗ್ರ ತಹಾವುರ್‌ ರಾಣಾ ಭಾರತ ಗಡೀಪಾರು ವಿಳಂಬ ಸಂಭವ : ನಿರಾಶೆಯ ಮಾಹಿತಿ

| N/A | Published : Feb 17 2025, 12:32 AM IST / Updated: Feb 17 2025, 05:34 AM IST

ಸಾರಾಂಶ

26/11 ಮುಂಬೈ ದಾಳಿ ಉಗ್ರ ತಹಾವುರ್‌ ರಾಣಾ ಭಾರತ ಗಡೀಪಾರು ವಿಳಂಬವಾಗುವ ಸಾಧ್ಯತೆ ಇದೆ ಎಂಬ ನಿರಾಶೆಯ ಮಾಹಿತಿ ಲಭ್ಯವಾಗಿದೆ.

ವಾಷಿಂಗ್ಟನ್‌: 26/11 ಮುಂಬೈ ದಾಳಿ ಉಗ್ರ ತಹಾವುರ್‌ ರಾಣಾ ಭಾರತ ಗಡೀಪಾರು ವಿಳಂಬವಾಗುವ ಸಾಧ್ಯತೆ ಇದೆ ಎಂಬ ನಿರಾಶೆಯ ಮಾಹಿತಿ ಲಭ್ಯವಾಗಿದೆ. ಇದರಿಂದ ಬೇಗನೇ ಆತನನ್ನು ಭಾರತಕ್ಕೆ ಕರೆತರುವ ಭಾರತಕ್ಕೆ ಹಿನ್ನಡೆ ಆಗಿದೆ. ರಾಣಾ ತನ್ನ ಗಡೀಪಾರು ಆದೇಶ ಪ್ರಶ್ನಿಸಿ ಮಾನವೀಯ ನೆಲೆಯಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಅಮೆರಿಕದ ಮೇಲ್ಮನವಿ ವೇದಿಕೆಯಲ್ಲಿ ಆತ ಗಡೀಪಾರು ಪ್ರಶ್ನಿಸಿದ್ದು, ಮಾನವೀಯ ನೆಲೆಯಲ್ಲಿ ತನಗೆ ಅಮೆರಿಕದಲ್ಲೇ ಇರಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾನೆ. ಇದು ಆತನ ಗಡೀಪಾರು ತಡೆಯ ಕೊನೆ ಯತ್ನ ಎನ್ನಲಾಗಿದೆ.

ಹೀಗಾಗಿ ಈ ಅರ್ಜಿ ಇತ್ಯರ್ಥ ಆಗಲು ಸಮಯ ಹಿಡಿಯಬಹುದು. ಸದ್ಯಕ್ಕೆ ಆತ ಭಾರತಕ್ಕೆ ಗಡೀಪಾರಾಗಲ್ಲ ಎಂದು ಮೂಲಗಳು ಹೇಳಿವೆ.

ಕಳೆದ ತಿಂಗಳು ಅಮೆರಿಕ ಸುಪ್ರೀಂ ಕೋರ್ಟ್‌, ಆತನ ಗಡೀಪಾರಿಗೆ ಆದೇಶಿಸಿತ್ತು. ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಾಗ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ‘ತಕ್ಷಣವೇ ರಾಣಾ ಗಡೀಪಾರಿಗೆ ಕ್ರಮ ಜರುಗಿಸಲಾಗುವುದು’ ಎಂದಿದ್ದರು.

2008ರ ನ.26ರಂದು ಮುಂಬೈ ಮೇಲೆ ನಡೆದ ಉಗ್ರಗಾಮಿ ದಾಳಿಗೆ ಡೇವಿಡ್‌ ಹೆಡ್ಲಿ ಎಂಬ ಉಗ್ರ ಸಮೀಕ್‌ಷೆ ನಡೆಸಿದ್ದ. ಆತನಿಗೆ ಮುಂಬೈನಲ್ಲಿನ ತನ್ನ ಕಚೇರಿಯಲ್ಲಿ ಆಶ್ರಯ ನೀಡಿದ್ದ ಆರೋಪ ರಾಣಾ ಮೇಲಿದೆ. ಅಮೆರಿಕದಲ್ಲಿ ಆತ 16 ವರ್ಷ ಹಿಂದೆ ಬಂಧಿತನಾಗಿದ್ದ.