ಸಾರಾಂಶ
ನವದೆಹಲಿ : ಕೆಮ್ಮು ನಿವಾರಕ ಸಿರಪ್ ಸೇವಿಸಿ 11 ಮಕ್ಕಳು ಸಾವನ್ನಪ್ಪಿದ ಘಟನೆ ಆತಂಕ ಸೃಷ್ಟಿಸಿರುವ ನಡುವೆಯೇ, 19 ಕೆಮ್ಮಿನ ಸಿರಪ್ ಮತ್ತು ಆ್ಯಂಟಿಬಯೋಟಿಕ್‌ಗಳ ಉತ್ಪಾದನೆಯಲ್ಲಿ ತೊಡಗಿರುವ 6 ರಾಜ್ಯಗಳ ಘಟಕದಲ್ಲಿ ತಪಾಸಣೆ ನಡೆಸಲು ಕೇಂದ್ರ ಔಷಧ ನಿಯಂತ್ರಕ (ಸಿಡಿಎಸ್‌ಸಿಒ) ಮುಂದಾಗಿದೆ.
ಅತ್ತ ತಮಿಳುನಾಡಿನ ಬಳಿಕ ಮಧ್ಯಪ್ರದೇಶ ಹಾಗೂ ಕೇರಳ ಸರ್ಕಾರಗಳು, ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದ ಕೋಲ್ಡ್ರಿಫ್ ಸಿರಪ್ ಅನ್ನು ನಿಷೇಧಿಸಿದೆ. ಇದರ ನಡುವೆ, ಕೋಲ್ಡ್ರಿಫ್ ಸಿರಪ್‌ನಲ್ಲಿ ಕಲಬೆರಕೆ ಆಗಿದೆ ಎಂದು ತಮಿಳ್ನಾಡಲ್ಲಿ ನಡೆದ ಪರೀಕ್ಷೆಯಲ್ಲಿ ದೃಢವಾಗಿದೆ.
6 ರಾಜ್ಯಗಳಲ್ಲಿ ತಪಾಸಣೆ:
ಸಿರಪ್ ವಿವಾದದ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ‘ಔಷಧಗಳು ಕಳಪೆ/ಹಾನಿಕರವಾಗಲು ಕಾರಣಗಳೇನು ಎಂಬುದನ್ನು ಪತ್ತೆಮಾಡಿ, ಅದನ್ನು ಸರಿಪಡಿಸುವ ಉದ್ದೇಶದಿಂದ ಅ.3ರಿಂದಲೇ ಸಿಡಿಎಸ್‌ಸಿಒ, 16 ರಾಜ್ಯಗಳಲ್ಲಿನ ಔಷಧಿ ಘಟಕಗಳ 19 ಔಷಧಿಗಳ ತಪಾಸಣೆ ಶುರು ಮಾಡಿದೆ. ರಾಷ್ಟ್ರೀಯ ವೈರಾಲಜಿ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ಸಿಡಿಎಸ್‌ಸಿಒ ಮತ್ತು ನಾಗ್ಪುರದ ಏಮ್ಸ್‌ನ ತಜ್ಞರ ತಂಡ, ಮಧ್ಯಪ್ರದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಔಷಧಿಯ ಪರೀಕ್ಷೆಯಲ್ಲಿ ತೊಡಗಿವೆ’ ಎಂದು ತಿಳಿಸಿದೆ.
ಸಿರಪ್‌ನಲ್ಲಿ ಕಲಬೆರಕೆ-ವರದಿ:
ಮಕ್ಕಳ ಸಾವಿಗೆ ಕಾರಣವಾದ ಸಿರಪ್‌ನ ತಪಾಸಣೆ ನಡೆಸಿದ ತಮಿಳುನಾಡಿನ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳಿಗೆ, ಅದರಲ್ಲಿ ಕಲಬೆರಕೆಯಾಗಿರುವುದು ಕಂಡುಬಂದಿದೆ. ಇದರ ಬೆನ್ನಲ್ಲೇ ಚೆನ್ನೈನಲ್ಲಿರುವ ಘಟಕದಲ್ಲಿ ಔಷಧಿ ಉತ್ಪಾದನೆ ನಿಲ್ಲಿಸುವಂತೆ ಆದೇಶಿಸಲಾಗಿದ್ದು, ಕಲಬೆರಕೆಯ ಬಗ್ಗೆ ವಿವರಣೆ ನೀಡುವಂತೆ ಕೇಳಲಾಗಿದೆ.
ಇತ್ತೀಚೆಗಷ್ಟೇ ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದ 9 ಮತ್ತು ರಾಜಸ್ಥಾನದ 2 ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಆ ಬಗ್ಗೆ ತನಿಖೆ ನಡೆಸುವಂತೆ ತಮಿಳುನಾಡು ಸರ್ಕಾರಕ್ಕೆ ಕೋರಲಾಗಿತ್ತು. ಶುಕ್ರವಾರವಷ್ಟೇ ತಮಿಳುನಾಡು ಕೋಲ್ಡ್ರಿಫ್ ಅನ್ನು ನಿಷೇಧ ಮಾಡಿತ್ತು.
ಮ.ಪ್ರ, ಕೇರಳದಲ್ಲೂ ಬ್ಯಾನ್:
ಕೋಲ್ಡ್ರಿಫ್ ಸಿರಪ್‌ನ ಮಾದರಿ ಪರೀಕ್ಷೆಯ ವರದಿ ಬಂದ ಬೆನ್ನಲ್ಲೇ, ಮಧ್ಯಪ್ರದೇಶ ಸರ್ಕಾರ ಆ ಸಿರಪ್ ಬಳಕೆಯನ್ನು ನಿಷೇಧಿಸಿದೆ. ಜತೆಗೆ, ಕಾಂಚೀಪುರಂನಲ್ಲಿರುವ ಆ ಸಿರಪ್ ತಯಾರಿಸಿದ ಕಂಪನಿ ತಯಾರಿಸುವ ಎಲ್ಲಾ ಉತ್ಪನ್ನಗಳ ಮೇಲೆಯೂ ಸರ್ಕಾರ ನಿರ್ಬಂಧ ಹೇರಿದೆ. ಅತ್ತ ಕೇರಳದಲ್ಲೂ ಕೋಲ್ಡ್ರಿಫ್ ಸಿರಪ್‌ನ ಮಾರಾಟವನ್ನು ನಿಷೇಧಿಸಿ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶ ಹೊರಡಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))