ಕನ್ನಡಪ್ರಭ ವಾರ್ತೆ ಬೆಂಗಳೂರು
ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಆರು ವರ್ಷದ ವೆನ್ನಿಲಾ ಕೊಲೆಗೈದ ಪ್ರಕರಣ ತನಿಖೆ ಮುಂದುವರೆದಿದ್ದು, ವೆನ್ನಿಲ್ಲಾಗೆ ಮೊಣಕೈಯಿಂದ ಗುದ್ದಿ ಬಳಿಕ ಆಕೆಯ ಮೂಗನ್ನು ಕೆಲ ನಿಮಿಷಗಳು ಬಿಗಿ ಹಿಡಿದು ಉಸಿರುಗಟ್ಟಿಸಿ ಮೃತಳ ತಾಯಿ ಪ್ರಿಯಕರ ಹತ್ಯೆಗೈದಿದ್ದಾನೆ ಸಂಗತಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.ಮಾ.24 ರಂದು ಹುಟ್ಟುಹಬ್ಬದ ನಿಮಿತ್ತ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಶಾಂಪಿಂಗ್‌ಗೆ ಸಂಜೆ ಪ್ರಿಯಾಂಕಾಳನ್ನು ಮೋಹನ್ ಕರೆದೊಯ್ದಿದ್ದ. ಆ ವೇಳೆ ಕಾರಿನಲ್ಲಿ ವೆನ್ನಿಲಾ ಸಹ ಇದ್ದಳು. ಅದೇ ದಿನ ಮುಂಜಾನೆಯಷ್ಟೇ ಜಗಳವಾಡಿಕೊಂಡು ಕೇರಳದಿಂದ ಮೋಹನ್ ಹಾಗೂ ಪ್ರಿಯಾಂಕಾ ಮರಳಿದ್ದರು. ಪ್ರಿಯತಮೆಯ ಜನ್ಮ ದಿನಾಚರಣೆ ಸಂಭ್ರಮ ಹಾಳಾಗಿದ್ದು, ಮೋಹನ್‌ಗೆ ಸಿಟ್ಟು ತರಿಸಿತ್ತು. ಆ ಕೋಪವನ್ನು ಮಗು ಮೇಲೆ ಆತ ತೀರಿಸಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಿಯಾಂಕಾ ಶಾಪಿಂಗ್ ತೆರಳಿದ ಬಳಿಕ ಕಾರಿನಲ್ಲಿ ಚಾಲಕನ ಸೀಟಿನಲ್ಲಿ ಮೋಹನ್ ಇದ್ದರೆ, ಹಿಂಬದಿ ಸೀಟಿನಲ್ಲಿ ವೆನ್ನಿಲಾ ಇದ್ದಳು. ಆಗ ಮಗುವಿಗೆ ಮೊಣಕೈಯಿಂದ ಬಲವಾಗಿ ಗುದ್ದಿದ್ದಾನೆ. ಈ ಹೊಡೆತದ ನೋವು ತಾಳಲಾರದೇ ಚೀರಾಟದಿಂದ ಮತ್ತಷ್ಟು ಸಿಟ್ಟಿಗೆದ್ದ ಆತ, ಮಗುವಿನ ಮೂಗನ್ನು ಕೆಲ ನಿಮಿಷಗಳು ಬಿಗಿ ಹಿಡಿದಿದ್ದಾನೆ. ಆಗ ಆಕೆ ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ. ಮರಣೋತ್ತರ ಪರೀಕ್ಷೆಯಲ್ಲಿ ಪೆಟ್ಟು ಹಾಗೂ ಉಸಿರುಗಟ್ಟಿ ಮಗು ಮೃತಪಟ್ಟಿದೆ ಎಂದು ಉಲ್ಲೇಖವಾಗಿತ್ತು. ಹೊಟ್ಟೆಗೆ ಗಂಭೀರ ಪೆಟ್ಟಿನಿಂದ ಅಳುತ್ತಿದ್ದ ಮಗುವಿನ ಮೂಗನ್ನು ಆರೋಪಿ ಭದ್ರವಾಗಿ ಹಿಡಿದುಕೊಂಡ ಕಾರಣಕ್ಕೆ ಉಸಿರುಗಟ್ಟಿದೆ. ಆಗ ಪ್ರಜ್ಞಾಹೀನಾಳಾದ ಮಗುವನ್ನು ಸೀಟಿಗೆ ತಳ್ಳಿದ್ದಾನೆ ಎಂದು ತಿಳಿದು ಬಂದಿದೆ.ಮರುಸೃಷ್ಟಿಯಲ್ಲಿ ತೋರಿಸಿದ ಮೋಹನ್:
ಇಂದಿರಾನಗರದ ಶಾಪಿಂಗ್ ಮಾಲ್ ಬಳಿಗೆ ಆರೋಪಿಯನ್ನು ಕರೆದೊಯ್ದು ಪೊಲೀಸರು ಹತ್ಯೆ ಕೃತ್ಯದ ಮರು ಸೃಷ್ಟಿ ನಡೆಸಿದ್ದರು. ಈ ಸನ್ನಿವೇಶ ಸೃಷ್ಠಿಗೆ ಮೃತ ಮಗುವಿನ ವಯಸ್ಸಿನ ಮಗುವನ್ನು ಪೊಲೀಸರು ಬಳಸಿದ್ದರು. ಆಗ ಹಲ್ಲೆ ಹಾಗೂ ಮೂಗು ಹಿಡಿದಿದ್ದನ್ನು ಆತ ತೋರಿಸಿದ್ದಾನೆ ಎಂದು ಮೂಲಗಳು ಹೇಳಿವೆ. ಈ ಕೊಲೆ ಪ್ರಕರಣ ಸಂಬಂಧ ಮೃತಳ ತಾಯಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಮೋಹನ್‌ನನ್ನು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಆರಂಭದಲ್ಲಿ ವಿಚಾರಣೆಗೆ ನಕರಾ ಮಾಡುತ್ತಿದ್ದ ಪ್ರಿಯಾಂಕ ಪೊಲೀಸರ ‘ತೀವ್ರ’ ವಿಚಾರಣೆಗೆ ತಣ್ಗಾಗಿದ್ದಾಳೆ ಎಂದು ತಿಳಿದು ಬಂದಿದೆ.
