ಇಂದಿನಿಂದ ಕೆಎಸ್‌ಸಿಎ ಮಹಾರಾಣಿ ಟ್ರೋಫಿ ಟಿ20

| N/A | Published : Aug 04 2025, 12:15 AM IST / Updated: Aug 04 2025, 07:15 AM IST

ಸಾರಾಂಶ

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸುತ್ತಿರುವ ಚೊಚ್ಚಲ ಆವೃತ್ತಿಯ ಮಹಾರಾಣಿ ಟ್ರೋಫಿ ಟಿ20 ಟೂರ್ನಿಗೆ ಸೋಮವಾರ ಚಾಲನೆ ಸಿಗಲಿದೆ. 

  ಬೆಂಗಳೂರು :  ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸುತ್ತಿರುವ ಚೊಚ್ಚಲ ಆವೃತ್ತಿಯ ಮಹಾರಾಣಿ ಟ್ರೋಫಿ ಟಿ20 ಟೂರ್ನಿಗೆ ಸೋಮವಾರ ಚಾಲನೆ ಸಿಗಲಿದೆ. ಮಹಾರಾಜ ಟ್ರೋಫಿಯಲ್ಲಿ ಆಡುವ ಫ್ರಾಂಚೈಸಿಗಳ ಪೈಕಿ 5 ಫ್ರಾಂಚೈಸಿಗಳು ಮಹಿಳಾ ತಂಡಗಳನ್ನು ಖರೀದಿಸಿದ್ದು, ಈಗಾಗಲೇ ಹರಾಜು ಪ್ರಕ್ರಿಯೆ ಮೂಲಕ ತಂಡಗಳನ್ನು ಕಟ್ಟಿಕೊಂಡಿವೆ.

ಬೆಂಗಳೂರು ಬ್ಲಾಸ್ಟರ್ಸ್‌, ಮೈಸೂರು ವಾರಿಯರ್ಸ್‌, ಮಂಗಳೂರು ಡ್ರ್ಯಾಗನ್ಸ್‌, ಹುಬ್ಬಳ್ಳಿ ಟೈಗರ್ಸ್‌ ಹಾಗೂ ಶಿವಮೊಗ್ಗ ಲಯನ್ಸ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಟೂರ್ನಿಯಲ್ಲಿ ಫೈನಲ್‌ ಸೇರಿ ಒಟ್ಟು 13 ಪಂದ್ಯಗಳು ನಡೆಯಲಿವೆ. ಆ.10ಕ್ಕೆ ಫೈನಲ್‌ ಪಂದ್ಯ ನಿಗದಿಯಾಗಿದೆ.

ಭಾರತ, ಮಹಿಳಾ ಐಪಿಎಲ್‌ನಲ್ಲಿ ಆಡಿರುವ ಅನುಭವವಿರುವ ಕೆಲವರು ಸೇರಿ ಹಲವು ಯುವ ಹಾಗೂ ಪ್ರತಿಭಾನ್ವಿತ ಆಟಗಾರ್ತಿಯರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಟೂರ್ನಿ ಮಾದರಿ ಹೇಗೆ?

ರೌಂಡ್‌ ರಾಬಿನ್‌ ಮಾದರಿಯಲ್ಲಿ ಲೀಗ್‌ ಹಂತ ನಡೆಯಲಿದ್ದು, ಪ್ರತಿ ತಂಡವು ಉಳಿದ ನಾಲ್ಕು ತಂಡಗಳ ವಿರುದ್ಧ ತಲಾ ಒಮ್ಮೆ ಆಡಲಿವೆ. ಅಗ್ರ-4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿದ್ದು, ಕೊನೆ ಸ್ಥಾನ ಪಡೆಯುವ ತಂಡ ಹೊರಬೀಳಲಿದೆ. ಸೆಮಿಫೈನಲ್‌ಗಳಲ್ಲಿ ಗೆಲ್ಲುವ ತಂಡ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ. ಆಲೂರು ಕ್ರೀಡಾಂಗಣ ಆತಿಥ್ಯ

10 ಲೀಗ್‌ ಹಂತದ ಪಂದ್ಯಗಳು, 2 ಸೆಮಿಫೈನಲ್‌ ಪಂದ್ಯಗಳು ಬೆಂಗಳೂರು ಹೊರವಲಯದ ಆಲೂರು ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರತಿ ದಿನ 2 ಪಂದ್ಯ ನಡೆಯಲಿವೆ. ಮೊದಲ ಪಂದ್ಯ ಬೆಳಗ್ಗೆ 9.45ಕ್ಕೆ, 2ನೇ ಪಂದ್ಯ ಮಧ್ಯಾಹ್ನ 1.45ಕ್ಕೆ ಆರಂಭಗೊಳ್ಳಲಿದೆ. ಸೋಮವಾರ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ-ಶಿವಮೊಗ್ಗ, 2ನೇ ಪಂದ್ಯದಲ್ಲಿ ಮಂಗಳೂರು-ಬೆಂಗಳೂರು ತಂಡಗಳು ಸೆಣಸಲಿವೆ. ಚಿನ್ನಸ್ವಾಮಿಯಲ್ಲಿ ನಡೆಯುತ್ತಾ ಫೈನಲ್‌?

ಆ.10ರಂದು ಫೈನಲ್‌ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದೆ. ಆದರೆ ಮಹಾರಾಜ ಟ್ರೋಫಿಗೆ ಇನ್ನೂ ಅನುಮತಿ ನೀಡದ ಬೆಂಗಳೂರು ಪೊಲೀಸರು, ಮಹಾರಾಣಿ ಟ್ರೋಫಿ ಫೈನಲ್‌ಗೆ ಅನುಮತಿ ಸೂಚಿಸುತ್ತಾರಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಸಾಧ್ಯವಾಗದೆ ಇದ್ದರೆ, ಆ ಪಂದ್ಯವೂ ಆಲೂರು ಕ್ರೀಡಾಂಗಣದಲ್ಲೇ ನಡೆಯಲಿದೆ. ಫೈನಲ್‌ ಸಂಜೆ 6 ಗಂಟೆಗೆ ಶುರುವಾಗಲಿದೆ.

Read more Articles on