ಶಶಿ ತರೂರ್‌ ನೇತೃತ್ವದ ನಿಯೋಗದೊಂದಿಗೆ ತೇಜಸ್ವಿ

| N/A | Published : May 19 2025, 08:02 AM IST

Tejasvi Surya

ಸಾರಾಂಶ

ಕಾಂಗ್ರೆಸ್‌ ಸಂಸದ ಡಾ.ಶಶಿ ತರೂರ್‌ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೆರಳಲಿದ್ದಾರೆ.

  ಬೆಂಗಳೂರು :  ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಮತ್ತು ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ಕುರಿತಂತೆ ಭಾರತದ ನಿಲುವು ತಿಳಿಸಲು ಅಮೆರಿಕ ಸೇರಿದಂತೆ ಇನ್ನಿತರ ದೇಶಗಳಿಗೆ ಭೇಟಿ ನೀಡಲು ಕಾಂಗ್ರೆಸ್‌ ಸಂಸದ ಡಾ.ಶಶಿ ತರೂರ್‌ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೆರಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 32 ದೇಶಗಳು ಮತ್ತು ಯೂರೋಪಿಯನ್‌ ಒಕ್ಕೂಟಕ್ಕೆ ಭೇಟಿ ನೀಡಲು ಏಳು ಸರ್ವಪಕ್ಷ ನಿಯೋಗಗಳನ್ನು ರಚಿಸಿದ್ದು, ಆಮೂಲಕ ಪ್ರಮುಖ ರಾಜತಾಂತ್ರಿಕ ಪ್ರಯತ್ನ ಮಾಡಲಾಗಿದೆ. ಪ್ರತಿ ತಂಡವು ನೀತಿ ಮತ್ತು ರಾಜತಾಂತ್ರಿಕ ಪರಿಣಿತಿಯನ್ನು ಹೊಂದಿರುವ ಸಂಸದರು, ನಿವೃತ್ತ ರಾಜತಾಂತ್ರಿಕರನ್ನು ಒಳಗೊಂಡಿದೆ. 

ನಿಯೋಗಗಳು ಭಯೋತ್ಪಾದನೆ ಕುರಿತು ಭಾರತದ ದೃಢ ಮತ್ತು ಏಕೀಕೃತ ನಿಲುವನ್ನು ವಿವರಿಸುವ ಮತ್ತು ಗಡಿಯಾಚೆಗಿನ ದಾಳಿಗಳ ಕುರಿತಂತೆ ಪ್ರತಿಕ್ರಿಯಿಸುವ ಹಕ್ಕನ್ನು ಪುನರುಚ್ಛರಿಸುವ ಗುರಿಯನ್ನು ಹೊಂದಿವೆ. ಅದರಲ್ಲಿ ಅಮೆರಿಕಕ್ಕೆ ತೆರಳಲಿರುವ ಭಾರತೀಯ ನಿಯೋಗದಲ್ಲಿ ಸಂಸದ ತೇಜಸ್ವಿ ಸೂರ್ಯ ಕೂಡ ಭಾಗವಹಿಸಲಿದ್ದು, ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತದ ಸಂದೇಶವನ್ನು ಅಮೆರಿಕಕ್ಕೆ ತಿಳಿಸಲಾಗುವುದು. ಅದರಲ್ಲೂ ಭಯೋತ್ಪಾದನೆ ವಿರುದ್ಧ ಭಾರತ ನಡೆಸಿದ ಆಪರೇಷನ್‌ ಸಿಂಧೂರ ಯಶಸ್ವಿ ಕಾರ್ಯಾಚರಣೆಯ ಮಹತ್ವದ ಕುರಿತಾಗಿ ವಿವರಿಸಲಾಗುವುದು. ಈ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಿರಿಯ ನಾಯಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. 

Read more Articles on