ತಾಯಿ ಬೈದರೂ ಬಿಡದ ಪ್ರೀತಿ:ತಮ್ಮ ಮಗಳ ಅನೈತಿಕ ಸಂಬಂಧ ವಿಚಾರ ತಿಳಿದು ಪ್ರಿಯಾಂಕ ತಾಯಿ ಹಾಗೂ ಸೋದರ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ತಮ್ಮ ಮಗಳನ್ನು ವಂಚಿಸಿ ಕರೆತಂದಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ಸಹ ಅವರು ದೂರು ಕೊಟ್ಟಿದ್ದರು. ಆಗ ‘ತಾನು ವಯಸ್ಕಳಿದ್ದೇನೆ. ನನ್ನ ಜೀವನದ ಬಗ್ಗೆ ತೀರ್ಮಾನಿಸುವ ಹಕ್ಕು ನನಗಿದೆ. ನಾನು ಸ್ವಇಚ್ಛೆಯಿಂದ ಮೋಹನ್ ಜತೆ ಸಹಬಾಳ್ವೆ ನಡೆಸುತ್ತಿದ್ದೇನೆ. ನನ್ನ ವೈಯಕ್ತಿಕ ಜೀವನವನ್ನು ಪ್ರಶ್ನಿಸುವ ಹಕ್ಕು ನಿಮಗಿಲ್ಲ ಎಂದು ತಾಯಿಗೆ ಪೊಲೀಸರ ಮುಂದೆಯೇ ಆಕೆ ಆಕ್ಷೇಪಿಸಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಗಲಾಟೆ ಬಳಿಕ ಮಗಳಿಂದ ತಾಯಿ ಹಾಗೂ ಸೋದರ ದೂರವಾಗಿದ್ದರು ಎನ್ನಲಾಗಿದೆ.
ದರ್ಶನ್ ಮಾದರಿಯಲ್ಲೇವೈಜ್ಞಾನಿಕ ತನಿಖೆಗೆ ಒತ್ತು
ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಲನಚಿತ್ರ ನಟ ದರ್ಶನ್ ಹಾಗೂ ಅವರ ತಂಡದ ವಿರುದ್ಧ ಪಶ್ಚಿಮ ವಿಭಾಗದ ಪೊಲೀಸರ ನಡೆಸಿದ್ದ ಮಾದರಿಯಲ್ಲೇ ವೆನ್ನಿಲಾ ಹತ್ಯೆ ಕೃತ್ಯದಲ್ಲೂ ವೈಜ್ಞಾನಿಕ ತನಿಖೆಗೆ ಪೊಲೀಸರು ಹೆಚ್ಚು ಒತ್ತು ಕೊಟ್ಟಿದ್ದಾರೆ. ಹತ್ಯೆ ಮುನ್ನ ಹಾಗೂ ಆನಂತರ ಆರೋಪಿಗಳು ಸುತ್ತಾಡಿದ ಪ್ರತಿ ಸ್ಥಳಗಳಲ್ಲೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೃತ್ಯ ನಡೆದ ದಿನದ ಆರೋಪಿಗಳು ಹಾಗೂ ಮಗು ಧರಿಸಿದ್ದ ಬಟ್ಟೆಗಳು ಹಾಗೂ ಪಾದರಕ್ಷೆ ಸೇರಿದಂತೆ ಇತರೆ ಸಾಂದರ್ಭಿಕ ಪುರಾವೆಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವೆನ್ನಿಲಾ ಹತ್ಯೆ ಪ್ರಕರಣದ ತನಿಖೆಗೆ ಬಾಣಸವಾಡಿ ಎಸಿಪಿ ಅನೂಷ ನೇತೃತ್ವದಲ್ಲಿ ವಿಶೇಷ ತಂಡವನ್ನು ಪೂರ್ವ ವಿಭಾಗದ ಡಿಸಿಪಿ ವಿಕ್ರಂ ಅಮಟೆ ರಚಿಸಿದ್ದಾರೆ. ಒಂದೊಂದು ತಂಡಕ್ಕೂ ಪ್ರತ್ಯೇಕ ಕೆಲಸವನ್ನು ಡಿಸಿಪಿ ನಿಯೋಜಿಸಿದ್ದಾರೆ. ಕೆಲವರು ವೈಜ್ಞಾನಿಕ ಸಾಕ್ಷ್ಯ ಕಲೆ ಹಾಕುತ್ತಿದ್ದರೆ, ಮತ್ತೆ ಕೆಲವರು ಮೃತಳ ಕುಟುಂಬದವರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.