ರಾಂಚಿಯಲ್ಲಿ ಇಂಡಿಯಾ ಮಹಾ ಶಕ್ತಿ ಪ್ರದರ್ಶನ

| Published : Apr 22 2024, 02:01 AM IST / Updated: Apr 22 2024, 05:26 AM IST

ಸಾರಾಂಶ

ದೆಹಲಿಯಲ್ಲಿ ಅರವಿಂದ್‌ ಬಂಧನ ಖಂಡಿಸಿ ಶಕ್ತಿ ಪ್ರದರ್ಶನ ಮಾಡಿದ್ದ ಇಂಡಿಯಾ ಕೂಟ, ಈಗ ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ತವರಿನಲ್ಲೂ ಒಗ್ಗಟ್ಟು ಪ್ರದರ್ಶಿಸಿತು. 28 ವಿಪಕ್ಷಗಳ ನಾಯಕರು ಪಾಲ್ಗೊಂಡಿದ್ದರು

ರಾಂಚಿ: ಲೋಕಸಭಾ ಚುನಾವಣೆ ನಡೆಯುತ್ತಿರುವ ನಡುವೆಯೇ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಜಾರ್ಖಂಡ್‌ ರಾಜಧಾನಿ ರಾಂಚಿಯ ಪ್ರಭಾತ್ ತಾರಾ ಕ್ರೀಡಾಂಗಣದಲ್ಲಿ ಉಲ್ಗುಲಾನ್‌ ನ್ಯಾಯ ರ್‍ಯಾಲಿ ಎಂಬ ಹೆಸರಿನಲ್ಲಿ ಬೃಹತ್‌ ಶಕ್ತಿ ಪ್ರದರ್ಶನ ನಡೆಸಿ, ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಾಗೂ ಜಾರ್ಖಂಡ್‌ ಹಿಂದಿನ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಬಂಧನವನ್ನು ಖಂಡಿಸಲಾಯಿತು.

ಇತ್ತೀಚೆಗಷ್ಟೇ ದೆಹಲಿಯಲ್ಲಿ ಅರವಿಂದ್‌ ಬಂಧನ ಖಂಡಿಸಿ ಶಕ್ತಿ ಪ್ರದರ್ಶನ ಮಾಡಿದ್ದ ಇಂಡಿಯಾ ಕೂಟ, ಈಗ ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ತವರಿನಲ್ಲೂ ಒಗ್ಗಟ್ಟು ಪ್ರದರ್ಶಿಸಿತು. 28 ವಿಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಹೇಮಂತ್‌ ಮುಂದೆ ಇಂಡಿಯಾ ಕೂಟವನ್ನು ಬಿಡುವುದು ಮತ್ತು ಜೈಲಿಗೆ ಹೋಗುವ ಎರಡು ಆಯ್ಕೆಗಳನ್ನು ನೀಡಿದಾಗ ಜೈಲಿಗೆ ಹೋಗುವ ಮೂಲಕ ದಿಟ್ಟತನ ಮೆರೆದಿದ್ದಾರೆ ಹಾಗೂ ತಾವು ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ತಲೆ ಬಾಗುವುದಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಬಿಜೆಪಿ ಈ ರೀತಿ ಬುಡಕಟ್ಟು ಸಮುದಾಯಕ್ಕೆ ಸೇರಿದ ನಾಯಕರನ್ನು ಬೆದರಿಸುವ ಕೆಲಸ ಮಾಡುತ್ತಿದೆ. ಇದೇ ರೀತಿಯಲ್ಲಿ ರಾಷ್ಟ್ರಪತಿಯನ್ನೂ ಸಹ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂದು ರಾಮಮಂದಿರಕ್ಕೆ ಆಹ್ವಾನಿಸಿರಲಿಲ್ಲ. ಬಿಜೆಪಿ ಇದೇ ರೀತಿಯಲ್ಲಿ ಬುಡಕಟ್ಟು ಸಮುದಾಯದವರನ್ನು ಅಸ್ಪೃಶ್ಯರಂತೆ ಕಾಣುವುದನ್ನು ಮುಂದುವರಿಸಿದರೆ ಲೋಕಸಭಾ ಚುನಾವಣೆಯಲ್ಲಿ ಕೇವಲ 150-180 ಸೀಟಿಗೆ ಸೀಮಿತವಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಬಂಧಿತ ಹೇಮಂತ್‌ ಸೊರೇನ್‌ ಪತ್ನಿ ಕಲ್ಪನಾ ಅವರು ತಮ್ಮ ಪತಿ ಜೈಲಿನಿಂದಲೇ ಕಳುಹಿಸಿರುವ ಸಂದೇಶವನ್ನು ವೇದಿಕೆಯಲ್ಲಿ ವಾಚಿಸಿ, ‘ಬಿಜೆಪಿಯು ಕೇಂದ್ರೀಯ ತನಿಖಾ ಸಂಸ್ಥೆಗಳ ಸಹಾಯದಿಂದ ಪ್ರಜಾಪ್ರಭುತ್ವವನ್ನು ದಮನಗೊಳಿಸಲು ಪ್ರಯತ್ನಿಸುತ್ತಿದ್ದು, ಅದಕ್ಕೆ ಅವಕಾಶ ನೀಡಬಾರದು’ ಎಂದರು.

