ಸಾರಾಂಶ
ತಿರುವನಂತಪುರಂ: ಕಾಂಗ್ರೆಸ್ ಸಂಸದರಾಗಿದ್ದರೂ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸುತ್ತಾ, ಬಿಜೆಪಿಯ ನಡೆ ಬೆಂಬಲಿಸುತ್ತಿರುವ ಶಶಿ ತರೂರ್, ತಮ್ಮದೇ ಪಕ್ಷ 5 ದಶಕದ ಹಿಂದೆ ದೇಶದಲ್ಲಿ ಹೇರಿದ್ದ ತುರ್ತುಸ್ಥಿತಿಯನ್ನು ‘ಭಾರತದ ಇತಿಹಾಸದ ಕರಾಳ ಅಧ್ಯಾಯ’ ಎಂದು ಕರೆದಿದ್ದಾರೆ.
ಮಲಯಾಳಂ ಪತ್ರಿಕೆ ‘ದೀಪಿಕಾ’ದಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ತರೂರ್, ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಹೇರಿದ್ದ ತುರ್ತುಸ್ಥಿತಿಯನ್ನು ಮುಖ್ಯವಸ್ತುವಾಗಿಟ್ಟುಕೊಂಡು, ಆ ಸಂದರ್ಭದಲ್ಲಿ ಸಂಜಯ್ ಗಾಂಧಿಯವರು ಬಲವಂತದ ಸಂತಾಣಹರಣ ಅಭಿಯಾನ ಟೀಕಿಸಿದ್ದಾರೆ.
‘ಸಂಜಯ್ ಗಾಂಧಿ ಅವರು ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಲು ಬಡ ಗ್ರಾಮೀಣ ಪ್ರದೇಶಗಳಲ್ಲಿ ಹಿಂಸೆ ಮತ್ತು ಬಲಪ್ರಯೋಗ ಮಾಡಲಾಗುತ್ತಿತ್ತು. ದೆಹಲಿಯಂತಹ ನಗರಗಳಲ್ಲಿ ಸ್ಲಮ್‌ಗಳನ್ನು ನಿರ್ದಯವಾಗಿ ಕೆಡವಿ, ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿಸಲಾಗಿತ್ತು. ಶಿಸ್ತು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮಾಡಲಾಗಿದ್ದ ಯತ್ನಗಳೆಲ್ಲಾ ಕ್ರೌರ್ಯವಾದವು’ ಎಂದಿದ್ದಾರೆ.
‘ಇಂದು ಭಾರತ, 1975ರಲ್ಲಿ ಇದ್ದಹಾಗೆ ಇಲ್ಲ. ನಾವೀಗ ಹೆಚ್ಚು ಆತ್ಮವಿಶ್ವಾಸ ಉಳ್ಳವರು, ಅಭಿವೃದ್ಧಿ ಹೊಂದಿದ ಬಲಶಾಲಿ ಪ್ರಜಾಪ್ರಭುತ್ವವಾಗಿದ್ದೇವೆ. ಆದರೆ ತುರ್ತುಸ್ಥಿತಿಯ ಪಾಠಗಳು ಈಗಲೂ ಪ್ರಸ್ತುತವಾಗಿವೆ’ ಎಂದು ಹೇಳಿದ್ದಾರೆ.
ಅಂತೆಯೇ, ‘ಅಧಿಕಾರವನ್ನು ಕೇಂದ್ರೀಕರಿಸುವ, ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ, ಸಾಂವಿಧಾನಿಕ ಪರಿಶೀಲನೆಗಳನ್ನು ಕಡೆಗಣಿಸುವ ಪ್ರಚೋದನೆಗಳು ಬೇರೆಬೇರೆ ರೀತಿಗಳಲ್ಲಿ ಮತ್ತೆ ಕಾಣಿಸಿಕೊಳ್ಳಬಹುದು. ಅವುಗಳನ್ನು ರಾಷ್ಟ್ರೀಯ ಹಿತಾಸಕ್ತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳುವಿಕೆಯ ಹೆಸರಲ್ಲಿ ಸಮರ್ಥಿಸಿಕೊಳ್ಳುವ ಸಾಧ್ಯತೆಯೂ ಇದೆ. ಪ್ರಜಾಪ್ರಭುತ್ವದ ರಕ್ಷಕರು ಸದಾ ಎಚ್ಚರಿಕೆಯಿಂದ ಇರಬೇಕಾಗಿದೆ’ ಎಂದು ತರೂರ್ ಪರೋಕ್ಷವಾಗಿ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ತರೂರ್ ಬಿಜೆಪಿ ಗಿಣಿ ? :
ತುರ್ತುಸ್ಥಿತಿ ಕುರಿತ ತರೂರ್ ಲೇಖನದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂದಸ ಮಾಣಿಕ್ಯಂ ಟ್ಯಾಗೋರ್, ‘ನಮ್ಮ ಪಕ್ಷದ ನಾಯಕ ಬಿಜೆಪಿಯ ಸಾಲುಗಳನ್ನು ಪುನರುಚ್ಚರಿಸುವುದನ್ನು ನೋಡುತ್ತಿದ್ದರೆ, ಹಕ್ಕಿ ಗಿಳಿಯಾಗುತ್ತಿದೆಯೇ ಎಂದೆನಿಸುತ್ತದೆ. ಅಣಕ ಪಕ್ಷಿಗಳು ಮಾಡಿದರಷ್ಟೇ ಚಂದ, ರಾಜಕಾರಣಿಗಳಲ್ಲ’ ಎಂದು ತಿವಿದಿದ್ದಾರೆ.