ಕೋಲ್ಕತಾ: ಪಾಕಿಸ್ತಾನ ಮೂಲದದ ಜೈಷ್‌ ಎ ಮೊಹಮ್ಮದ್‌ ಸಂಘಟನೆಯು ಭಾರತದ ಪ್ರಮುಖ ರಾಜಕಾರಣಿಗಳ ಹತ್ಯೆ ಮಾಡುವ, ರಾಜಕಾರಣಿಗಳ ಹನಿಟ್ರಾಪ್‌ ಮಾಡುವ ಹಾಗೂ ಜಿರಳೆ ಪಕ್ಷದ ಹೋರಾಟ ಹಳಿತಪ್ಪಿಸುವ ಸಂಚು ನಡೆಸಿದ್ದ ವಿಚಾರ ಓರ್ವ ಮಹಿಳೆ ಸೇರಿ ಇಬ್ಬರ ಬಂಧನದೊಂದಿಗೆ ಬಯಲಾಗಿದೆ.

ಪ.ಬಂಗಾಳ ಸಿಎಂ ಸುವೇಂದು ಅಧಿಕಾರಿ ಹತ್ಯೆ ಹಾಗೂ ದೆಹಲಿ ಜಿರಳೆ ಪಕ್ಷದ ಹೋರಾಟದಲ್ಲಿ ದಾಳಿ ನಡೆಸುವ ಸಂಚು ರೂಪಿಸಿದ್ದ ಮೊಹಮ್ಮದ್‌ ಹಮೀಂ ಮಂಡಲ್‌ ಎಂಬಾತನನ್ನು ಪ. ಬಂಗಾಳದ ಬರ್ಧಮಾನ್‌ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಇದಾದ ಬಳಿಕ ಜೈಷ್‌ ಎ ಮೊಹಮ್ಮದ್‌ ಹಾಗೂ ಮಂಡಲ್‌ ಸಂಪರ್ಕದಲ್ಲಿದ್ದುಕೊಂಡು ರಾಜಕಾರಣಿಗಳ ಹನಿಟ್ರ್ಯಾಪ್‌ಗೆ ಯತ್ನಿಸುತ್ತಿದ್ದ ಮಹಿಳೆ ಅರ್ಪಿತಾ ಸರ್ಕಾರ್‌ಳನ್ನು ಜಾರ್ಖಂಡ್‌ನಲ್ಲಿ ಬಂಧಿಸಲಾಗಿದೆ.

ಮಂಡಲ್‌ ಸಂಚು:

ವಿಶೇಷ ಕಾರ್ಯಪಡೆಯಿಂದ ಬರ್ಧಮಾನ್‌ ಎಂಬಲ್ಲಿ ಬಂಧಿತನಾದ ಮಂಡಲ್‌ ಪಾಕಿಸ್ತಾನದ ಐಎಸ್‌ಐ ಹಾಗೂ ಜೈಷ್ ಜತೆ ಸಂಪರ್ಕದಲ್ಲಿದ್ದ. ಆತನಿಗೆ ಬಿಜೆಪಿ ನಾಯಕರು ಸೇರಿದಂತೆ ಇತರೆ ಪ್ರಮುಖ ರಾಜಕೀಯ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಕಲೆಹಾಕುವುದು ಹಾಗೂ ರಾಜ್ಯದಲ್ಲಿ ಉಗ್ರದಾಳಿ ನಡೆಸಲು ಸ್ಥಳೀಯರನ್ನು ಸಜ್ಜುಗೊಳಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು.


ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಕೂಡ ಈತನ ಗುರಿಯಾಗಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ.

ಇದಲ್ಲದೆ, ಇತ್ತೀಚಿನ ಜಿರಳೆ ಪಕ್ಷದ ಪ್ರತಿಭಟನೆ ವೇಳೆ ಉಗ್ರರನ್ನು ಪೊಲೀಸ್‌ ವೇಷದಲ್ಲಿ ಕಳಿಸಿ ವಿಧ್ವಂಸಕ ಕೃತ್ಯ ಸೃಷ್ಟಿಸುವ ಸಂಚು ಕೂಡ ನಡೆದಿತ್ತು ಎಂದು ತಿಳಿದುಬಂದಿದೆ.

ಅರ್ಪಿತಾ ಹನಿಟ್ರ್ಯಾಪ್ ಸಂಚು:

ಅರ್ಪಿತಾ ಸರ್ಕಾರ್‌, ಮಂಡಲ್‌ನ ಸಹಚಾರಿಣಿ ಹಾಗೂ ಪ್ರೇಯಸಿ ಆಗಿದ್ದಳು. ರಾಜಕಾರಣಿಗಳ ಹನಿಟ್ರ್ಯಾಪ್‌ ಮಾಡುತ್ತಿದ್ದಳು ಎಂದು ಗೊತ್ತಾಗಿದೆ. ಆಕೆಯನ್ನು ಜಾರ್ಖಂಡ್‌ನಲ್ಲಿ ಬಂಧಿಸಲಾಗಿದೆ.

ನಾಯಕರ ಬಗ್ಗೆ ಮಾಹಿತಿ ಕಲೆಹಾಕಲು ಆತ ಅರ್ಪಿತಾಳನ್ನು ಮಂಡಲ್‌ ಬಳಸಿಕೊಳ್ಳುತ್ತಿದ್ದ. ಆಕೆ ಗಣ್ಯರನ್ನು ಮಧುಬಲೆಗೆ ಬೀಳಿಸಿಕೊಂಡು ಅವರ ಗೌಪ್ಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಳು. ಇವರಲ್ಲಿ ಪ.ಬಂಗಾಳದ ಹೌರಾ ಜಿಲ್ಲೆಯ ಓರ್ವ ಹಿರಿಯ ಸಚಿವ ಹಾಗೂ ಅವರ ಪುತ್ರ ಈಕೆಯ ಟಾರ್ಗೆಟ್‌ ಆಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಜತೆಗೆ ಉಗ್ರದಾಳಿಯ ಸಂಚಿನಲ್ಲಿ ಆಕೆಯ ಪಾತ್ರವೇನೆಂದು ತಿಳಿಯಲು ಡಿಜಿಟಲ್‌ ಸಾಕ್ಷ್ಯಗಳನ್ನು ಕಲೆಹಾಕಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅರ್ಪಿತಾಳ ಸಂಚು ಏನು?

- ರಾಜಕಾರಣಳನ್ನು ಖೆಡ್ಡಾಗೆ ಕೆಡವಿ ಮಾಹಿತಿ ಸಂಗ್ರಹ

- ಬಂಗಾಳದ ಓರ್ವ ಸಚಿವ, ಪುತ್ರ ಈಕೆಯ ಟಾರ್ಗೆಟ್‌

- ಮಾಹಿತಿ ಪಾಕ್‌ಗೆ ರವಾನೆ: ಜಾರ್ಖಂಡಲ್ಲಿ ಅರ್ಪಿತಾ ಬಂಧನ

ಮಂಡಲ್‌ ಸಂಚು ಏನು?

- ಪ.ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹತ್ಯೆಗೆ ಸಂಚು

- ದಿಲ್ಲಿ ಜಿರಳೆ ಪಾರ್ಟಿ ಹೋರಾಟದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಹುನ್ನಾರ