ಜೈಲಲ್ಲೇ ಕೇಜ್ರಿ ಹತ್ಯೆಗೆ ಸಂಚು- ಪತ್ನಿ

ಸಮಾವೇಶದಲ್ಲಿ ಭಾಗಿ ಆಗಿದ್ದ ಕೇಜ್ರಿವಾಲ್‌ ಪತ್ನಿ ಸುನಿತಾ ಕೇಜ್ರಿವಾಲ್‌ ಮಾತನಾಡಿ, ‘ನನ್ನ ಪತಿ ಮಧುಮೇಹದಿಂದ ಬಳಲುತ್ತಿದ್ದಾರೆ. ಅವರು 12 ವರ್ಷದಿಂದ ಇನ್ಸುಲಿನ್‌ ಪಡೆಯುತ್ತಿದ್ದಾರೆ. ನಿತ್ಯವೂ ಅವರಿಗೆ 50 ಯುನಿಟ್ಸ್‌ನಷ್ಟು ಇನ್ಸುಲಿನ್‌ ಬೇಕು. ಆದರೆ ಅವರಿಗೆ ಜೈಲಿನಲ್ಲಿ ಇನ್ಸುಲಿನ್ ನಿರಾಕರಿಸಲಾಗುತ್ತಿದೆ. ಈ ಮೂಲಕ ಜೈಲಿನೊಳಗೇ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ’ ಎಂದು ಆರೋಪಿಸಿದರು.

ಜೊತೆಗೆ, ‘ಕೇಜ್ರಿವಾಲ್‌ ತಿನ್ನುವ ಪ್ರತಿ ಹೊತ್ತಿನ ಆಹಾರವನ್ನೂ ಜೈಲಿನ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅವರ ಆಹಾರದ ಮೇಲೆ ಕ್ಯಾಮೆರಾ ಅಳವಡಿಸಲಾಗಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ’ ಎಂದು ಕಿಡಿಕಾರಿದರು.

ಇದೇ ವೇಳೆ ಪ್ರಸಕ್ತ ಆಡಳಿತ ಸರ್ವಾಧಿಕಾರ ನಡೆಸುತ್ತಿದೆ. ಕೇಜ್ರಿವಾಲ್‌ ಮತ್ತು ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೊರೇನ್‌ ತಪ್ಪಿತಸ್ಥರೆಂದು ಸಾಬೀತಾಗದ ಹೊರತಾಗಿಯೂ ಅವರನ್ನು ಜೈಲಿಗೆ ಹಾಕಲಾಗಿದೆ. ಇದು ಸರ್ವಾಧಿಕಾರವಲ್ಲದೇ ಮತ್ತೇನು ಎಂದು ಸುನಿತಾ ಪ್ರಶ್ನಿಸಿದರು.