ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಪತ್ತೆಗಾಗಿ ದೆಹಲಿ ಪೊಲೀಸರು ನೂತನ ಅಭಿಯಾನವನ್ನು ಆರಂಭಿಸಿದ್ದಾರೆ. ನಿಯಮ ಉಲ್ಲಂಘನೆಯ ಫೋಟೋಗಳನ್ನು ಸೆರೆಹಿಡಿದು, ಮೊಬೈಲ್ ಆ್ಯಪ್ ಮೂಲಕ ಪೊಲೀಸರಿಗೆ ಕಳುಹಿಸಿದರೆ ಮಾಸಿಕ 50 ಸಾವಿರ ರೂ. ಬಹುಮಾನ ನೀಡಲಾಗುವುದು.

ನವದೆಹಲಿ: ಸಂಚಾರ ನಿಯಮಗಳನ್ನು ಎಗ್ಗಿಲ್ಲದೆ ಉಲ್ಲಂಘಿಸುವವರ ಪತ್ತೆಗಾಗಿ ದೆಹಲಿ ಪೊಲೀಸರು ವಿನೂತನ ಅಭಿಯಾನ ಆರಂಭಿಸಿದ್ದಾರೆ. ನಿಯಮ ಉಲ್ಲಂಘನೆ ಫೋಟೋಗಳನ್ನು ಸೆರೆ ಹಿಡಿದು, ಮೊಬೈಲ್‌ ಆ್ಯಪ್‌ ಮೂಲಕ ಪೊಲೀಸರಿಗೆ ಕಳುಹಿಸಿದರೆ ಮಾಸಿಕ 50 ಸಾವಿರ ರು. ಬಹುಮಾನವನ್ನು ನೀಡುವುದಾಗಿ ಪ್ರಕಟಿಸಿದ್ದಾರೆ.

ಪ್ರತಿ ತಿಂಗಳೂ ನಾಲ್ಕು ಬಹುಮಾನಗಳು ಇರುತ್ತವೆ. ಅತಿ ಹೆಚ್ಚು ಸಂಚಾರ ನಿಯಮ ಉಲ್ಲಂಘನೆಯನ್ನು ಯಾರು ಪತ್ತೆ ಹಚ್ಚುತ್ತಾರೋ ಅವರಿಗೆ ಮೊದಲ ಬಹುಮಾನವಾಗಿ 50 ಸಾವಿರ ರು. ಸಿಗಲಿದೆ. 2ನೇ ಬಹುಮಾನವಾಗಿ 25000, 3ನೇ ಬಹುಮಾನವಾಗಿ 15000 ಹಾಗೂ ನಾಲ್ಕನೇ ಬಹುಮಾನವಾಗಿ 10 ಸಾವಿರ ರು. ದೊರೆಯಲಿದೆ.

ದೆಹಲಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಅದಕ್ಕೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ. ಈ ಹಿಂದೆ ದೆಹಲಿ ಪೊಲೀಸರು ನಿಯಮ ಉಲ್ಲಂಘನೆ ಮಾಹಿತಿಯನ್ನು ಜನರಿಂದ ಸ್ವೀಕರಿಸಲು ಟ್ರಾಫಿಕ್‌ ಸೆಂಟಿನೆಲ್‌ ಎಂಬ ಆ್ಯಪ್‌ ಬಳಸುತ್ತಿದ್ದರು. ಆ ಆ್ಯಪ್‌ ಹೆಸರನ್ನು ಟ್ರಾಫಿಕ್‌ ಪ್ರಹರಿ ಎಂದು ಬದಲಿಸಲು ಉಪರಾಜ್ಯಪಾಲರು ಸೂಚನೆ ನೀಡಿದ್ದರು. ಅದರಂತೆ ಸೆ.1ರಿಂದ ಬಹುಮಾನ ನೀಡುವ ಅಭಿಯಾನ ಆರಂಭವಾಗಿದೆ.

ನಾಗರಿಕರು ಟ್ರಾಫಿಕ್‌ ಪ್ರಹರಿ ಎಂಬ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಫೋಟೋ ಸಮೇತ ನಿಖರ ಮಾಹಿತಿ ನೀಡಬೇಕಾಗುತ್ತದೆ. ಹೆಚ್ಚು ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುತ್ತದೆ.