ಸಾರಾಂಶ
ಸುಮಾರು ಮೂರೂವರೆ ಸಾವಿರ ವರ್ಷ ಇತಿಹಾಸ ಹೊಂದಿರುವ ಐತಿಹಾಸಿಕ ಸ್ಥಳ ಹಿರೇಬೆಣಕಲ್ ಶಿಲಾಸಮಾಧಿಗಳ ಪಕ್ಕದಲ್ಲಿಯೇ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಜಿಲ್ಲಾಡಳಿತ ಭೂಮಿ ಗುರುತಿಸಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
ರಾಮಮೂರ್ತಿ ನವಲಿ
ಗಂಗಾವತಿ : ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಗುರುತಿಸಿದ್ದ ಕರ್ನಾಟಕದ ಏಳು ಅದ್ಭುತಗಳಲ್ಲಿ ಮೊದಲ ಸ್ಥಾನ ಗಳಿಸಿದ, ಸುಮಾರು ಮೂರೂವರೆ ಸಾವಿರ ವರ್ಷ ಇತಿಹಾಸ ಹೊಂದಿರುವ ಐತಿಹಾಸಿಕ ಸ್ಥಳ ಹಿರೇಬೆಣಕಲ್ ಶಿಲಾಸಮಾಧಿಗಳ ಪಕ್ಕದಲ್ಲಿಯೇ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಜಿಲ್ಲಾಡಳಿತ ಭೂಮಿ ಗುರುತಿಸಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
ಈಗ ಜಿಲ್ಲಾಡಳಿತ ಚಿಕ್ಕಬೆಣಕಲ್ ಎಂಬಲ್ಲಿ ಅಣು ವಿದ್ಯುತ್ ಸ್ಥಾವರಕ್ಕೆ ಜಾಗ ಗುರುತಿಸಿದೆ. ಈ ಸ್ಥಳ ಇತಿಹಾಸವನ್ನು ಸಾರಿ ಹೇಳುವ ಹಿರೇಬೆಣಕಲ್ ಮೋರೇರ ತಟ್ಟೆಗಳು ಇರುವ ಸ್ಥಳದಿಂದ ಕೇವಲ 3-4 ಕಿ.ಮೀ. ಅಂತರದಲ್ಲಿದೆ. ಕನ್ನಡಪ್ರಭ- ಏಷ್ಯಾನೆಟ್ ಸುವರ್ಣ ನ್ಯೂಸ್ ಅಭಿಯಾನದ ವೇಳೆ ರಾಜ್ಯದ ನೂರಾರು ಸ್ಥಳಗಳನ್ನು ತಜ್ಞರು ಪರಿಶೀಲಿಸಿ ರಾಜ್ಯದ ಏಳು ಅದ್ಭುತಗಳಲ್ಲಿ ಹಿರೇಬೆಣಕಲ್‌ಗೆ ಮೊದಲ ಸ್ಥಾನ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಏಳು ಅದ್ಭುತಗಳ ಘೋಷಣಾ ಕಾರ್ಯಕ್ರಮದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಕೂಡ ಭಾಗವಹಿಸಿದ್ದರು. ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಜಿಲ್ಲೆಯಲ್ಲಿ ಭೂಮಿ ಹುಡುಕಾಟ ನಡೆಸಿದ್ದ ಜಿಲ್ಲಾಡಳಿತ ವಿವಿಧೆಡೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈಗ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್- ಎಡೇಹೆಳ್ಳಿ ಮಾರ್ಗದ ಬಳಿ 1200 ಎಕರೆ ಭೂಮಿಯನ್ನು ಗುರುತಿಸಿದೆ. ಜಿಲ್ಲಾಡಳಿತ ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರರಿಗೆ 1200 ಎಕರೆ ಭೂಮಿ ಗುರುತಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಗಂಗಾವತಿ ಸಮೀಪದ ಚಿಕ್ಕ ಬೆಣಕಲ್- ಎಡೇಹಳ್ಳಿ ಮಾರ್ಗದ ಬೆಟ್ಟದ ಸನಿಹದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಸರ್ವೇ ನಂ. 35ರಲ್ಲಿ ಒಟ್ಟು 2 ಸಾವಿರ ಎಕರೆ ಪ್ರದೇಶದ ಪೈಕಿ 1200 ಎಕರೆ ಭೂಮಿಯನ್ನು ಕಂದಾಯ ಇಲಾಖೆ ಗುರುತಿಸಿದೆ. ಅಣು ಸ್ಥಾವರ ಸ್ಥಾಪನೆಗೆ ಈ ಜಾಗ ಗುರುತಿಸಿರುವುದು ರಾಜಕೀಯ ನಾಯಕರು, ಇತಿಹಾಸಕಾರರ ಕೆಂಗಣ್ಣಿಗೂ ಗುರಿಯಾಗಿದೆ.
ಸರ್ವೇ ಕಾರ್ಯ:
ಜಿಲ್ಲಾಡಳಿತ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ತ್ವರಿತಗತಿಯಲ್ಲಿ ಪ್ರಕ್ರಿಯೆ ನಡೆಸಬೇಕೆಂಬ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಮತ್ತು ಸರ್ವೇ ಇಲಾಖೆಯ ಅಧಿಕಾರಗಳು ಮೂರು ದಿನಗಳ ಕಾಲ ಸರ್ವೇ ನಡೆಸಿದ್ದಾರೆ. ಸರ್ವೆ ಮಾಡಿದ ದಾಖಲೆಗಳನ್ನು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಜಿಲ್ಲೆಯ ಯಾವ ತಾಲೂಕು ವ್ಯಾಪ್ತಿಯಲ್ಲೂ 1200 ಎಕರೆ ಸಮತೋಲನ ಭೂಮಿ ಲಭ್ಯವಾಗದ ಕಾರಣ ಚಿಕ್ಕಬೆಣಕಲ್ ಗ್ರಾಮದ ಹತ್ತಿರ ಭೂಮಿ ಸರ್ವೇ ಮಾಡಲಾಗಿದೆ. ಜಿಲ್ಲೆಯ ಅರಿಸಿನಕೇರಿ ಸೇರಿದಂತೆ ಕೆಲವು ಗ್ರಾಮಗಳ ರೈತರು ವಿರೋಧ ವ್ಯಕ್ತಪಡಿಸಿದ್ದರಿಂದ ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡಿರುವ ಚಿಕ್ಕಬೆಣಕಲ್- ಎಡೆಹಳ್ಳಿ ಮಾರ್ಗದ ಬಳಿ ತ್ವರಿತಗತಿಯಲ್ಲಿ ಸರ್ವೇ ಮಾಡಲಾಗಿದೆ. 1200 ಎಕರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದರೂ ಅವಶ್ಯಕತೆ ಬಿದ್ದರೆ ಮುಕ್ಕುಂಪ, ಎಡೆಹಳ್ಳಿ, ಚಿಕ್ಕಬೆಣಕಲ್, ಹಿರೇಬೆಣಕಲ್, ಲಿಂಗದಳ್ಳಿ, ಹೇಮಗುಡ್ಡ ಸೇರಿದಂತೆ 10 ಕಿ.ಮೀ. ವ್ಯಾಪ್ತಿಗೆ ಬರುವ ಗ್ರಾಮಗಳ ರೈತರ ಭೂಮಿಯನ್ನೂ ಅಣುಸ್ಥಾವರ ಸ್ಥಾಪನೆಗೆ ಪಡೆದುಕೊಳ್ಳಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಬೃಹತ್ ಶಿಲಾತಾಣ
ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವನ್ನು ತನ್ನೊಡಲಲ್ಲಿ ಹಿಡಿದುಕೊಂಡಿರುವ ಹಿರೇಬೆಣಕಲ್ ಬೃಹತ್ ಶಿಲಾತಾಣವಾಗಿದೆ. ಇದನ್ನು ಮೋರೇರ ತಟ್ಟೆಗಳು ಎಂದು ಸಹ ಕರೆಯಲಾಗುತ್ತದೆ. ಇದು ಇಂಥ ಶಿಲಾತಾಣಗಳನ್ನು ಹೊಂದಿರುವ ವಿಶ್ವದ ಬೆರಳೆಣಿಕೆಯ ಸ್ಥಳಗಳಲ್ಲಿ ಹಿರೇಬೆಣಕಲ್ ಒಂದಾಗಿದೆ. ಇದು ಕ್ರಿ.ಪೂ. 800ರಿಂದ ಕ್ರಿ.ಪೂ. 200 ಕಾಲದ್ದು ಎಂದು ಗುರುತಿಸಲಾಗಿದೆ. ಇವು ಸಮಾಧಿಗಳಾಗಿವೆ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ತಾತ್ಕಾಲಿಕ ಸ್ಥಾನ ಸಹ ಪಡೆದಿದ್ದು, ಶೀಘ್ರದಲ್ಲಿಯೇ ಶಾಶ್ವತ ಪಟ್ಟಿಗೆ ಸೇರಲಿದೆ ಎನ್ನಲಾಗುತ್ತಿದೆ. 400ಕ್ಕೂ ಹೆಚ್ಚು ಶಿಲಾತಾಣಗಳನ್ನು ಹೊಂದಿರುವ ಏಕೈಕ ಸ್ಥಳವಾಗಿದೆ.